ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ: ಅನರ್ಹಗೊಂಡ ಸದಸ್ಯ, ವಜಾಗೊಂಡ ನೌಕರ ಸ್ಪರ್ಧಿಸುವಂತಿಲ್ಲ

24 ಗ್ರಾಮ ಪಂಚಾಯಿತಿಗೆ ಚುನಾವಣೆ ಅಧಿಸೂಚನೆ ನಾಳೆ ಪ್ರಕಟ
Last Updated 9 ಡಿಸೆಂಬರ್ 2020, 15:39 IST
ಅಕ್ಷರ ಗಾತ್ರ

ಚಿತ್ತಾಪುರ: ರಾಜ್ಯ ಮತ್ತು ಕೇಂದ್ರ ಸರ್ಕಾರದ ನೌಕರಿಯಿಂದ ವಜಾಗೊಂಡವರು ಹಾಗೂ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 12ರ ಅಡಿ ಅನರ್ಹಗೊಂಡ ಮಾಜಿ ಸದಸ್ಯ, ಆಸ್ತಿ, ಇತರೆ ತೆರಿಗೆ ಬಾಕಿ ಇರುವವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎಂದು ರಾಜ್ಯ ಚುನಾವಣೆ ಅಯೋಗದ ನಿಯಮದಲ್ಲಿದೆ.

ಪತಿ ಸರ್ಕಾರಿ ನೌಕರನಾಗಿದ್ದರೆ ಅವರ ಪತ್ನಿ ಅಥವಾ ಪತ್ನಿ ಸರ್ಕಾರಿ ನೌಕರಳಾಗಿದ್ದರೆ ಆಕೆಯ ಪತಿ ಚುನಾವಣೆಗೆ ಸ್ಪರ್ಧಿಸಬಹುದು. ಅಂಗನವಾಡಿ ಕಾರ್ಯಕರ್ತೆಯರು, ಗ್ರಂಥಾಲಯ ಮೇಲ್ವಿಚಾರಕರು, ಬಿಸಿಯೂಟ ಯೋಜನೆಯಡಿ ನೇಮಕಗೊಂಡ ಅಡುಗೆ ಕೆಲಸ ಮಾಡುವವರು, ಗ್ರಾಮ ಸಹಾಯಕರು ಲಾಭದಾಯಕ ಹುದ್ದೆ ಹೊಂದಿಲ್ಲವಾದ್ದರಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಆಯೋಗದ ಲಾಭದಾಯಕ ಹುದ್ದೆಗಳ ನಿಯಮಗಳ ಸ್ಪಷ್ಟೀಕರಣದಲ್ಲಿದೆ.

ಬಹುಸದಸ್ಯ ಕ್ಷೇತ್ರದಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರೆ ಅವರನ್ನು ಅವಿರೊಧ ಆಯ್ಕೆಯೆಂದು ಘೋಷಿಸುವಂತಿಲ್ಲ. ಏಕೆಂದರೆ, ಮೀಸಲು ಸ್ಥಾನದಿಂದ ಅಭ್ಯರ್ಥಿಗಳೂ ಸಹ ಸಾಮಾನ್ಯ ಸ್ಥಾನದಿಂದ ಆಯ್ಕೆಯಾಗಲು ಅವಕಾಶವಿರುತ್ತದೆ.

ಚುನಾವಣೆ ಅಧಿಸೂಚನೆ ಪ್ರಕಟವಾದ ದಿನದಿಂದ ನಿಗದಿ ಮಾಡಿದ ಕೊನೆಯ ದಿನದವರೆಗೆ ಉಮೇದುವಾರ ಅಥವಾ ಸೂಚಕರಿಂದ ನಾಮಪತ್ರ ಸಲ್ಲಿಸಬಹುದು. ಮೀಸಲು ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧಿಕೃತ ಮೂಲ ಜಾತಿ ಪ್ರಮಾಣ ಪತ್ರವನ್ನು ನಾಮಪತ್ರದೊಂದಿಗೆ ಸಲ್ಲಿಸಬೇಕು. ನಿಗದಿಪಡಿಸಿದ ನಮೂನೆಯಲ್ಲಿ ಘೋಷಣಾ ಪ್ರಮಾಣ ಪತ್ರದ 2 ಮೂಲ ಪ್ರತಿ ಮತ್ತು ಒಂದು ಜೆರಾಕ್ಸ್ ಪ್ರತಿ ಸಲ್ಲಿಸಬೇಕು ಎಂಬುದು ನಿಯಮದಲ್ಲಿದೆ.

ಪರಿಶಿಷ್ಟ ಜಾತಿ ಪ್ರವರ್ಗಕ್ಕೆ ಮೀಸಲಾಗಿರುವ ಸ್ಥಾನಕ್ಕೆ ಯಾವುದೇ ನಾಮಪತ್ರ ಬಾರದಿದ್ದಲ್ಲಿ ಪರಿಶಿಷ್ಟ ಪಂಗಡ ಪ್ರವರ್ಗಕ್ಕೆ ಸೇರಿದ ವ್ಯಕ್ತಿಯಿಂದ, ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸ್ಥಾನಕ್ಕೆ ಯಾವುದೇ ನಾಮಪತ್ರ ಬಾರದಿದ್ದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯಿಂದ ನಾಮಪತ್ರ ಸ್ವೀಕರಿಸಬಹುದು. ಈ ನಿಯಮವು ಹಿಂದುಳಿದ ವರ್ಗ ‘ಅ’ ಮತ್ತು ಹಿಂದುಳಿದ ವರ್ಗ ‘ಬ’ ಪ್ರವರ್ಗಕ್ಕೂ ಅನ್ವಯಿಸುತ್ತದೆ ಎಂದು ಹೇಳಿದೆ. ಆದರೆ, ನಾಮಪತ್ರ ಸಲ್ಲಿಸಲು ಕೊನೆ ದಿನದೊಳಗೆ ಮೀಸಲಿಟ್ಟಿರುವ ಪ್ರವರ್ಗದ ವ್ಯಕ್ತಿಯಿಂದ ನಾಮಪತ್ರ ಸ್ವೀಕೃತವಾಗಿದ್ದರೆ ಬೇರೆ ಪ್ರವರ್ಗದ ವ್ಯಕ್ತಿ ಸಲ್ಲಿಸುವ ನಾಮಪತ್ರವನ್ನು ಅವರ ಠೇವಣಿ ಹಣದೊಂದಿಗೆ ಹಿಂತಿರುಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಒಬ್ಬ ಅಭ್ಯರ್ಥಿಗೆ ಸೂಚಕರಾಗಿರುವ ವ್ಯಕ್ತಿ ಆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಅವಕಾಶವಿರುತ್ತದೆ. ಸೂಚಕನು ಇಷ್ಟೇ ಅಭ್ಯರ್ಥಿಗಳಿಗೆ ಸೂಚಕರಾಗಿರಬೇಕು ಎಂಬ ನಿಯಮವಿಲ್ಲ. ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರಕ್ಕೆ ಗರಿಷ್ಟ ನಾಲ್ಕು ನಾಮಪತ್ರ ಸಲ್ಲಿಸಬಹುದು. ಪ್ರತಿಯೊಂದು ನಾಮಪತ್ರಕ್ಕೆ ಪತ್ಯೇಕವಾಗಿ ಅಫಿಡವಿಟ್, ಠೇವಣಿ ಹಣ, ಜಾತಿ ದೃಢೀಕರಣ ನೀಡುವುದು ಅಗತ್ಯವಿಲ್ಲ ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

ನಾಳೆ ಅಧಿಸೂಚನೆ ಪ್ರಕಟ: ರಾಜ್ಯ ಚುನಾವಣೆ ಆಯೋಗವು ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟಿಸಿರುವ ಪ್ರಕಾರ ಎರಡನೇ ಹಂತದಲ್ಲಿ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಡಿ.11 ರಂದು ಅಧಿಸೂಚನೆ ಪ್ರಕಟವಾಗಲಿದೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT