ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಗೊಣಗಿ-ರಟಕಲ್ ರಸ್ತೆಗೆ ಡಾಂಬರ್ ಯಾವಾಗ?

ಭೂಮಿಪೂಜೆ ನೆರವೇರಿಸಿ 6 ತಿಂಗಳಾದರೂ ಶುರುವಾಗದ ಕಾಮಗಾರಿ, ಫಸಲು ಸಾಗಿಸಲು ತೀವ್ರ ತೊಂದರೆ
Last Updated 2 ಸೆಪ್ಟೆಂಬರ್ 2020, 7:47 IST
ಅಕ್ಷರ ಗಾತ್ರ

ಕಾಳಗಿ: ನೂರಾರು ರೈತರ ಅನುಕೂಲಕ್ಕಾಗಿ ತಾಲ್ಲೂಕಿನ ಗೊಣಗಿ- ರಟಕಲ್ ಹಳೆ ರಸ್ತೆಗೆ ಡಾಂಬರ್ ರಸ್ತೆ ಮಂಜೂರಾಗಿದೆ. ಕಾಮಗಾರಿ ಆರಂಭಕ್ಕೆ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಮಾರ್ಚ್ ಮೊದಲನೇ ವಾರದಲ್ಲಿ ಭೂಮಿಪೂಜೆ ಮಾಡಿದ್ದಾರೆ. ಆದರೆ, ಭೂಮಿಪೂಜೆ ಸಲ್ಲಿಸಿ 6 ತಿಂಗಳಾಗುತ್ತಿದ್ದರೂ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ ಎಂದು ರೈತರು ದೂರಿದ್ದಾರೆ.

ಬೆಡಸೂರ, ಗೊಣಗಿ, ಮುಕರಂಬಾ ಮತ್ತು ರಟಕಲ್ ಸೀಮೆಯ ಸುಮಾರು 400 ಎಕರೆ ಜಮೀನಿಗೆ ಸಂಪರ್ಕ ಕಲ್ಪಿಸುವ ಈ ಹಳೆ ರಸ್ತೆ ಬಹಳಷ್ಟು ವರ್ಷಗಳಿಂದ ಕೆಟ್ಟು ಹೋಗಿದೆ. ಪರಿಣಾಮ ಈ ರಸ್ತೆ ಬದಿಯ ಹೊಲಗಳಿಗೆ ಓಡಾಡುವ ರೈತರು, ಕೂಲಿಕಾರರು, ಜಾನುವಾರುಗಳು ಪಡಬಾರದ ಕಷ್ಟ ಪಡುತ್ತಿದ್ದರು.

ರೈತರ ಕೋರಿಕೆಯ ಮೇರೆಗೆ ಕ್ಷೇತ್ರದ ಚಿಂಚೋಳಿ ಶಾಸಕರು 1 ಕಿ.ಮೀ ಡಾಂಬರ್ ರಸ್ತೆ ಮಂಜೂರುಗೊಳಿಸಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ₹33 ಲಕ್ಷ ಅನುದಾನ ಕಲ್ಪಿಸಿದ್ದಾರೆ. ಅದರಂತೆ ಕಾಮಗಾರಿ ನಿರ್ವಹಣೆಯನ್ನು ಪಂಚಾಯತ್ ರಾಜ್ ಇಲಾಖೆಗೆ ನೀಡಿದ್ದು ಟೆಂಡರ್ ಪ್ರಕ್ರಿಯೆ ಮುಗಿದು ಚಾಲನೆ ಸಹ ದೊರೆತಿದೆ.

ಇನ್ನೇನು ಹಳೆ ರಸ್ತೆ ಹೋಗಿ ಡಾಂಬರ್ ರಸ್ತೆಯಾಗುತ್ತಿದೆ. ನಮ್ಮ ದೈನಂದಿನ ಕಷ್ಟ ತಪ್ಪುತ್ತಿದೆ ಎಂದುಕೊಂಡಿದ್ದ ರೈತಾಪಿ ಜನರ ಸಂಕಷ್ಟ ಇನ್ನೂ ತಪ್ಪದಾಗಿದೆ ಎಂದು ಸದ್ಯ ಕೆಸರಿನಲ್ಲಿ ಸಂಚರಿಸಲು ಹರಸಾಹಸ ಪಡುತ್ತಿರುವ ರೈತರು ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡಿದ್ದಾರೆ.

ದಿನ ಕಳೆದಂತೆ ಹಳೆ ರಸ್ತೆ ತೀವ್ರ ಹದಗೆಟ್ಟು ನಡೆದಾಡಲು ಬರದಂತಾಗಿದೆ. ಎತ್ತಿನಬಂಡಿ, ಟ್ರ್ಯಾಕ್ಟರ್, ರಾಶಿ ಮಷೀನ್‌ಗಳು ಕೆಸರು ಗುಂಡಿಯಲ್ಲಿ ಸಿಕ್ಕಿ ಬೀಳುತ್ತಿವೆ.

ರಾಶಿಗೆ ಬಂದ ಉದ್ದು, ಹೆಸರು ಬಿಡಿಸಿ ಮನೆಗೆ ತರುವುದಾದರು ಹೇಗೆ ಎಂಬ ಚಿಂತೆ ಎಲ್ಲರಲ್ಲಿ ಕಾಡುತ್ತಿದೆ. ಹೇಗಾದರೂ ಮನೆಗೆ ರಾಶಿ ತರಲೇಬೇಕಲ್ಲ ಎಂದುಕೊಂಡು ಒಂದು ಕತ್ತೆಗೆ ₹500ರಂತೆ ಕತ್ತೆ ಮೇಲೆ ಚೀಲ ಹೊರಿಸಿ ರಾಶಿ ಮನೆಗೆ ತರಲಾಗುತ್ತಿದೆ ಎಂದು ಮುಕರಂಬಾ ರೈತ ಸಿದ್ದಣ್ಣಾ ಗೋಗಿ, ಸುಭಾಷ ಕಿಣಗಿ ತಿಳಿಸಿದರು.

ಈ ಭಾಗದ ರೈತರಿಗೆ ದೇವರು ವರ ಕರುಣಿಸಿದರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ. ಈ ಎಲ್ಲಾ ಅವಾಂತರಕ್ಕೆ ಕಾರಣರಾಗಿರುವ ಗುತ್ತಿಗೆದಾರರ ಪರವಾನಗಿ ರದ್ದುಗೊಳಿಸಬೇಕು ಎಂದು
ಗೊಣಗಿ ಗ್ರಾಮದ ಮುಖಂಡ ಶಿವರಾಜ ಪಾಟೀಲ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT