ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಮಾಡಲು ತೆರಳಲೇಬೇಕು 16 ಕಿ.ಮೀ: ಮುಲ್ಲಾಮಾರಿ ಯೋಜನೆ ನಿರಾಶ್ರಿತರ ಗೋಳು!

Published 25 ಏಪ್ರಿಲ್ 2024, 5:50 IST
Last Updated 25 ಏಪ್ರಿಲ್ 2024, 5:50 IST
ಅಕ್ಷರ ಗಾತ್ರ

ಚಿಂಚೋಳಿ: 180ಕ್ಕೂ ಅಧಿಕ ಮತದಾರರಿರುವ ತಾಲ್ಲೂಕಿನ ಗಡಿಲಿಂಗದಳ್ಳಿ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ 16 ಕಿ.ಮೀ ದೂರದ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. 

100 ಮತದಾರರು ಚಂದನಕೇರಾ ಗ್ರಾಮದ ಬಳಿಯ ಗಡಿಲಿಂಗದಳ್ಳಿ ಪುನರ್ವಸತಿ ಕೇಂದ್ರ–2ರಲ್ಲಿ ಮತ್ತು ಉಳಿದವರು ಹಳೆ ಊರಿನ ಪುನರ್ವಸತಿ ಕೇಂದ್ರ–3ರ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು.

ಪುನರ್ ವಸತಿ ಕೇಂದ್ರ–1ರ ವ್ಯಾಪ್ತಿಗೆ ಬರುವ ಗಡಿಲಿಂಗದಳ್ಳಿಯಿಂದ ಪುನರ್ವಸತಿ ಕೇಂದ್ರ–2ಕ್ಕೆ ನೇರ ರಸ್ತೆ ಇಲ್ಲ. ಚನ್ನೂರು, ರಾಣಾಪುರ ಕ್ರಾಸ್, ಚಂದನಕೇರಾ ಮಾರ್ಗವಾಗಿ 16 ಕಿ.ಮೀ ಪ್ರಯಾಣಿಸಿ ಮತದಾನ ಮಾಡಬೇಕು. ಪುನರ್ವಸತಿ–3ಕ್ಕೆ ಹೋಗಿ ಬರಲು 4 ಕಿ.ಮೀ ಅಂತರವಿದ್ದು ರಸ್ತೆಯಿದೆ. ಅರಣ್ಯ ಇಲಾಖೆ ಡಾಂಬರ್ ರಸ್ತೆ ನಿರ್ಮಿಸಲು ಮಧ್ಯದಲ್ಲೇ ತಕರಾರು ಮಾಡಿದ್ದರಿಂದ 2.5 ಕಿ.ಮೀ ಮಾತ್ರ ಡಾಂಬರು ರಸ್ತೆ ನಿರ್ಮಾಣಗೊಂಡಿದೆ.

ಪುನರ್ವಸತಿ ಕೇಂದ್ರ–3 ಹಳೆ ಊರಿನಲ್ಲಿ ವಾಸವಿರುವ 30ಕ್ಕೂ ಅಧಿಕ ಮತದಾರರು 11 ಕಿ.ಮೀ ದೂರದ ಪುನರ್ವಸತಿ ಕೇಂದ್ರ–2ರ ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ಇವರು ಪುನರ್ವಸತಿ ಕೇಂದ್ರ–1ರ ಮಾರ್ಗವಾಗಿ ಮತದಾನ ಕೇಂದ್ರ ತಲುಪಬೇಕಾದರೆ 20 ಕಿ.ಮೀ ಕ್ರಮಿಸಬೇಕಾಗಿದೆ. ಕೊಟಗಾ, ಚಂದನಕೇರಾ ಮಾರ್ಗವಾಗಿ ಕ್ರಮಿಸಿದರೆ 11 ಕಿ.ಮೀ ದೂರವಾಗಲಿದೆ. ಪುನರ್ವಸತಿ ಕೇಂದ್ರ–2ರಲ್ಲಿ ವಾಸವಾಗಿರುವ 20ಕ್ಕೂ ಅಧಿಕ ಮತದಾರರು ಪುನರ್ವಸತಿ ಕೇಂದ್ರ–3 ಹಳೆ ಊರಿನ ಮತಗಟ್ಟೆಗೆ ಬಂದು ಮತದಾನ ಮಾಡಬೇಕಾಗಿದ್ದು, ಕನಿಷ್ಠ 11ರಿಂದ 20 ಕಿ.ಮೀ ಕ್ರಮಿಸಬೇಕಾಗುತ್ತದೆ ಎಂದು ಗ್ರಾಮದ ಮುಖಂಡ ಲಕ್ಷ್ಮಿಕಾಂತ ಚೊಂಚಿ ಅಳಲು ತೋಡಿಕೊಂಡಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿಯ 1ನೇ ಪುನರ್ವಸತಿ ಕೇಂದ್ರ
ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿಯ 1ನೇ ಪುನರ್ವಸತಿ ಕೇಂದ್ರ
ಗೌರಿಶಂಕರ ಉಪ್ಪಿನ್ ಗ್ರಾ.ಪಂ. ಸದಸ್ಯ ಗಡಿಲಿಂಗದಳ್ಳಿ
ಗೌರಿಶಂಕರ ಉಪ್ಪಿನ್ ಗ್ರಾ.ಪಂ. ಸದಸ್ಯ ಗಡಿಲಿಂಗದಳ್ಳಿ
ಸಂತೋಷ ಇನಾಂದಾರ ಸಹಾಯಕ ಚುನಾವಣಾಧಿಕಾರಿ ಬೀದರ್ ಲೋಕಸಭಾ ಕ್ಷೇತ್ರ
ಸಂತೋಷ ಇನಾಂದಾರ ಸಹಾಯಕ ಚುನಾವಣಾಧಿಕಾರಿ ಬೀದರ್ ಲೋಕಸಭಾ ಕ್ಷೇತ್ರ
ಗಡಿಲಿಂಗದಳ್ಳಿ ಪುನರ್ವಸತಿ ಕೇಂದ್ರ–2ರ ಮತಗಟ್ಟೆಗೆ ತರಳಿ ಮತ ಹಾಕಲು ಜನ ಉತ್ಸಾಹ ತೋರುತ್ತಿಲ್ಲ. ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮ ಮಾಡಿದರೆ ಪ್ರಯೋಜನವಿಲ್ಲ. ಸಾರಿಗೆ ಸೌಲಭ್ಯ ಕಲ್ಪಿಸಬೇಕು
ಗೌರಿಶಂಕರ ಉಪ್ಪಿನ್ ಗ್ರಾ.ಪಂ. ಸದಸ್ಯರು ಗಡಿಲಿಂಗದಳ್ಳಿ
ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದರಿಂದ ಮತಗಟ್ಟೆ ಹೆಚ್ಚಳ ಮತ್ತು ಬದಲಾವಣೆಗೆ ಅವಕಾಶವಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲು ಆಯೋಗದ ಗಮನಕ್ಕೆ ತರುತ್ತೇವೆ.
ಸಂತೋಷ ಇನಾಂದಾರ ಸಹಾಯಕ ಚುನಾವಣಾಧಿಕಾರಿ ಬೀದರ್ ಲೋಕಸಭಾ ಕ್ಷೇತ್ರ

