ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ | ಕೂಲಿಕಾರರ ಮಕ್ಕಳಿಗೆ ಆಸರೆಯಾದ ‘ಕೂಸಿನ ಮನೆ’

Published 29 ಜನವರಿ 2024, 15:46 IST
Last Updated 29 ಜನವರಿ 2024, 15:46 IST
ಅಕ್ಷರ ಗಾತ್ರ

ಅಫಜಲಪುರ: ನರೇಗಾ ಯೋಜನೆ ಅಡಿಯಲ್ಲಿ ತಾಲೂಕಿನ ಅಲ್ಲಲ್ಲಿ ಈಗಾಗಲೇ ಕೆಲಸ ಆರಂಭವಾಗಿದ್ದು, ಕೆಲಸಕ್ಕೆ ಹೋಗುವ ಮಹಿಳಾ ಕಾರ್ಮಿಕರಿಗೆ ಅನುಕೂಲವಾಗುವಂತೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಕೂಸಿನ ಮನೆ ಆರಂಭಿಸಲಾಗಿದೆ. ಅದರಂತೆ ಗೌರ (ಬಿ) ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಕೂಸಿನ ಮನೆ ಆರಂಭವಾಗಿದ್ದರಿಂದ ಮಹಿಳೆಯರು ತಮ್ಮ ಮಕ್ಕಳನ್ನು ಬಿಟ್ಟು ಹೋಗಲು ಅನುಕೂಲವಾಗಿದೆ.

ಗೌರ (ಬಿ) ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಮೂಲ ಸೌಲಭ್ಯ ಹೊಂದಿರುವ ಸುಂದರವಾದ ಶಿಶು ಪಾಲನಾ ಕೇಂದ್ರ ‘ಕೂಸಿನ ಮನೆ’ ಆರಂಭವಾಗಿದೆ. ಮಕ್ಕಳನ್ನು ಅಲ್ಲಿರುವ ಮಹಿಳಾ ಕಾರ್ಮಿಕರು ನೋಡಿಕೊಳ್ಳುತ್ತಾರೆ. ಸೋಮವಾರ ಕೂಸಿನ ಮನೆಗೆ ಭೇಟಿ ನೀಡಿದಾಗ ಮಕ್ಕಳು ಆಟವಾಡುತ್ತಿದ್ದವು ಮತ್ತು ಅವರಿಗೆ ಉಪಾಹಾರ ನೀಡಲಾಗಿತ್ತು.

‘ಕೂಸಿನ ಮನೆಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಮಕ್ಕಳಿಗೆ ಶುದ್ಧೀಕರಿಸಿದ ನೀರು ಮತ್ತು ಆಟಿಕೆ ಸಾಮಾನುಗಳನ್ನು ನೀಡಲಾಗಿದೆ. ಮೇಲಿಂದ ಮೇಲೆ ಕೂಸಿನ ಮನೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ’ ಎಂದು ಗ್ರಾಮಸ್ಥರು ಹೇಳಿದರು.

ಈ ಬಗ್ಗೆ ಮಾಹಿತಿ ನೀಡಿದ ಗೌರ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಬಾನಾ ಬೇಗಂ ಇಮಾಮ್ ಸಾಬ್ ಶೇಕ್, ‘ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಮಕ್ಕಳನ್ನ ಕೂಸಿನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಆ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಕೂಸಿನ ಮನೆಯನ್ನು ನೋಡಿಕೊಳ್ಳುವವರಿಗೆ ನರೇಗಾ ಅಡಿಯಲ್ಲಿ ದಿನದ ಕೂಲಿ ನೀಡಲಾಗುತ್ತದೆ. ಸರ್ಕಾರ ಕೂಸಿನ ಮನೆಗೆ ₹1 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಮುಂದೆ ಅನುದಾನ ಅವಶ್ಯಕತೆ ಇದ್ದರೆ ಗ್ರಾಮ ಪಂಚಾಯಿತಿ ತೆರಿಗೆ ಹಣ ಇಲ್ಲವೇ 15ನೇ ಹಣಕಾಸು ಯೋಜನೆಯಲ್ಲಿ ಖರ್ಚು ಮಾಡಲಾಗುತ್ತದೆ’ ಎಂದು ತಿಳಿಸಿದರು.

ಕೂಸಿನ ಮನೆ ಆರಂಭೋತ್ಸವ ಕಾರ್ಯಕ್ರಮದಲ್ಲಿ ಲಕ್ಷ್ಮಿ ಲಕ್ಷ್ಮಿಪುತ್ರ ನಿಂಬರಗಿ, ಸರಸ್ವತಿ ನಿಂಬರಗಿ, ಹೇಮಾ ಹೊಸಮನಿ, ಪ್ರಮುಖರಾದ ಸಿದ್ದರಾಮಪ್ಪ ಪಾಟೀಲ, ಮಾರುತಿ ಮಾಂಗ, ಸಿಬ್ಬಂದಿ ಶರಣು ತಳವಾರ, ಮಡೆಮ್ಮಾ ಕುಂಬಾರ, ಶರಣು ದಿವಾಣಜಿ ಪಾಲ್ಗೊಂಡಿದ್ದರು.

ಕೃಷಿ ಕಾರ್ಮಿಕರಿಗೆ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ತಮ್ಮ ಮಕ್ಕಳನ್ನು ಪಾಲನೆ ಪೋಷಣೆ ಮಾಡಲು ಕೂಸಿನ ಮನೆ ಆಸರೆಯಾಗಿದೆ.
ಶಬಾನಾ ಬೇಗಂ ಇಮಾಮ್ ಸಾಬ್ ಶೇಕ್, ಗೌರ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷೆ
ರಾಜ್ಯ ಸರ್ಕಾರ ತಲಾ ಒಂದು ಪಂಚಾಯಿತಿಗೆ ₹1 ಲಕ್ಷದಂತೆ 22 ಗ್ರಾಮ ಪಂಚಾಯಿತಿಗಳಿಗೆ ಕೂಸಿನ ಮನೆ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ ಕೆಲವು ಕಡೆ ಆರಂಭವಾಗುತ್ತಿವೆ.
ರಮೇಶ್ ಪಾಟೀಲ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT