ಭಾನುವಾರ, ಸೆಪ್ಟೆಂಬರ್ 25, 2022
30 °C

ಕಲಬುರಗಿ: ಕಾಯ್ದೆ ಹಿಂದಕ್ಕೆ ಒತ್ತಾಯಿಸಿ 12ರಂದು ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದ ಮಾದರಿಯಲ್ಲಿಯೇ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮೂರು ತಿದ್ದುಪಡಿ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ 12ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತಗೌಡ ರಾ. ಮಾಲಿಪಾಟೀಲ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಕಾರ್ಯವನ್ನು ನಿಲ್ಲಿಸಬೇಕು. ಬೆಳೆಗಳಿಗೆ ಕಾನೂನಾತ್ಮಕವವಾಗಿ ಬೆಲೆ ನಿಗದಿಪಡಿಸಬೇಕು. ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 512 ಮೀಟರ್‌ನಿಂದ 514 ಮೀಟರ್‌ಗೆ ಎತ್ತರಿಸಬೇಕು. ತುಂಗಭದ್ರಾ ನದಿಗೆ ನವಲಿ ಹತ್ತಿರ ನಿರ್ಮಿಸಲು ಹೊರಟಿರುವ ಸಮಾನಾಂತರ ಜಲಾಶಯಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಬೇಕು. ಇದೇ ಅಧಿವೇಶನದಲ್ಲಿ ₹ 10 ಸಾವಿರ ಕೋಟಿಯನ್ನು ಮೀಸಲಿಡಬೇಕು. ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಅವರಿಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರವನ್ನು ಕೂಡಲೇ ನೀಡಬೇಕು. ರೈತರು ಪಡೆದ ಟ್ರ್ಯಾಕ್ಟರ್ ಸಾಲ, ಬೆಳೆ ಸಾಲ, ಭೂ ಅಭಿವೃದ್ಧಿ ಸಾಲ, ಪಾಲಿ ಹೌಸ್ ನಿರ್ಮಾಣಕ್ಕೆ ನೀಡಲಾದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುವುದು ಎಂದರು.

ನಾಲ್ಕು ಜಿಲ್ಲೆಗಳ ರೈತರಿಗೆ ಅನುಕೂಲವಾದ ಹೊಸಪೇಟೆ ಸಕ್ಕರೆ ಕಾರ್ಖಾನೆ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು ಬಂದ್ ಆಗಿದ್ದು, ಸರ್ಕಾರ ಸಕ್ಕರೆ ಕಾರ್ಖಾನೆಯನ್ನು ಶೀಘ್ರ ಆರಂಭಿಸಬೇಕು. ರಾಜ್ಯದಾದ್ಯಂತ ರೈತರ ಕಬ್ಬಿಗೆ ಕಾರ್ಖಾನೆಗಳು ಬೇರೆ ಬೇರೆ ದರವನ್ನು ನಿಗದಿಪಡಿಸಿವೆ. ಸರ್ಕಾರ ಮಧ್ಯಪ್ರವೇಶಿಸಿ ಏಕರೂಪದ ದರವನ್ನು ನಿಗದಿ ಮಾಡಬೇಕು. ರಾಜ್ಯದಾದ್ಯಂತ ಬಗರ್‌ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು. ಗೋಮಾಳ ಜಮೀನನ್ನು ರಾಜ್ಯ ಸರ್ಕಾರ ಉದ್ಯಮಿಗಳಿಗೆ ಹಾಗೂ ಸಂಘ–ಸಂಸ್ಥೆಗಳಿಗೆ ಹಂಚಿಕೆ ಮಾಡುವ ಕೆಲಸವನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

ಮುಖಂಡರಾದ ಸದಾಶಿವ ದಿವಾಣಜಿ, ಶ್ರೀಕಾಂತ, ಕೃಷ್ಣಾ ಹಾಬಾಳಕರ, ಬಸವರಾಜ, ಸಂತೋಷ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು