ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಲಬರ್ಗಾ ವಿ.ವಿ: 300 ಇದ್ದ ಪ್ರಾಧ್ಯಾಪಕರ ಸಂಖ್ಯೆ 42ಕ್ಕೆ ಕುಸಿತ!

ಎರಡು ದಶಕಗಳಿಂದ ನಡೆಯದ ನೇಮಕಾತಿ, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿ
Published 4 ಜುಲೈ 2024, 5:54 IST
Last Updated 4 ಜುಲೈ 2024, 5:54 IST
ಅಕ್ಷರ ಗಾತ್ರ

ಕಲಬುರಗಿ: 1980ರ ದಶಕದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳಲು ನೆರವಾದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಾಧ್ಯಾಪಕರ ಸಂಖ್ಯೆ ಕುಸಿಯುತ್ತಿದ್ದು, ಹೊಸದಾಗಿ ನೇಮಕಾತಿಗೆ ಸರ್ಕಾರ ಇನ್ನೂ ಹಸಿರು ನಿಶಾನೆ ತೋರದಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗಿದೆ.

ಒಂದು ಕಾಲದಲ್ಲಿ 300ರಷ್ಟಿದ್ದ ಬೋಧಕ ಸಿಬ್ಬಂದಿ ಸಂಖ್ಯೆ ಹಲವರ ನಿವೃತ್ತಿಯಿಂದಾಗಿ ಇದೀಗ 42ಕ್ಕೆ ತಲುಪಿದೆ. 2026ರ ವೇಳೆಗೆ ನೇಮಕಾತಿಯಾಗದಿದ್ದರೆ ಈ ಸಂಖ್ಯೆ 10ಕ್ಕೆ ಕುಸಿಯಲಿದೆ ಎಂದು ಪ್ರಾಧ್ಯಾಪಕರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ. ಜೂನ್ ತಿಂಗಳಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ.ಪರಿಮಳಾ ಅಂಬೇಕರ್, ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ. ರಾಮುಲು, ವಾಣಿಜ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವಾಘ್ಮೋರೆ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ.

2015ರಲ್ಲಿ ಕುಲಪತಿಯಾಗಿದ್ದ ಪ್ರೊ.ಎಸ್.ಆರ್. ನಿರಂಜನ ಅವರ ಕಾಲದಲ್ಲೇ ಪ್ರಾಧ್ಯಾಪಕರು, ಸಹ ‍ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ನೇಮಕಕ್ಕೆ ಬಹುತೇಕ ಅನುಮೋದನೆ ಸಿಕ್ಕಿತ್ತು. ಆದರೆ, 371 (ಜೆ) ಅಡಿ ಮೀಸಲಾತಿ ಪ್ರಕಟಿಸುವುದು, ರೋಸ್ಟರ್ ಕುರಿತಾದ ತಾಂತ್ರಿಕ ಕಾರಣಗಳಿಂದಾಗಿ ನನೆಗುದಿಗೆ ಬಿದ್ದ ನೇಮಕ ಪ್ರಕ್ರಿಯೆ ಎಂಟು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ನಿರಂಜನ ಅವರ ಅವಧಿ ಮುಗಿದ ಬಳಿಕ ಪ್ರೊ.ಪರಿಮಳಾ ಅಂಬೇಕರ್, ಪ್ರೊ.ರಾಜನಾಳ್ಕರ್ ಲಕ್ಷ್ಮಣ, ಪ್ರೊ.ವಿಜಯಕುಮಾರ್ ಹಾಗೂ ಪ್ರೊ.ದೇವಿದಾಸ್ ಮಾಲೆ ಅವರು ಪ್ರಭಾರ ಕುಲಪತಿಗಳಾಗಿದ್ದರು. ಕಾಯಂ ಕುಲಪತಿ ನೇಮಕವಾಗದೇ ಇದ್ದುದರಿಂದ ಆಗಲೂ ನೇಮಕಾತಿ ನಡೆಯಲಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕುಲಪತಿಯಾಗಿ ನೇಮಕವಾದ ಪ್ರೊ. ದಯಾನಂದ ಅಗಸರ ಅವರು ಹಿಂದಿನ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿ ಖುದ್ದಾಗಿ ಭೇಟಿ ಮಾಡಿ ನೇಮಕಾತಿಗೆ ಪ್ರಯತ್ನ ಮುಂದುವರಿಸಿದ್ದಾರೆ. ಆದರೂ ಅನುಮೋದನೆ ಸಿಕ್ಕಿಲ್ಲ.

ವಿಶ್ವವಿದ್ಯಾಲಯದಲ್ಲಿ ಒಟ್ಟು 32 ವಿಭಾಗಗಳಿದ್ದು, ಪ್ರತಿ ವಿಭಾಗಕ್ಕೆ ಒಬ್ಬರು ಪ್ರಾಧ್ಯಾಪಕರು, ಇಬ್ಬರು ಸಹ ಪ್ರಾಧ್ಯಾಪಕರು, ನಾಲ್ವರು ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಕನಿಷ್ಠ ಏಳು ಬೋಧಕ ಸಿಬ್ಬಂದಿ ಇರಬೇಕು. ವಿಪರ್ಯಾಸವೆಂದರೆ ಇದೀಗ ವಿಭಾಗವೊಂದಕ್ಕೆ ಒಬ್ಬೊಬ್ಬ ಸಹಾಯಕ ಪ್ರಾಧ್ಯಾಪಕರೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಭಾಗವೊಂದರ ಮುಖ್ಯಸ್ಥರನ್ನು ನಾಲ್ಕೈದು ವಿಭಾಗಗಳ ಉಸ್ತುವಾರಿ ವಹಿಸಲಾಗಿದೆ.

ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಕುಸಿತಗೊಂಡಿದ್ದು, ‍ಪಿಎಚ್‌.ಡಿ, ಎಂ.ಫಿಲ್‌ನಂತಹ ಸಂಶೋಧನಾ ಚಟುವಟಿಕೆಗಳಿಗೆ ಗರ ಬಡಿದಂತಾಗಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಕೆಲ ವರ್ಷಗಳ ಹಿಂದೆ ನೇಮಕಾತಿ ಮಾಡಿದ್ದ ರಾಜ್ಯ ಸರ್ಕಾರ ಗುಲಬರ್ಗಾ ವಿಶ್ವವಿದ್ಯಾಲಯದ ನೇಮಕಾತಿ ಮಾಡುತ್ತಿದೆ ಎಂಬ ಅಸಮಾಧಾನ ಜಿಲ್ಲೆಯ ಶಿಕ್ಷಣ ಪ್ರೇಮಿಗಳಲ್ಲಿ ಮೂಡಿದೆ. 

ಭಾರಿ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಸಹ ನೇಮಕಾತಿ ವಿಚಾರದಲ್ಲಿ ಯಾವುದೇ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಾಧ್ಯಾಪಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

‘ವಿಶ್ವವಿದ್ಯಾಲಯವೆಂದರೆ ಬರೀ ಸೌಧಗಳಲ್ಲ. ಪೂರ್ಣ ಪ್ರಮಾಣದಲ್ಲಿ ಬೋಧಕ ಸಿಬ್ಬಂದಿ ಇದ್ದರೆ ವಿದ್ಯಾರ್ಥಿಗಳ ಕಲಿಕೆ ಸುಲಲಿತವಾಗುತ್ತದೆ. ಆದರೆ, ಎರಡು ದಶಕಗಳಿಂದ ಒಂದೇ ಒಂದು ನೇಮಕಾತಿ ಮಾಡಿಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ವಿದ್ಯಾರ್ಥಿಗಳು ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡುವುದು ಹೇಗೆ ಸಾಧ್ಯ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೋಧಕ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಸಚಿವ ಈಶ್ವರ ಖಂಡ್ರೆಯವರೂ ಒತ್ತಾಯಿಸಿದ್ದಾರೆ
ಬಿ.ಆರ್. ಪಾಟೀಲ ಮುಖ್ಯಮಂತ್ರಿಗಳ ಸಲಹೆಗಾರ
ಪ್ರಾಧ್ಯಾಪಕರಿಲ್ಲದೇ ಶೈಕ್ಷಣಿಕ ಚಟುವಟಿಕೆಗಳು ಕುಂಠಿತವಾಗಿರುವುದರಿಂದ ನೇಮಕಾತಿ ಪ್ರಕ್ರಿಯೆಗೆ ಅನುಮೋದನೆ ನೀಡುವಂತೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೇನೆ. ಶೀಘ್ರ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆ ಇದೆ.
ಪ್ರೊ.ದಯಾನಂದ ಅಗಸರ ಗುವಿವಿ ಕುಲಪತಿ
‘ಸಂಶೋಧನಾ ಪ್ರಾಜೆಕ್ಟ್‌ಗಳೂ ಇಲ್ಲ’
ಹಲವು ಸಂಶೋಧನಾ ವಿಷಯಗಳಿಗೆ ಸಂಬಂಧಿಸಿದಂತೆ ಮೊದಲು ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಪ್ರಾಧ್ಯಾಪಕರನ್ನು ಆಯ್ಕೆ ಮಾಡಿ ಪ್ರಾಜೆಕ್ಟ್‌ಗಳನ್ನು ವಹಿಸುತ್ತಿತ್ತು. ಇದರಿಂದ ಹಲವು ರಂಗಗಳ ಅಮೂಲಾಗ್ರ ಅಧ್ಯಯನ ಸಾಧ್ಯವಾಗುತ್ತಿತ್ತು. ಸುಖದೇವ್ ಥೋರಟ್ ಅವರು ಯುಜಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 100ಕ್ಕೂ ಅಧಿಕ ಪ್ರಾಜೆಕ್ಟ್ ಫೆಲೋಶಿಪ್‌ಗಳನ್ನು ಘೋಷಿಸಿದ್ದರು. ಆದರೆ ಈಗ ಯಾವ ಪ್ರಾಜೆಕ್ಟ್‌ಗಳೂ ಸಿಗುತ್ತಿಲ್ಲ ಎಂದು ಗುಲಬರ್ಗಾ ವಿ.ವಿ. ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಬೇಸರ ವ್ಯಕ್ತಪಡಿಸಿದರು. ‘ಪ್ರಾಧ್ಯಾಪಕರಿಲ್ಲದೇ ಸಂಶೋಧನೆ ಹಾಗೂ ಬೋಧನಾ ಚಟುವಟಿಕೆಗಳೂ ಸ್ಥಗಿತಗೊಂಡಿವೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT