ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲಕ್ಕೆ ಬಿಲ್‌ ನೀಡದ ಅಧಿಕಾರಿಗಳಿಗೆ ನೋಟಿಸ್‌

ಜೆಸ್ಕಾಂ ವ್ಯಾಪ್ತಿಯ ವಿದ್ಯುತ್‌ ಗ್ರಾಹಕರ ಸಭೆ ನಡೆಸಿದ ಜೆಸ್ಕಾಂ ಎಂ.ಡಿ. ಡಾ.ರಾಗಪ್ರಿಯಾ
Last Updated 10 ಜುಲೈ 2019, 13:54 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರತಿ ತಿಂಗಳು ನಿಗದಿತ ಸಮಯಕ್ಕಿಂತ ತಡವಾಗಿ ಗ್ರಾಹಕರಿಗೆ ಬಿಲ್‌ ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್‌.ರಾಗಪ್ರಿಯಾ, ಸಂಬಂಧಪಟ್ಟ ಸೆಕ್ಷನ್‌ ಅಧಿಕಾರಿ ಹಾಗೂ ಲೈನ್‌ಮನ್‌ಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದರು.

ಜೆಸ್ಕಾಂ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಗ್ರಾಹಕರ ಸಭೆಯಲ್ಲಿ ಹಲವು ಗ್ರಾಹಕರು ತಡವಾಗಿ ವಿದ್ಯುತ್‌ ಬರುವ ಬಗ್ಗೆಯೇ ದೂರು ಹೇಳಿದರು.‌

‘ತಡವಾಗಿ ಬಿಲ್‌ ಬರುವುದರಿಂದ ಮರುಪಾವತಿ ಮಾಡುವಾಗ ದಂಡವನ್ನೂ ವಿಧಿಸುತ್ತಾರೆ. ಇದರಿಂದಾಗಿ ನಮ್ಮ ಸಂಸ್ಥೆಗಳ ಲೆಕ್ಕ ಪರಿಶೋಧಕರು ದಂಡ ಪಾವತಿ ಮಾಡಿದ್ದಕ್ಕೆ ಆಕ್ಷೇಪ ಎತ್ತುತ್ತಿದ್ದಾರೆ. ಸಕಾಲಕ್ಕೆ ಬಿಲ್‌ ತಲುಪಿಸುವಂತೆ ಹೇಳಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದ್ದಾರೆ’ ಎಂದು ಹಲವು ಗ್ರಾಹಕರು ಅಲವತ್ತುಕೊಂಡರು.

ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ ಡಾ.ರಾಗಪ್ರಿಯಾ ಸೆಕ್ಷನ್‌ ಅಧಿಕಾರಿ ರಘೋತ್ತಮ ಹಾಗೂ ಸಂಬಂಧಪಟ್ಟ ಫೀಡರ್‌ನ ಲೈನ್‌ಮನ್‌ಗೆ ಷೋಕಾಸ್‌ ನೋಟಿಸ್‌ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವೊಡಾಫೋನ್ ಕಂಪನಿಯ ಪ್ರತಿನಿಧಿ ಸಭೆಯಲ್ಲಿ ಮಾತನಾಡಿ, ‘ನಮಗೆ ಪ್ರತಿ ತಿಂಗಳು 5ನೇ ತಾರೀಖಿಗೆ ಬಿಲ್‌ ಕೊಡಬೇಕಿದ್ದರೂ, 10ನೇ ತಾರೀಖಿನ ಬಳಿಕವೇ ಕೊಡುತ್ತಾರೆ. ಒಂದೊಂದು ಬಾರಿ ನಾವೇ ಅಧಿಕಾರಿಗಳ ಹಿಂದೆ ಬಿದ್ದು ಬಿಲ್‌ ಪಡೆಯಬೇಕಿದೆ’ ಎಂದರು.

ಇದಕ್ಕೆ ಗರಂ ಆದ ರಾಗಪ್ರಿಯಾ, ‘ಗ್ರಾಹಕರಿಗೆ ಬಿಲ್‌ ಕೊಡುವುದು ಅಧಿಕಾರಿಗಳು ಜವಾಬ್ದಾರಿ. ಯಾವುದೇ ಕಾರಣಕ್ಕೂ 5ನೇ ತಾರೀಖಿನ ನಂತರ ಬಿಲ್‌ ಕೊಡುವಂತಿಲ್ಲ. ಆ ಮೇಲೆ ಪಾವತಿಗೆ ಸಮಯವಾದರೂ ನೀಡಬೇಕಲ್ಲ. ಹೀಗೇ ವಿಳಂಬ ಧೋರಣೆ ಅನುಸರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ’ ಎಂದು ತಾಕೀತು ಮಾಡಿದರು.

‘ಕಂಪ್ಯೂಟರ್‌ ಬದಲು ಕೈಯಿಂದ ಬಿಲ್‌ ಬರೆಯುತ್ತಿರುವುದರಿಂದ ತಡವಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಲು ಮುಂದಾದರು. ‘ಕಂಪ್ಯೂಟರ್‌ ಮೂಲಕ ಬಿಲ್‌ ಪಡೆಯುವುದು ಸರ್ವರ್‌ ಮತ್ತಿತರ ಸಮಸ್ಯೆಯಿಂದಾಗಿ ವಿಳಂಬವಾಗುತ್ತದೆ. ಕೈಯಿಂದ ಬರೆದುಕೊಡುವುದರಿಂದ ಬೇಗನೇ ಮುಗಿಸಬಹುದಲ್ಲ’ ಎಂದು ರಾಗಪ್ರಿಯಾ ಅವರು ಸಲಹೆ ನೀಡಿದರು.

ಹಲವು ಬಾರಿ ವಿದ್ಯುತ್‌ ಕಡಿತ: ಯಾದಗಿರಿಯ ರಾಯಲಸೀಮಾ ಕಾಂಕ್ರೀಟ್ಸ್‌ ಸಂಸ್ಥೆಯ ಪ್ರತಿನಿಧಿ ಮಾತನಾಡಿ, ‘ಹಲವು ಬಾರಿ ಎಚ್‌ಟಿ ಲೈನ್‌ಗಳಲ್ಲಿ ಕಡಿತ ಮಾಡುವುದರಿಂದ ಅನಿವಾರ್ಯವಾಗಿ ಡೀಸೆಲ್‌ ಬಳಸಬೇಕಾಗುತ್ತದೆ. ಜೆಸ್ಕಾಂ ಇಷ್ಟೇ ಮೌಲ್ಯದ ವಿದ್ಯುತ್‌ಗೆ ₹ 20 ಸಾವಿರ ಬಿಲ್‌ ಮಾಡುತ್ತದೆ. ಡೀಸೆಲ್‌ ಬಳಕೆಯಿಂದ ₹ 2 ಲಕ್ಷ ಖರ್ಚು ಬರುತ್ತದೆ. ನಿರಂತರವಾಗಿ ವಿದ್ಯುತ್‌ ಪೂರೈಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕರು, ಎಚ್‌ಟಿ ಲೈನ್‌ ಫೀಡರ್‌ನಲ್ಲಿ ದೋಷಗಳು ಕಾಣಿಸಿಕೊಳ್ಳದಂತೆ ಜಾಗೃತಿ ವಹಿಸಿ ನಿರಂತರ ವಿದ್ಯುತ್‌ ಪೂರೈಸಬೇಕು ಎಂದು ಯಾದಗಿರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನಿರ್ದೇಶನ ನೀಡಿದರು.

ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಾಯಕ ಎಂಜಿನಿಯರ್‌ ಸುಮಂಗಲಾ ಮಾತನಾಡಿ, ‘10ನೇ ತಾರೀಖು ಮುಗಿಯುತ್ತಾ ಬಂದರೂ ಸಂಸ್ಥೆಗೆ ವಿದ್ಯುತ್‌ ಬಿಲ್‌ ಬಂದಿಲ್ಲ. ವಿದ್ಯುತ್‌ ಬಿಲ್‌ನ ತಾಂತ್ರಿಕ ದೋಷವನ್ನು ಸರಿಪಡಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ, ಆಗಿಲ್ಲ’ ಎಂದರು.

ಮುಖ್ಯ ಹಣಕಾಸು ಅಧಿಕಾರಿ ಬಿ.ಅಬ್ದುಲ್‌ ವಾಜಿದ್‌, ಪ್ರಧಾನ ಕಚೇರಿಯ ಮುಖ್ಯ ಎಂಜಿನಿಯರ್‌ (ವಿದ್ಯುತ್‌) ಲಕ್ಷ್ಮಣ ಚವ್ಹಾಣ, ಕಲಬುರ್ಗಿ ವಲಯದ ಮುಖ್ಯ ಎಂಜಿನಿಯರ್‌ ಆರ್‌.ಡಿ.ಚಂದ್ರಶೇಖರ್‌, ಹಣಕಾಸು ಸಲಹೆಗಾರ ರಜಾಕ್‌ ಮಿಯಾ, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ (ಎಂಆರ್‌ಟಿ–ಎಲ್‌ಡಿಸಿ) ಹೀರಾ ಸಿಂಗ್‌, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ (ಯೋಜನೆ) ಸಿದ್ರಾಮ ಪಾಟೀಲ ಸೇರಿದಂತೆ ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಕಾರ್ಯನಿರ್ವಾಹಕ ಎಂಜಿನಿಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT