ಕಲಬುರಗಿ: ‘ನಾನು ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತಿದ್ದೆ, ನಿತ್ಯ ಕನ್ನಡಿಯನ್ನೇ ಒರೆಸುತ್ತಿದ್ದೆ. ದೂಳು ಮುಖದ ಮೇಲಿರುವುದನ್ನೇ ಮರೆತಿದ್ದೆ’ ಇವು ಮಿರ್ಜಾ ಗಾಲಿಬ್‌ರ ಗಜಲ್ ಸಾಲುಗಳು. ಸೂಫಿ– ಸಂತರ ನಾಡು ಕಲಬುರಗಿಯಲ್ಲಿ ಭಾನುವಾರ ಇಡೀ ದಿನ ಈ ರೀತಿಯ ನೂರಾರು ಗಜಲ್ ಸಾಲುಗಳ ಘಲ್ ಘಲ್ ನಿನಾದ ಮಾರ್ದನಿಸಿತು.
ಹೌದು, ಗುಲಬರ್ಗಾ ವಿವಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ವೇದಿಕೆ ಗಜಲ್ ಪರಂಪರೆಯ ಮೇಲೆ ಬೆಳಕು ಚೆಲ್ಲಿತು. ‘ಹೇಗೆ ಬದುಕಲಿ ನಾನು ಹೂವಿನಲ್ಲೂ ಮದ್ದು ಗುಂಡು ಸಿಡಿಯುವಾಗ, ಹೇಗೆ ಸಾಯಲಿ ನಾನು ಮಸಣದಲ್ಲೂ ಗೋರಿಗಳು ದುಬಾರಿಯಾಗಿರುವಾಗ’ ಎಂದು ದುಬಾರಿ ದುನಿಯಾಗೆ ಕನಕಗಿರಿಯ ಅಲ್ಲಾಗಿರಿರಾಜ್ ಕನ್ನಡಿ ಹಿಡಿದರು. ‘ಹುಡುಕಬೇಡಿ ನನ್ನನ್ನು ನಾ ಬರೆದು ಬಿಟ್ಟ ಸಾಲುಗಳಲ್ಲಿ, ಮತ್ತೆ ಮತ್ತೆ ತಿರುವಿ ನೋಡಿ ನಾ ಬರಿಯದೇ ಬಿಟ್ಟ ಸಾಲುಗಳಲ್ಲಿ’ ಎಂದು ಪ್ರೇಮಾ ಹೂಗಾರ ಆಗಬೇಕಾದ ಕೆಲಸಗಳ ಬಗ್ಗೆ ಬೆಳಕು ಚೆಲ್ಲಿದರು.
ಕನ್ನಡ ಗಜಲ್ ಪಿತಾಮಹ ಶಾಂತರಸ ವೇದಿಕೆಯಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷೆ ಪ್ರಭಾವತಿ ಎಸ್. ದೇಸಾಯಿ ಮಾತನಾಡಿ, ‘ಗಜಲ್ ಎಂದರೆ ಧ್ಯಾನ. ಆತ್ಮಸಂಧಾನ ಮಾಡಿಕೊಳ್ಳುವ ಸಾಹಿತ್ಯ. ಕನ್ನಡ ಗಜಲ್‌ಕಾರರಿಗೆ ಶಾಂತರಸರೇ ಪ್ರೇರಣೆ. ಗಜಲ್‌ಗಳೆಂದರೆ ಬರೀ ವಿರಹ, ಪ್ರೀತಿ, ಪ್ರೇಮ, ಸಾಕಿ, ಮಧುಶಾಲೆ, ಮದಿರೆಗಳಿಗೆ ಸೀಮಿತವೆಂಬ ಭಾವ ಅನೇಕರಲ್ಲಿತ್ತು. ಆದರೆ ಈಗ ಗಜಲ್‌ಕಾರರು ಅವುಗಳ ಜತೆಗೆ ಸುಡುವ ವರ್ತಮಾನಕ್ಕೆ ಮುಖಾಮುಖಿಯಾಗಿದ್ದಾರೆ‘ ಎಂದು ಹೇಳಿದರು.
ಗುಲ್ಬರ್ಗಾ ವಿವಿ ಕುಲಪತಿ ದಯಾನಂದ ಅಗಸರ ಮಾತನಾಡಿ, ‘ವಿಶೇಷತೆ ತಂದು ಕೊಡುವುದೇ ಕಲಬುರಗಿಯ ವೈಶಿಷ್ಟ್ಯ, ಕರ್ನಾಟಕ ಗಜಲ್ ಅಕಾಡೆಮಿಯಿಂದ ಪ್ರಥಮ ಸಮ್ಮೇಳನ ಕಲಬುರಗಿಯಲ್ಲೇ ಆಯೋಜಿಸಿದ್ದು ಹರ್ಷ ತಂದಿದೆ ಎಂದರು. ‘ಗಜಲ್ ಸಮ್ಮೇಳನದ ಕನಸು ಐದಾರು ವರ್ಷಗಳದ್ದು, ಅದು ಆಂದೋಲನವಾಗಿ ಬದಲಾಗಲಿ ಎಂದು‘ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ ಆಶಿಸಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನದ ಸಂಚಾಲಕರಾದ ಮಹಿಪಾಲರೆಡ್ಡಿ ಮುನ್ನೂರು, ಅಬ್ದುಲ್ ಹೈ ತೋರಣಗಲ್ಲು, ಸಂಗಮೇಶ ಬಾದವಾಡಗಿ, ಸಿಕಂದರ್ ಅಲಿ, ಸುರೇಶ್ ನೆಗಳಗುಳಿ, ಶ್ರೀದೇವಿ ಕೆರೆಮನೆ, ಎಂ.ವೈ.ಯಾಕೊಳ್ಳಿ, ಅರುಣಾ ನರೇಂದ್ರ, ಜಯದೇವಿ ಗಾಯಕವಾಡ್ ಸೇರಿದಂತೆ ನೂರಾರು ಗಜಲ್‌ಕಾರರು, ಪ್ರೊ. ಎಚ್.ಟಿ.ಪೋತೆ, ಮಮತಾ ಅರಸೀಕೆರೆ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಭಾಗಿಯಾಗಿದ್ದರು. ಸಿನಿಮಾ ನಟ, ನಿರ್ದೇಶಕ, ರಂಗಭೂಮಿ ಕಲಾವಿದ ಶ್ರೀನಿವಾಸಪ್ರಭು ಮತ್ತು ರಂಜಿನಿಪ್ರಭು ‘ನಿನ್ನ ಗಜಲಿಗೆ ನನ್ನ ಕವಿತೆ’ ಎಂಬ ಜುಗಲ್‌ಬಂದಿ ನಡೆಸಿಕೊಟ್ಟರು. ಗೋಷ್ಠಿಗಳಲ್ಲಿ ಹಲವು ಗಜಲ್‌ಕಾರರು ತಮ್ಮ ಗಜಲ್‌ಗಳ ವಾಚನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.