ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಸಾಧನೆ; 3ನೇ ಬಾರಿ ಜಿಲ್ಲಾಮಟ್ಟಕ್ಕೆ ಆಯ್ಕೆ

Published : 23 ಸೆಪ್ಟೆಂಬರ್ 2024, 6:11 IST
Last Updated : 23 ಸೆಪ್ಟೆಂಬರ್ 2024, 6:11 IST
ಫಾಲೋ ಮಾಡಿ
Comments

ಸೇಡಂ: ಈ ಸರ್ಕಾರಿ ಶಾಲೆಯಲ್ಲಿ ಆಟಕ್ಕೆ ಸೂಕ್ತ ಮೈದಾನವಿಲ್ಲ. ಆಟ ಆಡಿಸಲು ದೈಹಿಕ ಶಿಕ್ಷಣ ಶಿಕ್ಷಕರೂ ಇಲ್ಲ. ಆದರೂ ಸಹ ಈ ಶಾಲೆಯ ವಿದ್ಯಾರ್ಥಿಗಳು ಸತತ ಮೂರು ವರ್ಷ ತಾಲ್ಲೂಕು ಮಟ್ಟದ ಕೊಕ್ಕೋ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸುತ್ತಿದ್ದಾರೆ.

ತಾಲ್ಲೂಕಿನ ಆಂಧ್ರ ಗಡಿಯಂಚಿನ ಶಿಲಾರಕೋಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸತತ ಮೂರನೇ ಬಾರಿ ಕೊಕ್ಕೋ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ತೆರಳಿ ಗಮನಾರ್ಹ ಸಾಧನೆ ಮಾಡಿದ್ದಾರೆ. 1957ರಲ್ಲಿ ಪ್ರಾರಂಭವಾದ ಶಾಲೆಗೆ 2010ರಲ್ಲಿ ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಯನ್ನು ಮಂಜೂರು ಮಾಡಿದ್ದು, ಇಲ್ಲಿಯವರೆಗೆ ಭರ್ತಿಯಾಗಿಲ್ಲ.

2022, 2023 ಮತ್ತು 2024ರಲ್ಲಿ ಬಾಲಕರ ಪ್ರಾಥಮಿಕ ವಿಭಾಗದ ಕೊಕ್ಕೊ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕೊಕ್ಕೊದಲ್ಲಿ ಆಸಕ್ತಿ ಬೆಳೆಯಲು ಶಾಲೆಯ ಹಳೆ ವಿದ್ಯಾರ್ಥಿ ಭೀಮರೆಡ್ಡಿ ಅಕುದೋಟ ಎನ್ನುವುದು ಎಲ್ಲರ ಅಭಿಮತ.

ಶಾಲೆಯಲ್ಲಿ ಪ್ರಸ್ತುತ 246 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಈ ವರ್ಷ ಆಂಗ್ಲಮಾಧ್ಯಮ ಶಿಕ್ಷಣ ಮಂಜೂರಾಗಿದೆ. ಶಾಲೆಯ ಮುಖ್ಯಶಿಕ್ಷಕ ಅಶೋಕ ವಟಾರ, ರಮೇಶ ಹುಜಗೊಂಡ, ಪುಷ್ಪ ಬೋಸಗ ಮತ್ತು ಅಮೃತ ಪಾಟೀಲ ಸೇರಿ ನಾಲ್ವರು ಕಾಯಂ ಶಿಕ್ಷಕರಿದ್ದು, 6 ಜನ ಅತಿಥಿ ಶಿಕ್ಷಕರಿದ್ದಾರೆ.

ಖಾಸಗಿ ಜಾಗವನ್ನೇ ಮೈದಾನ ಮಾಡಿಕೊಂಡ ವಿದ್ಯಾರ್ಥಿಗಳು: ಗ್ರಾಮದಲ್ಲಿ ಖಾಲಿಯಿದ್ದ ಖಾಸಗಿ ನಿವೇಶವನ್ನೇ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಲಾಯತ್ ಮಿಜಾವರ, ರಾಮಕೃಷ್ಣ ಕುಂಬಾರ, ನಾಗಪ್ಪ ಕುಂಬಾರ ಮತ್ತು ಮಲ್ಲಿಕಾರ್ಜುನ ಅಡಿಕೇರಿ ನೆಲ ಸಮತಟ್ಟಾಗಿಸಿ, ಮೈದಾನ ನಿರ್ಮಿಸಿದ್ದಾರೆ. ಇದಕ್ಕೆ ಶಾಲೆಯ ಶಿಕ್ಷಕರು ಸಹಕಾರ ನೀಡುತ್ತಿದ್ದು, ಗ್ರಾಮದ ಮುಖಂಡ ಆಟಕ್ಕೆ ಸ್ಥಳವಕಾಶ ನೀಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಇಲ್ಲದಿದ್ದರೂ ಸಹ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ತೆರಳುತ್ತಿರುವುದು ಶಿಲಾರಕೋಟ ಸೇರಿದಂತೆ ಸುತ್ತಲಿನ ಗ್ರಾಮ ಹಾಗೂ ತಾಲ್ಲೂಕಿನಲ್ಲಿ ಅಚ್ಚರಿ ಮೂಡಿಸಿದೆ. ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ವ್ಯಕ್ತವಾಗುತ್ತಿದ್ದು, ಕಾಯಂ ದೈಹಿಕ ಶಿಕ್ಷಣ ನೀಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಹುಟ್ಟೂರಿಗೆ ಕೊಡುಗೆ ಇರಲೆಂಬ ಅಭಿಲಾಷೆ

‘ನಾನು ಕೆಲಸಕ್ಕೆಂದು ಹೈದರಾಬಾದ್‌ಗೆ ಹೋಗಿ ಕೊರೊನಾ ಅವಧಿಯಲ್ಲಿ ಗ್ರಾಮಕ್ಕೆ ಮರಳಿದೆ. ಊರಲ್ಲಿದ್ದು ಗ್ರಾಮಕ್ಕೆ ಏನಾದರೂ ಮಾಡಬೇಕೆಂಬ ಅಭಿಲಾಷೆಯಿಂದ ನಮ್ಮೂರ ಶಾಲೆಯ ವಿದ್ಯಾರ್ಥಿಗಳಿಗೆ ಕೊಕ್ಕೊ ಕಲಿಸಲು 2019ರಿಂದ ಪ್ರಾರಂಭಿಸಿದೆ. ಆರಂಭದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾದವು. ಕುಗ್ಗದೆ ನಿರಂತರ ಪ್ರಯತ್ನಿಸಿದೆ ಅದರ ಪ್ರತಿಫಲದಿಂದ ಶಾಲೆಯ ವಿದ್ಯಾರ್ಥಿಗಳು 3 ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದರಿಂದ ಜನರ ಬೆಂಬಲ ಸಿಗುತ್ತಿದೆ’ ಎನ್ನುತ್ತಾರೆ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಭೀಮರೆಡ್ಡಿ ಅಕುದೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT