ಬುಧವಾರ, ಆಗಸ್ಟ್ 17, 2022
29 °C

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ‌ಕೇಂದ್ರ ಸರ್ಕಾರ ರೈತರನ್ನು ಒಕ್ಕಲೆಬ್ಬಿಸುವ ಕಾಯ್ದೆ ಜಾರಿಗೆ ತರುತ್ತಿದೆ ಎಂದು ಆರೋಪಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆಯ ತಾಲ್ಲೂಕು ಘಟಕದಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ವಿವಿಧ ಕಾಯ್ದೆಗಳ ತಿದ್ದು‍ಪಡಿ ಮಾಡಿದ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಆರ್.ಕೆ. ವೀರಭದ್ರಪ್ಪ, ‘ಕೇಂದ್ರ ಸರ್ಕಾರ ಮಾರಣಾಂತಿಕ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತ ಸಮುದಾಯವನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಸಲು ಹೊರಟಿದೆ. ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ರೈತ ಸಮುದಾಯಕ್ಕೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಬಿಲ್, ಕಾಯ್ದೆಗಳನ್ನು ಸುಗ್ರಿವಾಜ್ಞೆಗಳ ಮೂಲಕ ಜಾರಿಗೆ ತರುವುದರ ಮೂಲಕ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರ ನಿಂತಿದೆ. ಆ ಮೂಲಕ ಇಡೀ ರೈತ ಹಾಗೂ ಜನಸಮುದಾಯದ ಬದುಕಿನ ಮೇಲೆ ಬರೆ ಎಳೆಯಲು ಹೊರಟಿದೆ. ವಿದ್ಯುತ್ ಕಂಪನಿಗಳ ಖಾಸಗೀಕರಣಕ್ಕೆ ಸರ್ಕಾರ ಮುಂದಾಗಿದ್ದು, ಇದರಿಂದ ರೈತರಿಗೆ ಸಿಗುತ್ತಿದ್ದ ಉಚಿತ ವಿದ್ಯುತ್ ಸೌಲಭ್ಯ ಇನ್ನು ಮುಂದೆ ಗಗನ ಕುಸುಮವಾಗಲಿದೆ. ರೈತರನ್ನು ಕೃಷಿ ಜಮೀನಿನಿಂದ ಒಕ್ಕಲೆಬ್ಬಿಸುವ ಕುತಂತ್ರ ಇದರಲ್ಲಿ ಅಡಗಿದೆ ಎಂದರು.

ಆರ್‌ಕೆಎಸ್ ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಗುಂಡಣ್ಣಾ ಎಂ.ಕೆ., ಮುಖಂಡರಾದ ಮಲ್ಲಿನಾಥ ಹುಂಡೆಕಲ, ಆಲ್ ಇಂಡಿಯಾ ಯುಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೆರೂರು, ಶಿವಕುಮಾರ ಆಂದೋಲ, ಗೌತಮ ಪರ್ತೂರಕರ, ವೆಂಕಟೇಶ ದೇವದುರ್ಗ, ಮಲ್ಲಿಕಾರ್ಜುನ ಗಂಧಿ, ಏಶಪ್ಪ ಕೇದಾರ, ರಾಜು ಒಡೆಯರ, ಶರಣುಕುಮಾರ ದೋಶೆಟ್ಟಿ, ಶ್ರೀಶೈಲ ಕೆಂಚಗುಂಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.