ಪರದಾಟಕ್ಕೆ ಕಾರಣ ಏನು? ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಲ್ಲಿ ಗಡಿಲಿಂಗದಳ್ಳಿ ಮುಳುಗಡೆಯಾಗಿದ್ದರಿಂದ ಗ್ರಾಮಸ್ಥರಿಗೆ ಮೂರು ಕಡೆಗಳಲ್ಲಿ ಪುನರ್ವಸತಿ ಕಲ್ಪಿಸಿ ಗ್ರಾಮವನ್ನು ಎರಡು ದಶಕಗಳ ಹಿಂದೆಯೇ ವಿಭಜಿಸಲಾಗಿದೆ. ಭಾಲ್ಕಿ–ಚಿಂಚೋಳಿ ರಾಜ್ಯ ಹೆದ್ದಾರಿ 75ರ ಬದಿಯಲ್ಲಿ ಗಡಿಲಿಂಗದಳ್ಳಿ ಪುನರ್ವಸತಿ ಕೇಂದ್ರ–1 ನಿರ್ಮಿಸಿ ಜನರಿಗೆ ನಿವೇಶನಗಳನ್ನು ಹಂಚಲಾಗಿದೆ. ಜತೆಗೆ ಗ್ರಾ.ಪಂ. ಕಚೇರಿ ಶಾಲೆ ಅಂಗನವಾಡಿ ಆರೋಗ್ಯ ಕ್ಷೇಮ ಕೇಂದ್ರ ತೆರೆಯಲಾಗಿದೆ. ಆದರೆ ಇಲ್ಲಿ ಮತಗಟ್ಟೆಯಿಲ್ಲ. ಈ ಹಿಂದೆ ಪುನರ್ವಸತಿ ಕೇಂದ್ರ–3ರ ಹಳೆ ಊರಿನ ಜನರು ಪುನರ್ವಸತಿ ಕೇಂದ್ರಕ್ಕೆ ಮತ್ತು ಹೊಲಗಳಿಗೆ ಹೋಗಬೇಕಾದರೆ ನಾಗರಾಳ ಜಲಾಶಯದ ಹಿನ್ನೀರಿನಲ್ಲಿ ಟೈರ್‌ಗಳ ಟ್ಯೂಬ್ ಬೆನ್ನಿಗೆ ಕಟ್ಟಿಕೊಂಡು ದಾಟುತ್ತಿದ್ದರು. ಆಗ ಜನ ಜಾನುವಾರು ಮೃತಪಟ್ಟ ನಿದರ್ಶನಗಳೂ ಇವೆ. ಈಗ ಪುನರ್ವಸತಿ ಕೇಂದ್ರ–3ರಿಂದ 1ಕ್ಕೆ ರಸ್ತೆ ನಿರ್ಮಿಸಿದ್ದರಿಂದ ಜನರು ವಾಹನಗಳ ಮೂಲಕ ತೆರಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT