ಭಾನುವಾರ, ಸೆಪ್ಟೆಂಬರ್ 25, 2022
28 °C

ಹಾಳು ಫಿರೋಜಾಬಾದ್ ಕೋಟೆಗೆ ‘ಹಸಿರ’ ಜೀವಕಳೆ

ಮಲ್ಲಿಕಾರ್ಜುನ ನಾಲವಾರ Updated:

ಅಕ್ಷರ ಗಾತ್ರ : | |

Prajavani

ದಟ್ಟ ಹಸುರನು ತೊಟ್ಟು ಪುಷ್ಪವಾಗಿಹ ಗುಡ್ಡ(ಕೋಟೆ)
ಮೈಯ ಚಾಚಿಹವಿಲ್ಲಿ ಸಾಲು ಸಾಲು
ಹಚ್ಚ ಹಸುರಲ್ಲ ಇದು, ಹುಚ್ಚ ಹಸುರಿನ ಬುಗ್ಗೆ
ಲಗ್ಗೆ ನುಗ್ಗಿಹುದಿಲ್ಲಿ ಎತ್ತೆತ್ತಲೂ!

ವರಕವಿ ಬೇಂದ್ರ ಅವರ ಕವಿತೆಯಂತೆ ಕಲಬುರಗಿ ತಾಲ್ಲೂಕಿನ ಫಿರೋಜಾಬಾದ್ ಹಳೆಯ ಕೋಟೆ ಭೀಮಾ ನದಿ ತೀರದಲ್ಲಿ ಹಚ್ಚ ಹಸಿರಿನ ಹಾಸು ಹೊದ್ದು ನಿಂತಿದೆ. ಗ್ರಾಮದ ಮುಖ್ಯ ರಸ್ತೆಯಿಂದ ಸ್ವಲ್ಪ ಶ್ರಮಪಟ್ಟು ನಡೆದು ಹೋಗಿ, ಕೋಟೆಯನ್ನು ಏರಿ ನಿಂತರೆ ಎತ್ತ ನೋಡಿದರೂ ಸುತ್ತಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಜಮೀನುಗಳಲ್ಲಿ ಬೆಳೆದು ನಿಂತ ತೊಗರಿ, ಎಳ್ಳು ಸಸಿಗಳು, ಗಿಡಮರಗಳು ತಂಗಾಳಿಯ ಆಹ್ಲಾದದೊಂದಿಗೆ ಭೀಮಾ ನದಿಯ ವಿಹಂಗಮದ ನೋಟ ನಯನ ಮನೋಹರವಾಗಿ ಕಾಣಿಸುತ್ತದೆ. ಕೋಟೆಯ ಹಾಳು ಗೋಡೆಯ ಮೇಲಿನ ಹಸಿರಿನ ರಾಶಿಯ ಸೊಬಗು ನೋಡುಗರ ಮನದಂಗಳದಲ್ಲಿ ಬಹುಕಾಲ ನೆನಪಲ್ಲಿ ಉಳಿಯುತ್ತದೆ.

ಚಳಿಗಾಲ ಕಳೆದು ಬೇಸಿಗೆ ಬಂತೆಂದರೆ ಬಿರುಕು ಬಿಟ್ಟು, ಕಳಚಿ ಬಿದ್ದ ಕಲ್ಲುಗಳ ಮಧ್ಯೆ ಒಣಗಿದ ಕುರಚಲು ಸಸಿಗಳ ಕಾಂಡಗಳಿಂದಾಗಿ ಇಡೀ ಕೋಟೆ ಅಸ್ತಿಪಂಜರದಂತೆ ಕಾಣುತ್ತದೆ. ಜಾಲಿ ಮರಗಳು ಸಹ ಅದರ ಆಕರ್ಷಣೆಯನ್ನು ಕಳೆಗುಂದಿಸುತ್ತವೆ. ಆದರೆ, ಮಳೆಗಾಲದಲ್ಲಿ ಒಳ ಹಾಗೂ ಹೊರ ಭಾಗವನ್ನು ಹಸಿರಿನಿಂದ ಮೈದೊಂಬಿಕೊಳ್ಳುವ ಕೋಟೆ, ಮಲೆನಾಡ ಸೀಮೆಯ ಕೋಟೆಗಳನ್ನು ನಾಚಿಸುವಂತೆ ಅಲಂಕೃತಗೊಳ್ಳುತ್ತದೆ.

ಕಲಬುರಗಿ ಸದಾ ಬಿಸಿಲು ನಗರಿ ಎಂದು ಜರಿಯುವವರು ಒಮ್ಮೆ ಕೋಟೆಗೆ ಭೇಟಿ ನೀಡಿ, ಹಸಿರು ಹೊದ್ದ ಆವರಣದ ಒಳ, ಹೊರಗು ಸುತ್ತಾಡಿ ಮಲೆನಾಡಿನಂತಹ ವಿಶಿಷ್ಟ ಅನುಭವ ಪಡೆಯಬಹುದು. ಗುಮ್ಮಟ, ಕಮಾನು, ಪಹರೆ ಗೋಡೆ, ವೀಕ್ಷಣಾ ಕಿಂಡಿಗಳಲ್ಲಿ ಬಳ್ಳಿಯಂತೆ ಹಬ್ಬಿರುವ ಗಿಡ, ಸಸಿಗಳು ಕೋಟಿಯ ಚಲುವಿಗೆ ಇಂಬು ನೀಡುತ್ತಿವೆ. ಕೋಟೆ ಹಿಂಬದಿಯ ಗುಮ್ಮಟದ ಮೇಲೇರಿ ನಿಂತಲ್ಲಿ ಭೀಮಾ ನದಿಯ ಸುತ್ತಲಿನಲ್ಲಿ ಕಾಣಸಿಗುವ ಪ್ರಕೃತಿಯ ಸೊಬಗು ಮೈಮನಗಳಿಗೆ ನವೋಲ್ಲಾಸ ನೀಡುತ್ತದೆ.

ಬಹಮನಿ ಸುಲ್ತಾನ ಫಿರೋಜ್‌ ಶಾನಿ೦ದ ಕ್ರಿ.ಶ. 1400 ನಿರ್ಮಿಸಲಾದ ಈ ಕೋಟೆಯು ಮಧ್ಯಕಾಲಿನ ಕೋಟೆ ರಚನೆಯ ಮಹತ್ವ ಸಾರುತ್ತದೆ. ಸಾಂಪ್ರದಾಯಿಕ ಚೌಕಾಕಾರದ ಕೊತ್ತಲಗಳಿಗೆ ಬದಲಾಗಿ ಅಷ್ಟಕೋನಾಕಾರದ ಕೊತ್ತಲಗಳ ನಿರ್ಮಾಣ ಇಲ್ಲಿ ಕಾಣಬಹುದು. ಕೋಟೆ ಒಳಾಂಗಣದಲ್ಲಿ ಅರಮನೆಗಳ ಕಟ್ಟಡಗಳು, ಹಮಾಮ್‌ ಅಥವಾ ಸುಲ್ತಾನರ ಹಬೆ ಸ್ನಾನಗೃಹ, ಜುಮ್ಮಾ ಮಸೀದಿ, ಮಳಿಗೆಗಳಿರುವ ಬಜಾರ್ ಇದ್ದವು ಎಂಬುದು ಅಳಿದು ಉಳಿದ ಗೋಡೆಗಳು ಸೂಚಿಸುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು