ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ಫಲಿತಾಂಶ ಬಂದು 6 ತಿಂಗಳಾದರೂ ದೊರಕದ ಅಂಕಪಟ್ಟಿ

Published 6 ಜೂನ್ 2023, 4:25 IST
Last Updated 6 ಜೂನ್ 2023, 4:25 IST
ಅಕ್ಷರ ಗಾತ್ರ

ಓಂಕಾರ ಬಿರಾದಾರ

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳ ಬಿಎ, ಬಿಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ, ಬಿಬಿಎಂ ಕೋರ್ಸ್‌ಗಳ 6 ನೇ ಸೆಮಿಸ್ಟರ್‌ ಪರೀಕ್ಷೆ ಫಲಿತಾಂಶ ಪ್ರಕಟವಾಗಿ 6 ತಿಂಗಳು ಕಳೆದರೂ ಸಹ ವಿದ್ಯಾರ್ಥಿಗಳ ಕೈಗೆ ಇನ್ನೂ ಅಂಕಪಟ್ಟಿ ಸಿಕ್ಕಿಲ್ಲ.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ 2022ರ ಅಕ್ಟೋಬರ್‌ನಲ್ಲಿ ಪರೀಕ್ಷೆ ಮುಗಿದು ನವೆಂಬರ್‌ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟವಾಗಿದೆ. ಆದರೆ ಗುಲಬರ್ಗಾ ವಿಶ್ವವಿದ್ಯಾಲಯ ನವೆಂಬರ್‌–ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆ ನಡೆಸಿ ಜನವರಿ ಮೊದಲ ವಾರದಲ್ಲಿ 6 ನೇ ಸೆಮಿಸ್ಟರ್ ಫಲಿತಾಂಶ ಪ್ರಕಟ ಮಾಡಿತ್ತು.

ಗುಲಬರ್ಗಾ ವಿಶ್ವವಿದ್ಯಾಲಯದ 6 ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗುವ ಮುಂಚೆ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ಸ್ನಾತ್ತಕೋತ್ತರ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದ್ದವು. ಆಗ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗದೆ ಮುಂದಿನ ಶಿಕ್ಷಣಕ್ಕೆ ತೊಂದರೆ ಎದುರಾಗಿತ್ತು.

ಬೇರೆ ವಿಶ್ವವಿದ್ಯಾಲಯಲ್ಲಿ ಸ್ನಾತಕೋತ್ತರ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು 6 ನೇ ಸೆಮಿಸ್ಟರ್ ಪರೀಕ್ಷೆಯ ಆನ್‌ಲೈನ್‌ ಫಲಿತಾಂಶ ಪ್ರತಿಯಿಂದ ಅರ್ಜಿ ಸಲ್ಲಿಸಿ ಪ್ರವೇಶ ಪಡೆದಿದ್ದಾರೆ. ಪ್ರವೇಶ ಪಡೆದ 2 ತಿಂಗಳಲ್ಲಿ ದಾಖಲಾತಿಗಳ ಪರಿಶೀಲನೆ ಮಾಡಲಾಗುತ್ತದೆ.

ಈ ವೇಳೆ ಬೇರೆ ಬೇರೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ ನೀಡುವಂತೆ ಕಾಲೇಜು ಹಾಗೂ ವಿಶ್ವವಿದ್ಯಾಲಯದ ವತಿಯಿಂದ ಒತ್ತಡ ಹಾಕಲಾಗುತ್ತಿದೆ. ಇದರಿಂದ ಪರೀಕ್ಷಾ ಶುಲ್ಕ ಭರಿಸಬೇಕಾದರೆ ಮುದ್ರಿತ ಅಂಕಪಟ್ಟಿ ಕಡ್ಡಾಯ ಎಂಬುದು ಇತರೆ ವಿಶ್ವವಿದ್ಯಾಲಯದ ವಾದವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

2022ರ ಸಾಲಿನ ವಿದ್ಯಾರ್ಥಿಗಳು 4 ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣವಾಗಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಶ್ವವಿದ್ಯಾಲಯದ ನಿಯಮ ಪ್ರಕಾರ ಅರ್ಜಿ ಸಲ್ಲಿಸಿದ 45 ದಿನಗಳ ಒಳಗಾಗಿ ಫಲಿತಾಂಶ ಪ್ರಕಟ ಮಾಡಬೇಕು. ಆದರೆ 6 ತಿಂಗಳು ಕಳೆದರೂ ಸಹ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟ ಮಾಡಿಲ್ಲ.

ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದೇನೆ. ಈಗ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳುತ್ತಿಲ್ಲ. ಇದರಿಂದ ನಮ್ಮ ಭವಿಷ್ಯ ಅತಂತ್ರವಾಗಿದೆ.
ವಿದ್ಯಾರ್ಥಿನಿ

ಫಲಿತಾಂಶ ಪ್ರಕಟ ಮಾಡದೇ ಇರುವುದರಿಂದ 4ನೇ ಸೆಮಿಸ್ಟರ್ ಅನುತ್ತೀರ್ಣವಾದ ವಿದ್ಯಾರ್ಥಿಗಳು ಮತ್ತೆ ಪರೀಕ್ಷಾ ಶುಲ್ಕ ಪಾವತಿ ಮಾಡಿ ಪರೀಕ್ಷೆ ಬರೆದಿದ್ದಾರೆ. ಆ ಬಳಿಕ ವಿಶ್ವವಿದ್ಯಾಲಯ ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟ ಮಾಡಿದೆ. ಪರೀಕ್ಷೆ ಬರೆದ ವಿದ್ಯಾರ್ಥಿ ಯಾವ ಅಂಕಗಳು ಪರಿಗಣನೆ ಮಾಡುವರು ಎಂಬ ಗೊಂದಲದಲ್ಲಿ ಇದ್ದಾರೆ.

ಕೆಲ ವಿದ್ಯಾರ್ಥಿಗಳು ಎರಡು ವಿಷಯದಲ್ಲಿ ಮರು ಮೌಲ್ಯಮಾಪನದಲ್ಲಿ ಆನ್‌ಲೈನ್‌ ನಲ್ಲಿ ಪಡೆದ ಅಂಕಪಟ್ಟಿಯಲ್ಲಿ ತೇರ್ಗಡೆಯಾಗಿದ್ದಾರೆ. ಆದರೆ ಮುದ್ರಿತ ಅಂಕಪಟ್ಟಿ ನೀಡಿದಾಗ ಒಂದು ವಿಷಯದಲ್ಲಿ ಅಂಕ ಸೊನ್ನೆ ನಮೂದಾಗಿದೆ. ಒಟ್ಟಾರೆಯಾಗಿ ಇಂಥ ಎಡವಟ್ಟಿನಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುವಂತಾಗಿದೆ.

ಶುಲ್ಕ ಪಾವತಿಸಿದ ಕಾಲೇಜುಗಳಿಗೆ ಅಂಕ ಪಟ್ಟಿ

ಕಾಲೇಜಿನಿಂದ ಶುಲ್ಕ ಪಾವತಿ ಬಾಕಿ ಇದ್ದರೆ ಅಂಥ ಕಾಲೇಜುಗಳಿಗೆ ಅಂಕಪಟ್ಟಿ ನೀಡಿಲ್ಲ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಈಗಾಗಲೇ ಮುದ್ರಿತ ಅಂಕಪಟ್ಟಿಗಳನ್ನು ವಿವಿ ವ್ಯಾಪ್ತಿಯ ಕಾಲೇಜುಗಳಿಗೆ ಕಳುಹಿಸಲಾಗುತ್ತಿದೆ. ಬಾಕಿ ಇರುವ ಶುಲ್ಕ ಪಾವತಿ ಮಾಡಿ ಕಾಲೇಜುಗಳು ಅಂಕಪಟ್ಟಿ ಪಡೆಯಬಹುದಾಗಿದೆ ಎಂದು ಹೇಳಿದರು.

ಮರು ಮೌಲ್ಯಮಾಪನ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿದ ಅವರು 2 ತಿಂಗಳಲ್ಲಿ ಫಲಿತಾಂಶ ಪ್ರಕಟ ಮಾಡುವ ನಿಯಮವಿದೆ. ಕಳೆದ ವರ್ಷ ಪರೀಕ್ಷೆಯಲ್ಲಿ ನಡೆಸುವಲ್ಲಿ ವಿಳಂಬವಾಗಿತ್ತು. ಹೀಗಾಗಿ ಫಲಿತಾಂಶ ಪ್ರಕಟಿಸುವಲ್ಲಿ ತೊಂದರೆಯಾಗಿದೆ ಎಂದು ಸಮಜಾಯಿಷಿ ನೀಡಿದರು.

ಪ್ರೊ.ಧಮ್ಮ ಜ್ಯೋತಿ ಪ್ರಕಾಶ
ಪ್ರೊ.ಧಮ್ಮ ಜ್ಯೋತಿ ಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT