ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಬಿಲ್‌ ಬಾಕಿ; ಕಬ್ಬು ಬೆಳೆಗಾರರ ಧರಣಿ

ಎರಡು ವಾರದಲ್ಲಿ ₹ 8 ಕೋಟಿ ಕಬ್ಬಿನ ಹಣ ಬಾಕಿ ಬಿಲ್‌ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
Last Updated 2 ಆಗಸ್ಟ್ 2021, 16:48 IST
ಅಕ್ಷರ ಗಾತ್ರ

ಕಲಬುರ್ಗಿ: ಆಳಂದ ತಾಲ್ಲೂಕಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಹಾಗೂ ಯಾದಗಿರಿ ಕೋರ್‌ಗ್ರೀನ್‌ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಾದ ಬಾಕಿ ಹಣವನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ,ಸಹಕಾರ ಸಕ್ಕರೆ ಕಾರ್ಖಾನೆ ನಿಯಮಿತದ ನಿರ್ದೇಶಕ ಧರ್ಮರಾಜ ಸಾಹು, ಕಾಂಗ್ರೆಸ್‌ ಮುಖಂಡರಾದ ಬಿ.ಆರ್‌.ಪಾಟೀಲ, ಅಲ್ಲಮಪ್ರಭು ಪಾಟೀಲ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ರೈತರು, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಆಳಂದ ತಾಲ್ಲೂಕಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆರೈತರಿಗೆ ₹ 8 ಕೋಟಿ ಕಬ್ಬಿನ ಹಣ ಬಾಕಿ ಉಳಿಸಿಕೊಂಡಿದೆ. ಈ ಬಾಕಿ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು. ಪ್ರತಿ ಟನ್ ಕಬ್ಬಿಗೆ ₹ 2,300 ಪಾವತಿಸಬೇಕೆಂದು ಹೈಕೋರ್ಟ್ ಆದೇಶ ಇದೆ. ನ್ಯಾಯಾಲಯದ ಆದೇಶದಂತೆ ಇತರೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಹಣ ಪಾವತಿಸಿವೆ. ಆದರೆ, ಕಳೆದ ವರ್ಷ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಟನ್‌ಗೆ ಕೇವಲ ₹ 2,100 ಪಾವತಿಸಿದೆ. ಟನ್‌ಗೆ ₹ 200ರಂತೆ ಒಟ್ಟು ₹ 8 ಕೋಟಿ ಬಾಕಿ ಉಳಿಸಿಕೊಂಡಿದೆ. ಇದನ್ನು ಕೂಡಲೇ ನೀಡಬೇಕು ಎಂದುಧರ್ಮರಾಜ ಸಾಹು ಆಗ್ರಹಿಸಿದರು.

‘ಹಂಗಾಮು ಆರಂಭಕ್ಕೂ ಮುನ್ನವೇ ಕಲಬುರ್ಗಿ ಜಿಲ್ಲಾಧಿಕಾರಿ, ಕಾರ್ಖಾನೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ನಡೆಸಿದ್ದರು. ಆಗ ನೆರೆಯ ಕಾರ್ಖಾನೆಗಳು ನೀಡುವಷ್ಟೇ ದರವನ್ನು ತಾವೂ ನೀಡುವುದಾಗಿ ಆಳಂದ ಕಾರ್ಖಾನೆ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಉಳಿದೆಲ್ಲ ಕಾರ್ಖಾನೆಗಳು ₹ 2,300 ದರ ನೀಡಿವೆ. ಆದರೆ, ಎನ್‌ಎಸ್‌ಎಲ್‌ ಮಾತ್ರ ₹ 2,100 ನೀಡಿದೆ. ಹೆಚ್ಚುವರಿ ಹಣ ನೀಡುವಂತೆ ವರ್ಷದಿಂದ ಪ್ರತಿಭಟನೆ ನಡೆಸಿದರೂ ರೈತರ ಕೂಗಿಗೆ ಬೆಲೆ ಕೊಟ್ಟಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯೂ ಗಮನ ಹರಿಸಿಲ್ಲ’ ಎಂದು ಮಾಜಿ ಶಾಸಕರೂ ಆದ ಬಿ.ಆರ್‌.ಪಾಟೀಲ ಕಿಡಿ ಕಾರಿದರು.

‘ರೈತರು ಪ್ರತಿಭಟನೆ ಮಾಡಿದ ಮೇಲೂ ಬಾಕಿ ಹಣ ಪಾವತಿ ಬಗ್ಗೆ ಜಿಲ್ಲಾಧಿಕಾರಿ ಕ್ರಮ ವಹಿಸುತ್ತಿಲ್ಲ. ರೈತರು ಮತ್ತು ಕಾರ್ಖಾನೆಯವರ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತಿಲ್ಲ. ಕೇವಲ ಒಂದು ಬಾರಿ ಸಭೆ ನಡೆಸಿ, ಸುಮ್ಮನಾಗಿದ್ದಾರೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಯಾದಗಿರಿ ಜಿಲ್ಲೆಯ ಕೋರ್ ಗ್ರೀನ್ ಕಾರ್ಖಾನೆಯವರು ಸುಮಾರು ₹ 45 ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಈ ಕಾರ್ಖಾನೆಗೆ ಜಿಲ್ಲೆಯ ರೈತರಿಂದ 2 ಲಕ್ಷ ಟನ್ ಕಬ್ಬು ಪೂರೈಕೆಯಾಗಿದೆ. ಈ ಕಾರ್ಣೆಯೆ ಒಟ್ಟಾರೆ ಕಬ್ಬು ಅರಿಯುವ ಸಾಮರ್ಥ್ಯವೇ 3 ಲಕ್ಷ ಟನ್‌. ಇದರಲ್ಲಿ ಮೂರು ಭಾಗದಷ್ಟು ಕಬ್ಬನ್ನು ಕಲಬುರ್ಗಿ ಜಿಲ್ಲೆಯ ರೈತರೇ ಸಂದಾಯ ಮಾಡಿದ್ದಾರೆ. ಆದರೆ, ಹಣ ಪಾವತಿಸಿಲ್ಲ. ಬಾಕಿ ಹಣ ಪಾವತಿಗೆ ಯಾದಗಿರಿ ಜಿಲ್ಲಾಧಿಕಾರಿ ಕೂಡ ಕ್ರಮ ವಹಿಸುತ್ತಿಲ್ಲ. ನಾವು ಅಲ್ಲಿಗೆ ಹೋಗಿ ಪ್ರತಿಭಟನೆ ಮಾಡುವ ಸ್ಥಿತಿ ಇಲ್ಲ. ಮಧ್ಯಪ್ರವೇಶ ಮಾಡಿ ಯಾದಗಿರಿ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಕಲಬುರ್ಗಿ ಜಿಲ್ಲಾಧಿಕಾರಿಯನ್ನು ಕೋರಿದರೂ ಬೆಲೆ ಕೊಟ್ಟಿಲ್ಲ’ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಶಾಂತವೀರಪ್ಪ ದಸ್ತಾಪುರ, ಕಲ್ಯಾಣಿ ಜಮಾದಾರ, ಗುರುಲಿಂಗ ಜಂಗಮ ಪಾಟೀಲ ದಂಗಾಪುರ, ಶಾಂತಮಲ್ಲಪ್ಪ ನೆಲ್ಲೂರ, ಹಣಮಂತರಾವ್‌ ಮೈನ್ಯಾಳ, ಸಹಕಾರ ಕಾರ್ಖಾನೆ ನಿರ್ದೇಶಕ ಚನ್ನಬಸಪ್ಪ ಡೊಣ್ಣೂರ, ಬಸವರಾಜ ಪಾಟೀಲ ಗೋಳಾ, ಶಿವಪುತ್ರಪ್ಪ ಕಡಗಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT