ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಸತ್ತಾತ್ಮಕ ನೆಲೆಯಲ್ಲಿ ಲಿಂಗಾಯತ ಧರ್ಮ ರಚನೆ: ಎಸ್‌.ಜಿ. ಸಿದ್ದರಾಮಯ್ಯ

891ನೇ ಬಸವ ಜಯಂತ್ಯುತ್ಸವ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ
Published 15 ಮೇ 2024, 5:05 IST
Last Updated 15 ಮೇ 2024, 5:05 IST
ಅಕ್ಷರ ಗಾತ್ರ

ಕಲಬುರಗಿ: ‘12ನೇ ಶತಮಾನದಲ್ಲಿ ವರ್ಣಾಶ್ರಮ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿ ಎಲ್ಲ ತಳ ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ಪ್ರಜಾಸತ್ತಾತ್ಮಕ ನೆಲೆಯಲ್ಲಿ ರಚನೆಯಾದ ಧರ್ಮವೇ ಲಿಂಗಾಯತ’ ಎಂದು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಹೇಳಿದರು.

ನಗರದ ಜಗತ್ ವೃತ್ತದ ಬಳಿ ಇರುವ ಬಸವೇಶ್ವರ ಪ್ರತಿಮೆ ಆವರಣದ ಸಾಂಸ್ಕೃತಿಕ ವೇದಿಕೆ ಸಭಾಂಗಣದಲ್ಲಿ ಮಂಗಳವಾರ ಜಾಗತಿಕ ಲಿಂಗಾಯತ ಮಹಾಸಭಾ, ವಿವಿಧ ಬಸವಪರ ಸಂಘಟನೆಗಳ ಸಹಯೋಗದಲ್ಲಿ 891ನೇ ಬಸವ ಜಯಂತ್ಯುತ್ಸವ ಪ್ರಯುಕ್ತ ಹಮ್ಮಿಕೊಂಡ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಎಂಬ ಅನುಭಾವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ವರ್ಣಾಶ್ರಮ ಧರ್ಮ ಎಲ್ಲ ಧರ್ಮವನ್ನು ಕ್ಷೀಣಿಸುವ ಹಾಗೆ ಮಾಡುತ್ತಿದೆ. ದೇಶದೆಲ್ಲೆಡೆ ಹರಡಿದ್ದ ಬೌ‌ದ್ಧ ಧರ್ಮವನ್ನು ಇಲ್ಲಿಯಿಂದ ಬೇರೆಡೆಗೆ ಪಲ್ಲಟವಾಗುವ ಹಾಗೆ ಮಾಡಿತು. ವೈದಿಕ ಧರ್ಮವನ್ನು ವಿರೋಧಿಸಿ ಹಲವು ಧರ್ಮ ಉಗಮವಾದರೂ ಸಹ ವಿಸ್ತರಣೆ ಮಾಡಲು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.

‘ಚಾರ್ತುವರ್ಣ ವಿರೋಧಿಸಿ ಲಿಂಗಾಯತ ಧರ್ಮಕ್ಕಿಂತ ಮೊದಲು ಬೌದ್ಧ, ಜೈನ, ಸಿಖ್‌ನಂತಹ ಧರ್ಮಗಳು ಕೂಡ ಜನ್ಮತಾಳಿವೆ. ಇಂದು ಅವುಗಳಲ್ಲಿರುವ ಕೆಲವು ಪಂಥ ಮತ್ತೆ ವೈದಿಕ ಧರ್ಮದ ಪರಂಪರೆಗೆ ಮಾರುಹೋಗುತ್ತಿವೆ’ ಎಂದರು.

ವರ್ಣಾಶ್ರಮದಿಂದಾಗಿ ದೇಶದಿಂದ ಹೊರ ತಳ್ಳಲಾಗಿದ್ದ ಬೌದ್ಧ ಧರ್ಮವನ್ನು ಮತ್ತೆ ದೇಶಕ್ಕೆ ತಂದವರು ಡಾ.ಬಿ.ಆರ್.ಅಂಬೇಡ್ಕರ್ ಅವರು
ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ

ಲಿಂಗಾಯತ ಒಂದು ಚಳವಳಿಯ ಧರ್ಮವಾಗಿದೆ. ಇದರಲ್ಲಿ ಎಲ್ಲ ವರ್ಗ, ವರ್ಣ, ಕಾಯಕದ ಜನರನ್ನು ಒಳಗೊಂಡಿದೆ. ವೈದಿಕ ಪರಂಪರೆಯನ್ನು ವಿರೋಧಿಸುವ ನಿಜವಾದ ವಚನಗಳು ಲಿಂಗಾಯತ ಧರ್ಮದ ಮೂಲಗಳಾಗಿವೆ. ನಾನು ಕಂಡಂತೆ ಸುಮಾರು 336 ವಚನಗಳಲ್ಲಿ 41 ಜನ ವಚನಕಾರರು ವೈದಿಕ ವಿರೋಧಿ ಧೋರಣೆಯನ್ನು ತಮ್ಮ ವಚನಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಬಸವಣ್ಣ ಒಬ್ಬರೇ ಸುಮಾರು 64 ವಚನಗಳಲ್ಲಿ ವೈದಿಕ ಪರಂಪರೆಯನ್ನು ವಿರೋಧಿಸಿದ್ದಾರೆ’ ಎಂದು ಹೇಳಿದರು.

‘ನಾವು ಇಂದಿಗೂ ಸಾಂಸ್ಕೃತಿಕ ದಾಸ್ಯದಲ್ಲಿ ಬದುಕುತ್ತಿದ್ದೇವೆ. ನಮಗೆ ಮತ ನೀಡುವ ಪ್ರಜಾಪ್ರಭುತ್ವದ ಸ್ವಾತಂತ್ರ್ಯ ಸಿಕ್ಕಿದೆ. ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಇಂದಿಗೂ ನಾವು ಸಾಂಸ್ಕೃತಿಕ ಸ್ವಾತಂತ್ರ್ಯ ಪಡೆಯಲು ಹೆಣಗಾಟ ಮುಂದುವರಿಸಿದ್ದೇವೆ’ ಎಂದು ಹೇಳಿದರು.

ಧುತ್ತರಗಾಂವ್ ವಿರಕ್ತಮಠದ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಿಕಾಂತ ಹುಬಳಿ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವ್‌ಕರ್, ಎಸ್‌.ಎಸ್‌. ಪಾಟೀಲ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ, ಶರಣಪ್ಪ ನಿರಗುಡಿ, ಆರ್.ಜೆ. ಶೆಟಗಾರ, ರವೀಂದ್ರ ಶಾಬಾದಿ, ನಲಿನಿ ಮಹಾಗಾಂವಕರ್, ರೇಣುಕಾ, ಅಯ್ಯಣಗೌಡ, ಮೆಹರಾಜ್ ಪಟೇಲ್ ತಾವರಗೇರಾ, ಮಹಾಂತೇಶ ಕಲಬುರಗಿ, ನೀಲಕಂಠ ಆವಂಟಿ, ನಾಗೇಂದ್ರಪ್ಪ ಮಾಡ್ಯಾಳ ಇತರರಿದ್ದರು.

ಘಾಟಗೆ ಲೇಔಟ್‌ನ ಅಕ್ಕನ ಬಳಗದಿಂದ ಪ್ರಾರ್ಥನೆ ಗೀತೆ ಹಾಡಿದರು. ಹಣಮಂತರಾವ ಕುಸನೂರು ಸ್ವಾಗತಿಸಿದರೆ, ನಾಗರಾಜ ಕಾಮಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT