ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡ್ಲಾಪುರ; ಧಾರ್ಮಿಕ ಸಮನ್ವಯತೆಯ ಗಂಧೋತ್ಸವ

Last Updated 26 ಏಪ್ರಿಲ್ 2022, 7:02 IST
ಅಕ್ಷರ ಗಾತ್ರ

ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಹಿಂದೂ–ಮುಸ್ಲಿಮರು ಜೊತೆಗೂಡಿ ಹಾಜಿ ಸರ್ವರ್ ಗಂಧೋತ್ಸವ ಸಂಭ್ರಮದಿಂದ ಆಚರಿಸಿದರು. ಸೌಹಾರ್ದದಿಂದ ವಿವಿಧ ಕಾರ್ಯಕ್ರಮಗಳು ನಡೆದವು.

ಬೆಟ್ಟದ ಮೇಲಿನ ದರ್ಗಾದಲ್ಲಿನ ಮೂರ್ತಿಗೆ ಹಿಂದೂಗಳು ‘ಹಾದಿಶರಣ’ ಎಂದು ಕರೆದರೇ, ಮುಸ್ಲಿಮರು ‘ಹಾಜಿ ಸರ್ವರ್’ ಎನ್ನುತ್ತಾರೆ. ದವನದ ಹುಣ್ಣಿಮ ಬಳಿಕ ಮೊದಲನೇ ಗುರುವಾರ ರಾತ್ರಿ ಬೆಳ್ಳಿ ಕುದುರೆ ಮತ್ತು ಪಂಚ ಕಳಸಗಳ ಗಂಧೋತ್ಸವ ನಡೆಯಿತು.

‘ಕಳಸ ಮತ್ತು ಬೆಳ್ಳಿ ಕುದುರೆಗಳನ್ನು ಹೂಗಾರ ಪೂಜಾರಿ ಮನೆಯಲ್ಲಿ ಇರಿಸಿ ಪೂಜಿಸಲಾಗುತ್ತದೆ. ಆದರೆ, ಜಾತ್ರೆಯ ಐದೂ ದಿನ ದರ್ಗಾದ ಗೋಪುರದ ಮೇಲೆ ಇರಿಸುವುದು ವಾಡಿಕೆ’ ಎಂದು ಗ್ರಾಮದ ಮುಖಂಡ ಬಸವರಾಜ ಗೌಡ ಮಾಲಿಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಹೂಗಾರ ಮನೆಯಿಂದ ತಂದ ಬೆಳ್ಳಿ ಕುದುರೆ ಮತ್ತು ಕಳಸಗಳನ್ನು ಹಿರೋಡೇಶ್ವರ ದೇಗುಲದ ನಡುಗಟ್ಟೆಯ ಮೇಲೆ ಇಟ್ಟು, ಹೂಗಾರರು ಹಿಂದೂ ಸಂಪ್ರದಾಯದಂತೆ ಪೂಜೆ ಹಾಗೂ ಮುಲ್ಲಾಗಳು ಕುರಾನ್‌ ಪದ್ಧತಿಯಂತೆ ಪ್ರಾರ್ಥನೆ ಸಲ್ಲಿಸಿದರು. ಭಕ್ತರು ಕಾಣಿಕೆ ಅರ್ಪಿಸಿದರು.

ಮೆರವಣಿಗೆಯಲ್ಲಿ ಗಂಧದ ಬುಟ್ಟಿ ಹೊತ್ತ ಪೂಜಾರಿ ಹಾಗೂ ಧೂಪದ ಕುಂಡ ಹಿಡಿದ ಮುಲ್ಲಾ ಜೊತೆಯಾಗಿ ಸಾಗಿದರು. ಧೂಪದ ಕುಂಡಕ್ಕೆ ಆಗಾಗ ಅಗರಬತ್ತಿ, ಲೋಬಾನ ಹಾಕಲಾಯಿತು. ಗ್ರಾಮ ದೇವತೆ ದ್ಯಾವಮ್ಮ ದೇವಿ ದೇಗುಲದ ಮುಂಭಾಗ ಕೆಲ ಹೊತ್ತು ಮೆರವಣಿಗೆ ನಿಂತಾಗ, ನೀರು ತಂದು ಪೂಜಾರಿ–ಮುಲ್ಲಾ ಪಾದಗಳಿಗೆ ಸುರಿಯಲಾಯಿತು. ಇದು ಗಂಧೋತ್ಸವದ ಪದ್ಧತಿ.

ಗೋಪುರದ ಮೇಲೆ ಕಳಸ ಹಾಗೂ ದರ್ಗಾದಲ್ಲಿ ಬೆಳ್ಳಿ ಕುದುರೆ ಇರಿಸಿಭೀಮರಾಯ ಸಾಬಣ್ಣ ಹೂಗಾರ ಪೂಜೆ ಸಲ್ಲಿಸಿದರು. ಹಿಂದೂ, ಮುಸ್ಲಿಂ ಸೇರಿ ಎಲ್ಲ ಸಮುದಾಯದವರು ಧೂಪದ ಕುಂಡಕ್ಕೆ ಲೋಬಾನ ಹಾಕಿ ‘ಹಾಜಿ ಸರ್ವರ್‌ಕಿ ದೋಸ್ತಾರವೊದಿನ್’ (ಧಾರ್ಮಿಕ ಗೆಳೆತನ) ಎಂದು ಜೈಕಾರ ಹಾಕಿದರು. ನಂತರ ಭಕ್ತರ ಅರ್ಪಿಸುವ ಮಾದಲಿ, ಅನ್ನವನ್ನು ಹೂಗಾರರು ಮತ್ತು ಮಾಂಸದ ನೈವೇದ್ಯ ಮುಲ್ಲಾಗಳು ಪಡೆದರು.

ಗಂಧೋತ್ಸವದಲ್ಲಿ ಭಾಗಹಿಸಿದ ಎಲ್ಲರಿಗೂ ಗಂಧ ನೀಡಲಾಗುತ್ತದೆ. ಐದು ದಿನಗಳ ಬಳಿಕ ಸೋಮವಾರ ಕಳಸಗಳನ್ನು ಮೆರವಣಿಗೆಯಲ್ಲಿ
ಒಯ್ದು ಪೂಜಾರಿ ಮನೆಯಲ್ಲಿ ಇರಿಸಲಾಯಿತು.

ನಾಗರಕಟ್ಟೆಗೆ ಮುಲ್ಲಾಗಳೇ ಪೂಜಾರಿ

ಬೆಟ್ಟದ ಮೇಲಿನ ದರ್ಗಾದ ಮೂರ್ತಿಗೆ ಹೂಗಾರ ಮನೆಯವರು ತಲೆ ಮಾರುಗಳಿಂದ ಪೂಜೆ ಮಾಡುತ್ತಿದ್ದಾರೆ. ಬೆಟ್ಟದ ಬುಡದಲ್ಲಿನ ಹಾವಿನ ಕೆತ್ತನೆ ಇರುವ ‘ನಾಗರಕಟ್ಟೆ’ಗೆ ಮುಲ್ಲಾಗಳೇ ಪೂಜಾರಿ ಆಗಿದ್ದಾರೆ. ಕಟ್ಟೆಯ ಮೇಲೆ ಕೂತ ಮುಲ್ಲಾ ಕುರಾನ್‌ನ ಫಾತೆ ಓದಿದರೆ, ಹಿಂದೂ–ಮುಸ್ಲಿಮರ ತಲೆ ಬಾಗಿ ನಾಗರಕಟ್ಟೆಗೆ ನಮಸ್ಕರಿಸುತ್ತಾರೆ.

ಎಲ್ಲರೂ ಅಣ್ಣ–ತಮ್ಮರಂತೆ ಇದ್ದೇವೆ. ಶಾಂತಿಯಿಂದ ಜಾತ್ರೆ ಆಚರಿಸುತ್ತಿದ್ದೇವೆ. ಕಾಯಿ, ಕರ್ಪೂರ ನಾವು ಪಡೆದರೇ ಮಾಂಸ ನೈವೇದ್ಯ ಮುಲ್ಲಾಗಳು ಪಡೆಯುವರು
-ಮಹಾದೇವ ಹೂಗಾರ, ದರ್ಗಾ ಪೂಜಾರಿ

ಹಿಂದೂ–ಮುಸ್ಲಿಮರು ಸೇರಿ ಎಲ್ಲರೂ ಸಹೋದರರಂತೆ ಗಂಧೋತ್ಸವ ಆಚರಿಸಿದ್ದೇವೆ. ಹಿರಿಯರು ಕಲಿಸಿದ ಈ ಸಹೋದರತೆ ಭಾವವನ್ನು ಮಕ್ಕಳಿಗೂ ಕಲಿಸುತ್ತಿದ್ದೇವೆ
-ಮಹಮ್ಮದ್ ಶಬ್ಬೀರ್, ನಾಗರಕಟ್ಟೆ ಮುಲ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT