ಶುಕ್ರವಾರ, ಆಗಸ್ಟ್ 19, 2022
27 °C
ಪಂಚಾಯಿತಿ ಕಟ್ಟೆ, ಶಾಲೆ ಮೈದಾನಗಳಲ್ಲಿ ಚುನಾವಣೆಯದೇ ಚರ್ಚೆ; ಪಕ್ಷದ ಆಚೆಗೂ ಅಂಟಿಕೊಂಡ ಆತ್ಮೀಯತೆ

ಕಲಬುರ್ಗಿ: ಹಳ್ಳಿಗಳಲ್ಲಿ ನವೋಲ್ಲಾಸ ತಂದ ಚುನಾವಣೆ

ಸಂತೋಷ ಈ.ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಎಂಟು ತಿಂಗಳಿಂದ ಕೊರೊನಾ, ಪ್ರವಾಹ, ಅತಿವೃಷ್ಟಿ, ಬೆಳೆ ನಷ್ಟ... ಮುಂತಾದ ಗೋಳಿನ ಸಂಗತಿಗಳೇ ಚರ್ಚೆ ಆಗುತ್ತಿದ್ದವು. ಇದೀಗ ಚುನಾವಣೆಯ ಕಾರಣ ಹಳ್ಳಿಕಟ್ಟೆಗಳ ‘ಮೂಡ್‌’ ಬದಲಾಗಿದೆ. ಗ್ರಾಮೀಣ ಬದುಕಿನಲ್ಲಿ ಹೊಸ ಚೈತನ್ಯ ಚಿಗುರೊಡೆದಿದೆ. ದಿನವಿಡೀ ಗ್ರಾಮ ರಾಜಕಾರಣದ್ದೇ ಮಾತು.‌

ಅದರಲ್ಲೂ ಈ ಬಾರಿ 40 ವರ್ಷ ವಯಸ್ಸಿನೊಳಗೆ ಇದ್ದವರೇ ಹೆಚ್ಚಾಗಿ ಸ್ಪರ್ಧೆ ಒಡ್ಡಿದ್ದಾರೆ. ಲಾಕ್‌ಡೌನ್‌ ಕಾರಣ ದೊಡ್ಡದೊಡ್ಡ ನಗರಗಳ ವಲಸೆಯಿಂದ ಮರಳಿ ಬಂದವರೂ  ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯರಾಗಿದ್ದಾರೆ. ಹೀಗಾಗಿ, ಈ ಹಿಂದಿನ ಎಲ್ಲ ಚುನಾವಣೆಗಳಿಗಿಂತ ಈ ಬಾರಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.‌

ಕೆಲವರಂತೂ ಈ ಹಿಂದೆ ಚುನಾವಣೆ ಮಾಡಿ ಅನುಭವ ಪಡೆದಿರುವ ತಮ್ಮ ಕುಟುಂಬದ ಸಂಬಂಧಿಕರು, ಹಿರಿಯರು, ಯುವಕರನ್ನು ಕರೆಸಿಕೊಂಡಿದ್ದಾರೆ. ಉಮೇದುವಾರರಿಗೆ ನೈತಿಕ ಬೆಂಬಲ ಕೊಡುವ ಉದ್ದೇಶದಿಂದ ಹಲವರು ವಾರಕ್ಕೂ ಮುಂಚೆಯೇ ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ. ಮಹಿಳಾ ಉಮೇದುವಾರರಂತೂ ತಮ್ಮ ತವರಿನ ಶಕ್ತಿಗಳನ್ನೂ ಕರೆಯಿಸಿಕೊಂಡು ಓಡಾಡುತ್ತಿದ್ದಾರೆ. ಗೃಹಿಣಿಯರು, ಯುವತಿಯರ ತಂಡ ಕಟ್ಟಿಕೊಂಡು ಲವಲವಿಕೆಯಿಂದ ಪ್ರಚಾರದಲ್ಲಿ ತೊಡಗಿದ್ದಾರೆ.

ಕಲ್ಲಹಂಗರಗಾ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೆರಡೇ (ಡಿ. 22) ದಿನ ಬಾಕಿ ಇದೆ. ಈಗಾಗಲೇ ಹಳ್ಳಿಗಳಲ್ಲಿ ಕೊನೆಯ ಹಂತದ ಕಸರತ್ತುಗಳು ಬಿರುಸಿನಿಂದ ನಡೆದಿವೆ. ತಾಲ್ಲೂಕಿನ ಕಲ್ಲಹಂಗರಗಾ, ಅವರಾದ–ಬಿ, ತಾಜ್‌ಸುಲ್ತಾನಪುರ ಸೇರಿದಂತೆ ಬಹುಪಾಲು ಪಂಚಾಯಿತಿಗಳಲ್ಲಿ 40 ವರ್ಷ ಮೀರದ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಕಣದಲ್ಲಿದ್ದಾರೆ. ಇದರಿಂದಾಗಿ ಹಳ್ಳಿ ರಾಜಕೀಯಕ್ಕೆ ಈಗ ‘ಹರೆಯದ ಚೈತನ್ಯ’ ಬಂದಂತಾಗಿದೆ.

ಕಲ್ಲಹಂಗರಗಾ ಹಾಗೂ ಇದೇ ಪಂಚಾಯಿತಿ ವ್ಯಾಪ್ತಿಗೆ ಬರುವ ಜಂಬಗಾ–ಬಿ, ಅಷ್ಟಗಾ ಗ್ರಾಮಗಳಲ್ಲಿ ಯಾವುದೇ ಪಕ್ಷದ ಮುಖಂಡರು ಇನ್ನೂ ಕಾಲಿಟ್ಟಿಲ್ಲ. ಊರಿನ ಹಲವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ ಮುಂತಾದ ಪಕ್ಷಗಳ ಮುಖಂಡರನ್ನು ಅನುಸರಿಸುತ್ತಿದ್ದರೂ, ಗ್ರಾಮ ಪಂಚಾಯಿತಿ ಚುನಾವಣೆಗೆ ಮಾತ್ರ ಎಲ್ಲರಿಂದ ದೂರ ಉಳಿದಿದ್ದಾರೆ. ಹಲವರು ಪಕ್ಷಗಳ ಹಿಡಿತದಿಂದ ಹೊರಬಂದು ತಮ್ಮ ಸಂಬಂಧಿಕರು, ಸ್ನೇಹಿತರು, ಆಪ್ತರು ಎನ್ನುವ ಕಾರಣಕ್ಕೆ ಉಮೇದುವಾರರ ಪರ ಪ್ರಚಾರ ಮಾಡುತ್ತಿದ್ದಾರೆ.

ಪತಿ– ಪತ್ನಿಯರೂ ಕಣದಲ್ಲಿ: 20 ಸದಸ್ಯ ಬಲ ಹೊಂದಿದ ಈ ಪಂಚಾಯಿತಿಯಲ್ಲಿ 48 ಮಂದಿ ಕಣದಲ್ಲಿದ್ದರೆ. 6,429 ಮತದಾರರು ಇದ್ದಾರೆ. ಕಲಬುರ್ಗಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಸುಮಿತ್ರಾ ಅವರ ಪತಿ ಭದ್ರಪ್ಪ ಅವರು ಈ ಬಾರಿ 3ನೇ ಬ್ಲಾಕ್‌ನಿಂದ ಕಣಕ್ಕಿಳಿದಿದ್ದಾರೆ. ಹಿರಿಯರಾದ ಚಂದ್ರಶಾ ಪೂಜಾರಿ, ಭಾಗಣ್ಣ ಯಾಳಕರ ಮತ್ತೆ ಅದೃಷ್ಟ ‍ಪರೀಕ್ಷೆಗೆ ನಿಂತಿದ್ದಾರೆ. ಹ್ಯಾಟ್ರಿಕ್‌ ಸಾಧನೆ ಮಾಡಿ, ಒಮ್ಮೆ ಉಪಾಧ್ಯಕ್ಷರೂ ಆದ ಪರಮೇಶ್ವರ ಅವರು ಈಗ ನಲ್ಕನೇ ಬಾರಿಗೆ ಕಣದಲ್ಲಿದ್ದಾರೆ. ಇವರ ಪತ್ನಿ ಕೂಡ ಒಂದು ಅವಧಿಗೆ ಅಧ್ಯಕ್ಷರಾಗಿದ್ದಾರೆ.

ಹಾಲಿ ಜಿಲ್ಲಾ ಪ‍ಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ ಕೂಡ ಇದೇ ಗ್ರಾಮದವರು. 

‌ದಂಪತಿ ವಿರುದ್ಧ ದಂಪತಿ: ಜಂಬಗಾ ಗ್ರಾಮದಲ್ಲಿ ಇನ್ನೊಂದು ವಿಶೇಷವೆಂದರೆ; ಎರಡು ದಂಪತಿ ಜೋಡಿಗಳು ಪರಸ್ಪರ ಎದುರು ಬದುರು ಕಣಕ್ಕಿಳಿದಿವೆ. ವೈಜಯಂತಿ 7ನೇ ಬ್ಲಾಕ್‌ನಿಂದ ಅವರ ಪತಿ ಲಕ್ಷ್ಮೀಪುತ್ರ 6ನೇ ಬ್ಲಾಕ್‌ನಿಂದ ಕಣದಲ್ಲಿದ್ದಾರೆ. ಇವರ ಎದುರಿಗೆ ಅನಿತಾ 7ನೇ ಬ್ಲಾಕ್‌ನಿಂದ ಇವರ ಪತಿ ಶರಣಬಸಪ್ಪ 6ನೇ ಬ್ಲಾಕ್‌ ಉಮೇದುವಾರರಾಗಿದ್ದಾರೆ. ಒಂದು ದಂಪತಿ ಜೋಡಿ ಎದುರಿಗೆ ಇನ್ನೊಂದು ದಂಪತಿ ಜೋಡಿ ನಿಂತಿದ್ದೇ ಕುತೂಹಲ ಕೆರಳಿಸಿದೆ.

ಏಳು ಬಾರಿ ಸೋತರೂ ಕುಂದದ ಉತ್ಸಾಹ
ಕಲ್ಲಹಂಗರಗಾ ಗ್ರಾಮದ ಗುಂಡೇರಾವ್‌ ಮೇಕ್ರಿ ಅವರದು ವಿಶೇಷ ವ್ಯಕ್ತಿತ್ವ. ಸಣ್ಣ ಚಹಾ ಅಂಗಡಿ ಇಟ್ಟುಕೊಂಡ ಅವರು, 40 ವರ್ಷಗಳಿಂದ ಗ್ರಾಮ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸತತ 6 ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಸೋಲು ಕಂಡಿದ್ದಾರೆ. ಆದರೂ ಎದೆಗುಂದದೇ ಒಂದು ಬಾರಿ ತಾಲ್ಲೂಕು ಪಂಚಾಯಿತಿಗೂ ಪಕ್ಷೇತರರಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಈ ಬಾರಿ ಯುವಪೀಳಿಗೆಗೆ ಅವಕಾಶ ಕೊಟ್ಟು ಅವರ ಬೆನ್ನಿಗೆ ನಿಂತಿದ್ದಾರೆ.

‘ನಾನು ಗ್ರಾಮ ಪ‍ಂಚಾಯಿತಿಗೆ ನಿಂತಾಗ ಯಾವ ಪಕ್ಷದವರನ್ನೂ ಯಾವತ್ತೂ ಏನನ್ನೂ ಕೇಳಿಲ್ಲ. ಒಂದು ಬಿಡಿಗಾಸೂ ಯಾರಿಗೂ ಕೊಡಲಿಲ್ಲ.

ಪದೇಪದೇ ಸೋತರೂ ಸಾಂವಿಧಾನಿಕ ಆಶಯಗಳಿಗೆ ಮಸಿ ಬಳಿಯಲಿಲ್ಲ. ಹೀಗಾಗಿ, ಸೋಲು ನನ್ನನ್ನು ಎದೆಗುಂದಿಸಿಲ್ಲ’ ಎನ್ನುವುದು ಅವರ ಮನದಾಳ.

ಐದು ಹಳ್ಳಿಗಳು ಸೇರಿ ಒಂದು ಪಂಚಾಯಿತಿ!
ಕಲಬುರ್ಗಿ:
ತಾಲ್ಲೂಕಿನ ಅವರಾದ–ಬಿ ಗ್ರಾಮ ಪಂಚಾಯಿತಿಯದ್ದು ಇನ್ನೊಂದು ವಿಶೇಷ. ಅವರಾದ ಸೇರಿ ಬನ್ನೂರ, ಯಳವಂತಗಿ, ಕಗ್ಗಲಮಡಿ ಹಾಗೂ ಉಪಳಾಂವ ಗ್ರಾಮಗಳು ಸೇರಿ ಒಂದು ಪಂಚಾಯಿತಿ ಆಗಿದೆ!

ಅವರಾದನಲ್ಲಿ 8 ಸದಸ್ಯ ಸ್ಥಾನಗಳಿಗೆ 16 ಮಂದಿ ಕಣದಲ್ಲಿದ್ದಾರೆ. ಉಳಿದ ಊರುಗಳಲ್ಲಿ ಮೂರು, ನಾಲ್ಕು ಸದಸ್ಯ ಸ್ಥಾನಗಳಿವೆ. ಈ ಬಾರಿ 35 ವರ್ಷ ವಯಸ್ಸಿನವರೇ ಹೆಚ್ಚಾಗಿ ಕಣದಲ್ಲಿದ್ದಾರೆ. ಹೀಗಾಗಿ, ಅವಿರೋಧ ಆಯ್ಕೆಗೆ ಆಸ್ಪದ ನೀಡದೇ ಎಲ್ಲರೂ ಸ್ಪರ್ಧೆ ಒಡ್ಡುವ ಉತ್ಸಾಹ ತೋರಿದ್ದಾರೆ. ದಿನವೂ ಬೆಳಿಗ್ಗೆ ಹಾಗೂ ಸಂಜೆ ಬ್ಯಾಲೆಟ್‌ ಪೇಪರ್‌ಗಳನ್ನು ಹಿಡಿದು ಊರು ಸುತ್ತಿ ಪ್ರಚಾರ ಮಾಡುವ ಭರಾಟೆ ನಡೆದಿದೆ.

ಈ ಹಿಂದಿನ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನೂ ಅವಿರೋಧವಾಗಿ ಆಯ್ಕೆ ಮಾಡಿದ ಕೀರ್ತಿಯೂ ಅವರಾದ ಗ್ರಾಮಸ್ಥರ ಹೆಸರಿನಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು