ಶನಿವಾರ, ಸೆಪ್ಟೆಂಬರ್ 18, 2021
30 °C

ಕಮಲಾಪುರ: ‘ಕ್ವಿಟ್ ಇಂಡಿಯಾ ಶೈಲಿಯಲ್ಲಿ ಚಳವಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಬ್ರಿಟಿಷರ ವಿರುದ್ಧ ನಡೆದಿದ್ದ ‘ಭಾರತ ಬಿಟ್ಟು ತೊಲಗಿ’ ಚಳವಳಿ ಮಾದರಿಯಲ್ಲಿ ಕಾರ್ಪೊರೇಟ್‌ ಕಂಪನಿಗಳ ವಿರುದ್ಧ ಅಂತಹದ್ದೆ ಆಂದೋಲನ ನಡೆಸಬೇಕಿದೆ ಎಂದು ಪ್ರಾಂತ ರೈತ ಸಂಘದ ಮುಖಂಡ ಸುನೀಲ ಮಾನಪಾಡೆ ಅಭಿಪ್ರಾಯಪಟ್ಟರು.

ಪ್ರಾಂತ ರೈತ ಸಂಘ, ದಲಿತ ಹಕ್ಕುಗಳ ಸಮಿತಿ, ಸೆಂಟರ್‌ ಆಫ್‌ ಟ್ರೇಡ್‌ ಯೂನಿಯನ್‌, ಕೃಷಿ ಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘ ಮತ್ತು ಗ್ರಾಮ ಪಂಚಾಯಿತಿ ನೌಕರರ ಸಂಘ ಸೋಮವಾರ ತಹಶೀಲ್‌ ಕಚೇರಿ ಎದುರು ಆಯೋಜಿಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಸಾಂಸ್ಥಿಕ ಸಂಸ್ಥೆಗಳು ತಮ್ಮ ಖಜಾನೆ ತುಂಬಿಕೊಳ್ಳುತ್ತಿವೆ. ಬಿಜೆಪಿ ಸರ್ಕಾರ ಬ್ರಿಟಿಷ್ ಕಾಲದ ನೀತಿಗಳನ್ನು ಅನುಸರಿಸುತ್ತಿದೆ. ಇದರಿಂದ ರೈತರು, ಕೂಲಿ ಕಾರ್ಮಿಕರು, ವರ್ತಕರು ಬೀದಿ ಪಾಲಾಗಿದ್ದಾರೆ. ನೂತನ ಕೃಷಿ ಕಾಯ್ದೆ ಹಾಗೂ ವಿದ್ಯುತ್‌ ತಿದ್ದುಪಡಿ ಮಸೂದೆ ರದ್ದುಪಡಿಸಬೇಕು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ  ಲಭ್ಯವಾಗಿ, ಋಣ ಮುಕ್ತ ಕಾಯ್ದೆ ಅಂಗಿಕರಿಸಬೇಕು ಎಂದು ಒತ್ತಾಯಿಸಿದರು.

ಭೂರಹಿತ ಕೃಷಿಕರಿಗೆ ಜಮೀನು ಹಾಗೂ ನಿವೇಶನ ಇಲ್ಲದವರಿಗೆ ಮನೆಗಳನ್ನ ನೀಡಬೇಕು. ಭೂಸುಧಾರಣೆ, ಎಪಿಎಂಸಿ, ಗೋಹತ್ಯೆ ನಿಷೇಧ ಕಾಯ್ದೆಗಳು ಹಿಂಪಡೆಯಬೇಕು. ನಕಲಿ ಕಾರ್ಮಿಕರ ಕಾರ್ಡ್‌ಗಳ ಹಾವಳಿ ತಡೆಯಬೇಕು. ಗ್ರಾಮ ಪಂಚಾಯಿತಿ ನೌಕರರನ್ನು ಖಾಯಂಗೊಳಿಸಿ, ನರೇಗಾದಲ್ಲಿ ಜಾತಿ ಆಧಾರಿತ ತಾರತಮ್ಯದ ಸಲಹಾ ಪ್ರಸ್ತಾಪ ಹಿಂಪಡೆಯಬೇಕು ಎಂದು ಅವರು ಹೇಳಿದರು.

ಪ್ರತಿ ವ್ಯಕ್ತಿಗೆ 10 ಕೆ.ಜಿ ಪಡಿತರ ಒದಗಿಸಬೇಕು. ಆರೋಗ್ಯ ಕ್ಷೇತ್ರಕ್ಕೆ ಜಿಡಿಪಿಯ ಶೇ 6ರಷ್ಟು ಮೊತ್ತ ನಿಗದಿ ಪಡಿಸಬೇಕು. ಅಗತ್ಯ ರಕ್ಷಣಾ ಸೇವಾ ಸುಗ್ರೀವಾಜ್ಞೆ ಹಿಂಪಡೆದು, ಸಾರ್ವಜನಿಕರ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು ಎಂದರು.

ಮುಖಂಡರಾದ ವಿರೂಪಾಕ್ಷಿ ತಡಕಲ್‌, ಪಾಂಡುರಂಗ ಮಾವಿನ ಕರ್, ಜಯಶ್ರೀ, ಮಾರುತಿ ಮರಗುತ್ತಿ, ಜಗನ್ನಾಥ ಹೊಡಲ್‌, ಸುರೇಶ, ವೀರಭದ್ರಪ್ಪ ಕಲಬುರ್ಗಿ, ಕಸ್ತೂರಿಬಾಯಿ, ಯಶೋಧಾಬಾಯಿ, ಭೀಮಣ್ಣ ಅಂಬಲಗಿ, ರ್‍ಯಾವಪ್ಪ ವರನಾಳ, ಹಣಮಂತ ಚಂದ್ರನಗರ, ಖಾಜಾಮೈನೋದ್ದಿನ, ರೇವಣಸಿದ್ದಪ್ಪ, ಸುಭಾಶ ಕಲಮೂಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.