ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್; ಹೆಚ್ಚಿನ ದರ ವಸೂಲಿ ಆರೋಪ

ವೇತನ ಹೆಚ್ಚಳಕ್ಕಾಗಿ ಸಾರಿಗೆ ಸಿಬ್ಬಂದಿ ಮುಷ್ಕರ; ಪ್ರಯಾಣಿಕರ ಪರದಾಟ
Last Updated 7 ಏಪ್ರಿಲ್ 2021, 16:45 IST
ಅಕ್ಷರ ಗಾತ್ರ

ಕಲಬುರ್ಗಿ: 6ನೇ ವೇತನ ಆಯೋಗದ ಶಿಫಾರಸುಗಳನ್ನು ಸಾರಿಗೆ ಸಂಸ್ಥೆ ಸಿಬ್ಬಂದಿಗೂ ಅನ್ವಯಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಾರಿಗೆ ಸಂಸ್ಥೆಯ ನೌಕರರ ಒಕ್ಕೂಟ ಕರೆ ನೀಡಿರುವ ಮುಷ್ಕರದ ಅಂಗವಾಗಿ ಬುಧವಾರ ಜಿಲ್ಲೆಯಲ್ಲಿ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯಲಿಲ್ಲ. ಮುಷ್ಕರದ ಮಾಹಿತಿ ಇಲ್ಲದೇ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಪರದಾಡಿದರು.

ಪ್ರಯಾಣಿಕರ ಪರದಾಟವನ್ನು ತಪ್ಪಿಸಲು ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ ಖಾಸಗಿ ಬಸ್‌ಗಳ ಸೇವೆಯನ್ನು ಕೇಂದ್ರ ಬಸ್‌ ನಿಲ್ದಾಣದಲ್ಲಿ ನಿಯೋಜಿಸಿತು. ವಿಜಯಪುರ, ಹುಮನಾಬಾದ್–ಬೀದರ್, ಸುರಪುರ, ಶಹಾಪುರ ಮಾರ್ಗಗಳಲ್ಲಿ ಖಾಸಗಿ ಸ್ಲೀಪರ್, ಕ್ರೂಸರ್ ಜೀಪ್ ಹಾಗೂ ಟೆಂಪೊ ಟ್ರಾವೆಲ್ಸ್‌ಗಳು ಸಂಚರಿಸಿದವು.

ಆದರೆ, ಆಯಾ ಊರಿಗೆ ಸಾರಿಗೆ ಸಂಸ್ಥೆಯು ನಿಗದಿಪಡಿಸಿದ ದರಗಳನ್ನು ಪಡೆಯುತ್ತಿಲ್ಲ ಎಂಬ ದೂರುಗಳೂ ಕೇಳಿ ಬಂದವು. ಆಗ ಸ್ಥಳಕ್ಕೆ ಬಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿಗದಿಪಡಿಸಿದ ದರವನ್ನೇ ಪಡೆಯುವಂತೆ ತಾಕೀತು ಮಾಡಿದರು. ಖಾಸಗಿ ಬಸ್‌ನ ಮಾಲೀಕರು ಹುಮನಾಬಾದ್‌ಗೆ ಕೆಲ ಪ್ರಯಾಣಿಕರಿಂದ ₹ 60 ಪಡೆದರೆ, ಮತ್ತೆ ಕೆಲವರಿಂದ ₹ 80 ಪಡೆದರು. ಆದರೆ, ವಿಜಯಪುರಕ್ಕೆ ನಿಗದಿತ ದರವನ್ನೇ ಪಡೆದರು.

ಕೆಲ ಪ್ರಯಾಣಿಕರು ತಮ್ಮ ಮನೆಗಳಿಗೆ ಕರೆ ಮಾಡಿ ವಾಹನಗಳನ್ನು ತರಿಸಿಕೊಂಡು ತೆರಳಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಸಾರಿಗೆ ಸಂಸ್ಥೆ ನೌಕರರು ಕೇಂದ್ರ ಬಸ್ ನಿಲ್ದಾಣದಲ್ಲಿ ಮುಷ್ಕರ ನಡೆಸಬಹುದು ಹಾಗೂ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಖಾಸಗಿ ಬಸ್‌ಗಳಿಗೆ ಅಡ್ಡಿ ಮಾಡಬಹುದು ಎಂಬ ಕಾರಣಕ್ಕೆ ಬಸ್ ನಿಲ್ದಾಣ, ಬಸ್ ಡಿಪೊಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಶೋಕ ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಪಂಡಿತ ಸಗರ, ಸ್ಟೇಶನ್ ಬಜಾರ್ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಸಿದ್ದರಾಮೇಶ ಗಡೇದ ಅವರು ಬಂದೋಬಸ್ತ್ ನೇತೃತ್ವ ವಹಿಸಿದ್ದರು.

ನಗರ ಸಾರಿಗೆ ಸಂಚಾರವೂ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಉದ್ಯೋಗದ ನಿಮಿತ್ತ ವಿವಿಧೆಡೆ ತೆರಳಬೇಕಿರುವ ನೌಕರರು ಆಟೊಗಳನ್ನು ನೆಚ್ಚಿಕೊಳ್ಳಬೇಕಾಯಿತು. ಬಸ್ ಸೌಲಭ್ಯ ಇಲ್ಲದ್ದರಿಂದ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ.

270 ರೂಟ್‌ಗಳು ರದ್ದು: ಕಲಬುರ್ಗಿ ವಿಭಾಗ–1ರಿಂದ ವಿವಿಧೆಡೆ ತೆರಳಬೇಕಿದ್ದ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ 270 ರೂಟ್‌ಗಳಲ್ಲಿ ಬಸ್ ಕಾರ್ಯಾಚರಣೆ ರದ್ದುಗೊಂಡಿತು. ಇದರಿಂದಾಗಿ ₹ 45 ಲಕ್ಷ ವರಮಾನ ನಷ್ಟವಾಗಿದೆ ಎಂದು ಕಲಬುರ್ಗಿ ವಿಭಾಗ–1ರ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚುವರಿ ಬಸ್‌ ಓಡಿಸಲು ಮನವಿ: ಖಾಸಗಿ ಬಸ್‌ ಮಾಲೀಕರು ಅಂತರರಾಜ್ಯ ಸೇವೆ ಒದಗಿಸಲು ಹಿಂದೇಟು ಹಾಕುತ್ತಿರುವುದರಿಂದ ಇಲ್ಲಿಂದ ತೆಲಂಗಾಣದ ಹೈದರಾಬಾದ್‌ಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಅದರಂತೆ ಐದು ಬಸ್‌ಗಳನ್ನು ಹೆಚ್ಚುವರಿಯಾಗಿ ಓಡಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

2800 ಖಾಸಗಿ ವಾಹನ ಸೇವೆಗೆ

ಜಿಲ್ಲೆಯಾದ್ಯಂತ 2800ಕ್ಕೂ ಅಧಿಕ ಖಾಸಗಿ ವಾಹನಗಳನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿದ್ದು, ಅವುಗಳಿಗೆ ಇದೇ ಮೊದಲ ಬಾರಿಗೆ ಬಸ್‌ ನಿಲ್ದಾಣಗಳಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ. ಮುಷ್ಕರ ಮುಂದುವರಿದರೆ ಶಾಲಾ, ಕಾಲೇಜು ಬಸ್‌ಗಳನ್ನೂ ಸೇವೆಗೆ ಕರೆತರಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT