ಭಾನುವಾರ, ಜೂನ್ 13, 2021
21 °C
ಕೊರೊನಾ ಮುಂಚೂಣಿ ವಾರಿಯರ್‌ಗಳಾಗಿ ಪರಿಗಣನೆ

ಮಾಧ್ಯಮ ಪ್ರತಿನಿಧಿಗಳಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ರಾಜ್ಯ ಸರ್ಕಾರ ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳನ್ನು ಮುಂಚೂಣಿ ಕೊರೊನಾ ವಾರಿಯರ್‌ಗಳು ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ಹಾಕುವಂತೆ ಸೂಚಿಸಿದ್ದರಿಂದ ನಗರದ ಪ್ರೆಸ್‌ಕ್ಲಬ್‌ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಾಧ್ಯಮ ಪ್ರತಿನಿಧಿಗಳಿಗೆ ಮೊದಲ ಹಾಗೂ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುವುದು. ಲಸಿಕೆ ಪಡೆದ ಬಳಿಕ ಕೆಲವರಿಗೆ ಜ್ವರದಂತಹ ಸಮಸ್ಯೆಗಳು ಕಾಣಿಸುವುದು ಸಹಜ. ಅದಕ್ಕಾಗಿ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಅಗತ್ಯ ಬಿದ್ದರೆ ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ’ ಎಂದರು.

‘ಲಸಿಕೆ ಪಡೆದ ಬಳಿಕವೂ ಕೋವಿಡ್‌ ನಿಯಮಗಳ ಅನುಸಾರ ಮಾಸ್ಕ್ ಧರಿಸುವುದು, ಸ್ಯಾನಿಟೈಜ್ ಮಾಡಿಕೊಳ್ಳುವುದನ್ನು ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ ಲಸಿಕೆ ಸಕಾಲಕ್ಕೆ ಬಾರದೇ ಇರುವುದರಿಂದ ಜಿಲ್ಲೆಯಲ್ಲಿ 18ರಿಂದ 44 ವಯಸ್ಸಿನವರಿಗೆ ನೀಡಲಾಗುತ್ತಿದ್ದ ಲಸಿಕೆಯನ್ನು ಮೇ 14ರಿಂದ ಸ್ಥಗಿತಗೊಳಿಸಲಾಗುತ್ತದೆ. ಮುಂದಿನ ಆದೇಶ ಬಂದ ಬಳಿಕ ಪುನರಾರಂಭಿಸಲಾಗುವುದು. ಜಿಲ್ಲೆಯಲ್ಲಿ ಸಂಗ್ರಹದಲ್ಲಿರುವ ಲಸಿಕೆಯನ್ನು 45 ವರ್ಷ ಮೀರಿದವರ ಎರಡನೇ ಡೋಸ್‌ಗೆ ಬಳಸಲಾಗುವುದು’ ಎಂದರು.

‘ಲಸಿಕೆಯನ್ನು ಪಡೆಯಬೇಕಾದರೆ ಕೋವಿನ್ ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳುವುದು ಅಗತ್ಯ. ಆದಾಗ್ಯೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಲಸಿಕೆ ಪಡೆಯಲು ಬಂದವರಿಗೆ ಸ್ಥಳದಲ್ಲೇ ನೋಂದಾಯಿಸಿಕೊಂಡೂ ಲಸಿಕೆ ನೀಡಲಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಪಡೆಯಲು ಈಗಲೂ ಹಿಂಜರಿಯುತ್ತಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಓ ಡಾ. ದಿಲೀಷ್ ಶಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಆವಂಟಿ ಇದ್ದರು.

ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 268 ಜನರು ಲಸಿಕೆ ಪಡೆದರು.

ಆಮ್ಲಜನಕ; ಮತ್ತೆ ಸಾಮರ್ಥ್ಯ ಹೆಚ್ಚಳ

ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿದ್ದ ಆಮ್ಲಜನಕದ ಸಾಮರ್ಥ್ಯವನ್ನು ಹೆಚ್ಚಳ ಮಾಡಲಾಗಿದ್ದು, ಮೊದಲು 900 ಆಮ್ಲಜನಕ ಸಿಲಿಂಡರ್‌ ಜೊತೆಗೆ ಇದೀಗ ಮತ್ತೆ ಹೆಚ್ಚುವರಿ 600 ಸಿಲಿಂಡರ್‌ನಷ್ಟು ಉತ್ಪಾದನೆ ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು.

ಬಳ್ಳಾರಿಯಿಂದಲೂ ಆಮ್ಲಜನಕ ಟ್ಯಾಂಕರ್ ಬರುತ್ತಿದೆ. ಸದ್ಯಕ್ಕೆ ಆಮ್ಲಜನಕದ ಸಮಸ್ಯೆ ತೀವ್ರವಾಗಿಲ್ಲ. ಹಾಗೆಂದು ಅಗತ್ಯ ತಕ್ಕಷ್ಟು ಲಭ್ಯವಿದೆ ಎನ್ನಲಾಗುವುದಿಲ್ಲ. ವಿವಿಧ ಮೂಲಗಳಿಂದ ಆಮ್ಲಜನಕವನ್ನು ತರಿಸಲು ಜಿಲ್ಲಾಡಳಿತ ಪ್ರಯತ್ನ ಮುಂದುವರಿಸಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು