ಜೇವರ್ಗಿ: ತಾಲ್ಲೂಕಿನ ಬಳ್ಳುಂಡಗಿ, ಜೇರಟಗಿ, ಹರವಾಳ, ಮಂದೇವಾಲ, ಅರಳಗುಂಡಗಿಯಲ್ಲಿ ನರಿಯೊಂದು ಸುಮಾರು 20 ರೈತರ ಮೇಲೆ ದಾಳಿ ಗಾಯಗೊಳಿಸಿದೆ.
ತಾಲ್ಲೂಕಿನ ಬಳ್ಳುಂಡಗಿ ಗ್ರಾಮದ 7 ಜನ ರೈತರಿಗೆ ನರಿ ಕಡಿದು ಗಾಯಗೊಳಿಸಿದೆ. ಜೇರಟಗಿ ಗ್ರಾಮದಲ್ಲಿ 4, ಹರವಾಳದಲ್ಲಿ 5 ಜನ, ಮಂದೇವಾಲದಲ್ಲ ಒಬ್ಬರು, ಅರಳಗುಂಡಗಿಯಲ್ಲಿ ಮೂವರಿಗೆ ನರಿ ಕಡಿದಿದೆ.
‘ಕಳೆದ 3–4ದಿನಗಳಿಂದ ವಿವಿಧ ಹಳ್ಳಿಗಳಲ್ಲಿ ನರಿ ಹಾವಳಿ ಹೆಚ್ಚಾಗಿದೆ. ನರಿ ಕಾಟ ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ತೆಗದುಕೊಂಡಿಲ್ಲ. ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಕೂಡಲೇ ನರಿಯನ್ನು ಸೆರೆ ಹಿಡಿಯಬೇಕು. ಗಾಯಗೊಂಡ ರೈತರಿಗೆ ಉಚಿತ ಸೂಕ್ತ ಚಿಕಿತ್ಸೆ ನೀಡಬೇಕು’ ಎಂದು ರೈತರು ಮನವಿ ಮಾಡಿದ್ದಾರೆ.
‘ಮೂರು ದಿನಗಳಿಂದ ನರಿ ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. ರೈತರು ಮುಂಜಾಗೃತ ಕ್ರಮವಾಗಿ ಸಿಡಿಮದ್ದು ಹಾಗೂ ಬಡಿಗೆ ಇನ್ನಿತರ ಸಾಮಗ್ರಿಗಳನ್ನು ತೆಗೆದುಕೊಂಡು ಹೊಲಗಳಿಗೆ ತೆರಳಬೇಕು. ತಾಲ್ಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಪರಿಹಾರಕ್ಕೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಪ್ರಾದೇಶಿಕ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ಸಿದ್ದುಗೌಡ ಪಾಟೀಲ ಪ್ರಜಾವಾಣಿಗೆ ತಿಳಿಸಿದರು.
೦೧.ಜೇವರ್ಗಿ : ತಾಲೂಕಿನ ಬಳ್ಳುಂಡಗಿ ಗ್ರಾಮದಲ್ಲಿ ನರಿ ಹಾವಳಿಯಿಂದ ಗಾಯಗೊಂಡ ರೈತರು.