ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರಿಗೆ ಕಪ್ಪು ಬಟ್ಟೆ ಪ್ರದರ್ಶನ ಆತಂಕ: ಬಿಗಿ ಭದ್ರತೆಯಲ್ಲಿ ಘಟಿಕೋತ್ಸವ

Published 12 ಆಗಸ್ಟ್ 2024, 7:40 IST
Last Updated 12 ಆಗಸ್ಟ್ 2024, 7:40 IST
ಅಕ್ಷರ ಗಾತ್ರ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ನಿವೇಶನ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸುವ ಭೀತಿಯಿಂದ ರಾಜ್ಯಪಾಲರು ಭಾಗವಹಿಸಿರುವ ಗುಲಬರ್ಗಾ ವಿ.ವಿ. ಘಟಿಕೋತ್ಸವಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಸ್ವತಃ ಈಶಾನ್ಯ ವಲಯ ಐಜಿಪಿ, ಪ್ರಭಾರ‌ ಪೊಲೀಸ್ ಕಮಿಷನರ್ ಅಜಯ್ ಹಿಲೋರಿ ಅವರು ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿಗಳು, ಎಸಿಪಿಗಳು ವಿವಿಧ ಠಾಣೆಗಳ ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ನಡೆಯುತ್ತಿರುವ 42ನೇ ವಿ.ವಿ. ಘಟಿಕೋತ್ಸವಕ್ಕೆ ಆಹ್ವಾನ ಪತ್ರ ಹಾಗೂ ಗುರುತಿನ ಚೀಟಿ ಪರಿಶೀಲಿಸಿ ಒಳಗಡೆ ಬಿಡಲಾಗುತ್ತಿದೆ.

ಸಭಾಂಗಣದ ಒಳಗಡೆಯೂ ಪೊಲೀಸರು ನಿಂತಿದ್ದಾರೆ. ಕಪ್ಪು ಕರವಸ್ತ್ರ, ಶರ್ಟ್ ಧರಿಸಿದವರನ್ನು ಒಳಗೆ ಬಿಡುತ್ತಿಲ್ಲ.

ವಿ.ವಿ.ಯ ಎರಡನೇ ಗೇಟ್ ಹಾಗೂ ಹಿಂಭಾಗದ ಗೇಟ್ ಬಂದ್ ಮಾಡಿದ್ದರಿಂದ ಘಟಿಕೋತ್ಸವಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳು, ಪೋಷಕರು, ಪ್ರಾಧ್ಯಾಪಕರು ಪರದಾಡಿದರು.

ಬೀದರ್ ಜಿಲ್ಲೆಯ ವಿದ್ಯಾರ್ಥಿನಿ ರೋಷನಿ ಎಂಬುವವರಿಗೆ ಮೊದಲು ಇಂಗ್ಲಿಷ್ ವಿಭಾಗದಲ್ಲಿ ಚಿನ್ನದ ಪದಕ ಸಿಕ್ಕಿದೆ ಎಂದು ವಿಶ್ವವಿದ್ಯಾಲಯ ಪತ್ರ ಕಳಿಸಿತ್ತು. ನಂತರ ಚಿನ್ನದ ಪದಕವನ್ನು ಬೇರೆಯವರಿಗೆ ನೀಡಿದ್ದನ್ನು ಪ್ರಶ್ನಿಸಲು ರೋಷನಿ ವೇದಿಕೆಯ ಬಳಿ ಬಂದಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸ್ವತಃ ಕುಲಪತಿ ಪ್ರೊ. ದಯಾನಂದ ಅಗಸರ ಅವರು ಕೆಳಗಡೆ ಬಂದು ಸಮಾಧಾನ ಮಾಡಲು ಯತ್ನಿಸಿದರೂ ವಿದ್ಯಾರ್ಥಿನಿ ಸುಮ್ಮನಾಗಲಿಲ್ಲ. ಇದರಿಂದಾಗಿ ವಿ.ವಿ. ಕುಲಪತಿ, ಕುಲಸಚಿವರು ಮುಜುಗರಕ್ಕೊಳಗಾದರು.

ರಾಜ್ಯಪಾಲರು ವೇದಿಕೆ ಬಳಿ ಏನಾಗುತ್ತಿದೆ ಎಂಬುದರ ಬಗ್ಗೆ ಕುಲಪತಿಗಳಿಂದ ವಿವರಣೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT