ಶನಿವಾರ, ಆಗಸ್ಟ್ 13, 2022
24 °C
ದಾಸ್ತಾನು ಅಡ್ಡೆಯಾಗಿದ್ದ ಲಕ್ಷ್ಮಣ ನಾಯಕ ತಾಂಡಾ ಹೊರವಲಯದ ಕೋಳಿ ಫಾರಂ

ಕಲಬುರ್ಗಿ ಜಿಲ್ಲೆಯಿಂದ ರಾಜ್ಯದ ವಿವಿಧೆಡೆಗೆ ಪೂರೈಕೆಯಾಗುತ್ತಿತ್ತು ಗಾಂಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾವನ್ನು ಸಂಗ್ರಹಿಸಿ ಬೇರೆಡೆ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕಾಳಗಿ ತಾಲ್ಲೂಕಿನ ಲಕ್ಷ್ಮಣ ನಾಯಕ ತಾಂಡಾ ಇದೀಗ ಸುದ್ದಿಯಲ್ಲಿದೆ.

ರಾಜ್ಯ ಹಾಗೂ ನೆರೆಯ ತೆಲಂಗಾಣಕ್ಕೆ ಇಲ್ಲಿಂದಲೇ ಗಾಂಜಾ ರವಾನೆಯಾಗುತ್ತಿತ್ತು ಎಂಬ ಮಾಹಿತಿ ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಹೊರಬಿದ್ದಿದೆ.

‘ಕಾಳಗಿ ಪಟ್ಟಣಕ್ಕೆ ಹೊಂದಿಕೊಂಡೇ ಇರುವ ಲಕ್ಷ್ಮಣ ನಾಯಕ ತಾಂಡಾ (ಲಚ್ಚು ನಾಯಕ ತಾಂಡಾ)ದಲ್ಲಿ ಆರೋಪಿ ಚಂದ್ರಕಾಂತ ಚವ್ಹಾಣ ನಾಲ್ಕೈದು ವರ್ಷಗಳಿಂದ ಕುರಿ ಹಾಗೂ ಕೋಳಿ ಸಾಕಾಣಿಕೆ ಮಾಡುತ್ತಿದ್ದರು. ಇದಕ್ಕಾಗಿ ಪಶು ಸಂಗೋಪನಾ ಇಲಾಖೆಯಿಂದ ಸಬ್ಸಿಡಿಯನ್ನೂ ಪಡೆದುಕೊಂಡಿದ್ದರು. ಕುರಿ, ಕೋಳಿ ಸಾಕುತ್ತಿದ್ದುದರಿಂದ ಹೊರ ಊರಿನ ಜನ ಅತ್ತ ಕಡೆ ಹೋದರೆ ಯಾರಿಗೂ ಸಂಶಯ ಬರುತ್ತಿರಲಿಲ್ಲ. ಇದನ್ನೇ ಅವಕಾಶವಾಗಿ ಬಳಸಿಕೊಂಡ ಚಂದ್ರಕಾಂತ, ಕೋಳಿ ಫಾರಂ ಶೆಡ್‌ನಲ್ಲಿ  ಬಂಕರ್‌ ಮಾದರಿಯಲ್ಲಿ ನೆಲದಲ್ಲಿ ಆಳೆತ್ತರದ ಟ್ಯಾಂಕ್‌ ನಿರ್ಮಿಸಿ ಅಲ್ಲಿ ಗಾಂಜಾ ಚೀಲಗಳನ್ನು ಹುದುಗಿಸಿ ಇಡುತ್ತಿದ್ದರು’ ಎಂಬುದು ಪೊಲೀಸ್‌ ಮೂಲಗಳ ಮಾಹಿತಿ.

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ನಾಗನಾಥ, ವಿಜಯಪುರ ಜಿಲ್ಲೆ ಆಲಮೇಲದ ಸಿದ್ದನಾಥ ಲಾವಟೆ ಎಂಬುವವರೊಂದಿಗೆ ಗಾಂಜಾ ಮಾರಾಟ ಮಾಡುವ ದಂದೆ ಮಾಡುತ್ತಿದ್ದ ಚಂದ್ರಕಾಂತ, ಒಡಿಶಾದಿಂದ ತೆಲಂಗಾಣಕ್ಕೆ ಬರುತ್ತಿದ್ದ ಗಾಂಜಾವನ್ನು ಲಾರಿಯೊಂದರ ತಳದಲ್ಲಿ ಹಾಕಿಕೊಂಡು ಮೇಲ್ಭಾಗದಲ್ಲಿ ತರಕಾರಿ ಹೇರುತ್ತಿದ್ದರು. ಇದರಿಂದ ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರಿಗೆ ಸಂದೇಹ ಬರುತ್ತಿರಲಿಲ್ಲ. ಲಾರಿಯನ್ನು ತಾಂಡಾದಲ್ಲಿರುವ ಹೊಲದ ಶೆಡ್ ಬಳಿ ತಂದು ತರಕಾರಿಯ ಅಡಿಯಲ್ಲಿಯ ಗಾಂಜಾ ದಾಸ್ತಾನನ್ನು ಅಡಗಿಸಿ ಇಡುತ್ತಿದ್ದರು.

ಆಲಮೇಲದ ಸಿದ್ದನಾಥ ಲಾವಟೆ ನೀಡಿದ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಬೆಂಗಳೂರಿನಿಂದ ಬಂದಿದ್ದ ಪೊಲೀಸರ ತಂಡ ಮಾಡಬೂಳ ಬಳಿಯ ಚೆಕ್‌ ಪೋಸ್ಟ್‌ನಲ್ಲಿ ಗಾಂಜಾ ಹೇರಿಕೊಂಡು ಹೊರಟಿದ್ದ ನಾಗನಾಥ ಹಾಗೂ ಚಂದ್ರಕಾಂತನನ್ನು ವಶಕ್ಕೆ ಪಡೆಯಿತು.  ಅವರನ್ನು ಕರೆದುಕೊಂಡು ತಾಂಡಾದ ಹೊಲಕ್ಕೆ ಹೋದಾಗ 1350 ಕೆ.ಜಿ.ಯಷ್ಟು ಭಾರಿ ಪ್ರಮಾಣದ ಗಾಂಜಾ ದಾಸ್ತಾನು ಸಿಕ್ಕಿದೆ.

ಒಟ್ಟು 600 ಪ್ಯಾಕೆಟ್‌ನಲ್ಲಿ 1200 ಕೆ.ಜಿ. ಗಾಂಜಾ ಸಿಕ್ಕಿದ್ದು, 150 ಕೆ.ಜಿ. ಸಾಗಾಟ ಮಾಡುವ ಸಂದರ್ಭದಲ್ಲಿ ಸಿಕ್ಕಿದೆ. ಬುಧವಾರ ಸಂಜೆಯೇ ಗಾಂಜಾ ಸಂಗ್ರಹ ಹಾಗೂ ಮೂವರೂ ಆರೋಪಿಗಳೊಂದಿಗೆ ಶೇಷಾದ್ರಿಪುರಂ ಠಾಣೆ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ.

ಜಿಲ್ಲೆಯ ಪೊಲೀಸರ ವೈಫಲ್ಯ?

ಕಲಬುರ್ಗಿ ಜಿಲ್ಲೆ ಕಾಳಗಿಯ ಲಕ್ಷ್ಮಣ ನಾಯಕ ತಾಂಡಾ ಗಾಂಜಾ ಸಂಗ್ರಹ ಅಡ್ಡೆಯಾಗಿ ವರ್ಷಗಳಿಂದ ಅಕ್ರಮ ವಹಿವಾಟು ನಡೆಯುತ್ತಿದ್ದರೂ ಇಲ್ಲಿಯ ಪೊಲೀಸರು ಈ ಜಾಲವನ್ನು ಭೇದಿಸಲು ವಿಫಲರಾಗಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.

ಒಡಿಶಾದಿಂದ ತೆಲಂಗಾಣಕ್ಕೆ ಬಂದ ಸಂಗ್ರಹವನ್ನು ನಾಗನಾಥ ಹಾಗೂ ಚಂದ್ರಕಾಂತ ಅಷ್ಟೇ ಚಾಕಚಕ್ಯತೆಯಿಂದ ಲಾರಿಯಲ್ಲಿ ತುಂಬಿ ಚೆಕ್‌ ಪೋಸ್ಟ್ ಮೂಲಕ ತರುತ್ತಿದ್ದರು. ಅಷ್ಟು ದಿನವೂ ಈ ಜಾಲದ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಬೆಂಗಳೂರು ಪೊಲೀಸರು ಇಲ್ಲಿನ ಗಾಂಜಾ ಪೂರೈಕೆದಾರರ ಜಾಲವನ್ನು ಭೇದಿಸಿದ್ದು, ಜಿಲ್ಲೆಯ ಪೊಲೀಸ್ ಇಲಾಖೆ ಮುಜುಗರ ಉಂಟು ಮಾಡಿದೆ. 

ಮಾಹಿತಿ ನೀಡಲು ಎಸ್ಪಿ ನಕಾರ

ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಗಾಂಜಾ ದಾಸ್ತಾನು ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮಿ ಮರಿಯಮ್ ಜಾರ್ಜ್ ಅವರನ್ನು ಭೇಟಿ ಮಾಡಲು ಕಚೇರಿಗೆ ತೆರಳಿದ್ದರು. ಒಂದು ಗಂಟೆ ಕಾಯ್ದರೂ ಮಾಹಿತಿ ಕೊಡಲಿಲ್ಲ.

ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್ ಅವರು ಎಸ್ಪಿ ಅವರನ್ನು ಕರೆಸಿಕೊಂಡು ಗಾಂಜಾ ಪ್ರಕರಣದ ಮಾಹಿತಿ ಪಡೆದುಕೊಂಡರು.

ಕೊರೊನಾದಿಂದ ನಷ್ಟ, ಗಾಂಜಾದತ್ತ ಆಕರ್ಷಣೆ

ಬೀದರ್‌ ಜಿಲ್ಲೆ ಔರಾದ್‌ನ ನಾಗನಾಥ ಕೊರೊನಾ ಲಾಕ್‌ಡೌನ್‌ಗೂ ಮುನ್ನ ಬಟ್ಟೆ ಅಂಗಡಿ ಇಟ್ಟುಕೊಂಡು, ಫೈನಾನ್ಸ್ ವ್ಯವಹಾರವನ್ನೂ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದ ವ್ಯಾಪಾರವಿಲ್ಲದೇ ನಷ್ಟವಾಗಿದ್ದರಿಂದ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕೆ ಸಾಥ್ ನೀಡಿದ್ದು ಆಲಮೇಲದ ಸಿದ್ದನಾಥ ಲಾವಟೆ ಎಂಬ 30 ಎಕರೆ ಜಮೀನ್ದಾರ ಯುವಕ ಹಾಗೂ ಕಾಳಗಿಯ ಚಂದ್ರಕಾಂತ ಚವ್ಹಾಣ. ಮೂವರೂ ಸೇರಿಕೊಂಡು ರಾಜ್ಯದ ಬೆಂಗಳೂರು, ತೆಲಂಗಾಣ, ಮಹಾರಾಷ್ಟ್ರಕ್ಕೆ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂಬುದು ಪೊಲೀಸ್‌ ಮೂಲಗಳ ಮಾಹಿತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು