ಭಾನುವಾರ, ಸೆಪ್ಟೆಂಬರ್ 26, 2021
21 °C
ನವೆಂಬರ್‌ 15ರಿಂದ ಹೊಸ ಶೈಕ್ಷಣಿಕ ವರ್ಷದ ಚಟುವಟಿಕೆ: ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿಕೆ

ಜುಲೈ 15ರಿಂದ ಗು.ವಿ.ವಿ ಪರೀಕ್ಷೆ ಆರಂಭ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಹಂತದ 1, 3, 5ನೇ ಸೆಮಿಸ್ಟರ್‌ ಹಾಗೂ ಸ್ನಾತಕೋತ್ತರ ಪದವಿಯ 1 ಮತ್ತು 3ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಜುಲೈ 15ರಿಂದಲೇ ಆರಂಭಿಸಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.

‘ಈ ಪರೀಕ್ಷೆಗಳನ್ನು 25 ದಿನಗಳ ಒಳಗಾಗಿ ಪೂರ್ಣಗೊಳಿಸಲಾಗುವುದು. ಮುಂದಿನ 15 ದಿನಗಳಲ್ಲಿ ಎಲ್ಲ ಸೆಮಿಸ್ಟರ್‌ಗಳ ಫಲಿತಾಂಶ ನೀಡಲಾಗುವುದು. ಒಟ್ಟಾರೆಯಾಗಿ 45 ದಿನಗಳಲ್ಲಿ ಪರೀಕ್ಷಾ ಪ್ರಕ್ರಿಯೆ ಮುಗಿಸಲಾಗುವುದು’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪದವಿ ಹಂತದ 2, 4, 6ನೇ ಸೆಮಿಸ್ಟರ್‌ ಮತ್ತು ಸ್ನಾತಕೋತ್ತರ ಪದವಿಯ 2 ಮತ್ತು 4ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಸೆಪ್ಟೆಂಬರ್‌ 20ರ ನಂತರ ಆರಂಭಿಸಲಾಗುವುದು. ನವೆಂಬರ್‌ 15ರೊಳಗೆ ಫಲಿತಾಂಶ ನೀಡಲಾಗುವುದು’ ಎಂದರು.

‘ಬಹು ಆಯ್ಕೆ (ಮಲ್ಟಿಪಲ್‌ ಚಾಯಿಸ್‌)’ ಮಾದರಿಯಲ್ಲೇ ಈ ವರ್ಷದ ಪರೀಕ್ಷೆ ನಡೆಸಬೇಕು ಎಂದು ಕೆಲವು ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ಪರಿಷತ್‌ಗೆ ಸಲಹೆ ನೀಡಿವೆ. ಆದರೆ, ಗುಲಬರ್ಗಾ ವಿಶ್ವವಿದ್ಯಾಲಯವು ಇದನ್ನು ಪರಿಗಣಿಸದೇ ಮೊದಲಿನ ರೀತಿಯಲ್ಲೇ ಪರೀಕ್ಷೆ ನಡೆಸಲಿದೆ’ ಎಂದೂ ಕುಲಪತಿ ಮಾಹಿತಿ ನೀಡಿದರು.

‘ಈಗಾಗಲೇ ಮುಂದಿನ ಸೆಮಿಸ್ಟರ್‌ಗಳಿಗೆ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೆ ಹಿಂದಿನ ಸೆಮಿಸ್ಟರ್‌ನ ಪರೀಕ್ಷೆ ಬರೆಯಲು ಕಷ್ಟವಾಗುತ್ತದೆ. ಆದ್ದರಿಂದ ತಾವು ಮುಗಿಸಿಹೋದ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಕೈಬಿಡಬೇಕು ಎಂದು ಹಲವು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ. ಆದರೆ, ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡೇ ನಡೆಯುತ್ತಿವೆ. ಆದ್ದರಿಂದ ಅವರಿಗೆ ತೊಂದರೆಯಾಗದಂತೆ ಎರಡು ಅಥವಾ ಮೂರು ವಾರಗಳ ತರಗತಿ ನಡೆಸಿ, ಪಠ್ಯಕ್ರಮದ ಗೊಂದಲ ಬಗೆಹರಿಸಿ ಪರೀಕ್ಷೆ ಮಾಡಿಸಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಾಧ್ಯಾಪಕರ ನೇಮಕಾತಿಗೆ ಶೀಘ್ರ: ‘ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸಹಾಯಕ ಪ‍್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅನುಮತಿ ಪಡೆಯಲಾಗಿದ್ದು, ಶೀಘ್ರದಲ್ಲೇ ಪ‍್ರಕ್ರಿಯೆ ಆರಂಭಿಸಲಾಗುವುದು’ ಎಂದು ಕುಲಸಚಿವ ಶರಣಬಸಪ್ಪ ಕೋಟ್ಯಪ್ಪಗೋಳ ತಿಳಿಸಿದರು.‌

‘ನಮ್ಮಲ್ಲಿ 248 ಬೋಧಕ ಸಿಬ್ಬಂದಿ ಮಂಜೂರಾತಿ ಸಿಕ್ಕಿದ್ದು, 58 ಮಂದಿ ಮಾತ್ರ ಇದ್ದಾರೆ. 193 ಹುದ್ದೆ ಖಾಲಿ ಇವೆ. 707 ಬೋಧಕೇತರ ಸಿಬ್ಬಂದಿ ಮಂಜೂರಾತಿ ಇದ್ದು 212 ಮಾತ್ರ ಇದ್ದಾರೆ. ಇನ್ನೂ 495 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಸರಿದೂಗಿಸಲು 346 ಅತಿಥಿ ಉಪನ್ಯಾಸಕರು, 357 ಬೋಧಕೇತರ ಸಿಬ್ಬಂದಿ ತಾತ್ಕಾಲಿಕ ನೇಮಕ ಮಾಡಿಕೊಳ್ಳಲಾಗಿದೆ’ ಎಂದರು.

 ‘ರಾಯಚೂರು ವಿ.ವಿ: ಗೊಂದಲ ಬೇಡ’
‘‌ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಕಾಲೇಜುಗಳನ್ನು ಸೇರಿಸಿಕೊಂಡು ರಾಯಚೂರು ವಿಶ್ವವಿದ್ಯಾಲಯ ಪ್ರತ್ಯೇಕವಾಗಿ ರಚನೆಗೊಂಡಿದೆ. ಆದರೆ, ಈಗಾಗಲೇ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದ ಈ ಎರಡೂ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಕೂಡ ಅವರ ಪದವಿ ಮುಗಿಯುವವರೆಗೂ ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದೇ ಪರಿಗಣಿಸಲಾಗುತ್ತದೆ’ ಎಂದು ಪ್ರೊ.ದಯಾನಂದ ತಿಳಿಸಿದರು.

‘ಪದವಿ ಮುಗಿದ ಮೇಲೆ ನಮ್ಮ ವಿ.ವಿ.ಯಿಂದಲೇ ಪ್ರಮಾಣ ಪತ್ರ ಪಡೆಯುತ್ತಾರೆ. ಸ್ನಾತಕೋತ್ತರ ಪ್ರವೇಶ ಪಡೆಯುವ ಸಂದರ್ಭದಲ್ಲಿ ಅವರನ್ನು ನಮ್ಮ ವಿ.ವಿ ವಿದ್ಯಾರ್ಥಿಗಳಂತೆಯೇ ಪರಿಗಣಿಸಲಾಗುತ್ತದೆ’ ಎಂದು ವಿವರಿಸಿದರು.

ಆದ್ಯತೆ ಮೇಲೆ ಹೊಸ ಶಿಕ್ಷಣ ನೀತಿ ಜಾರಿ
‘ಹೊಸ ಶಿಕ್ಷಣ ನೀತಿ–2020’ಯನ್ನು ಇದೇ ವರ್ಷದಿಂದ ಆಯಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಅನುಷ್ಠಾನಗೊಳಿಸಬೇಕು ಎಂದು ಉನ್ನತ ಶಿಕ್ಷಣ ಪರಿಷತ್‌ನಿಂದ ನಿರ್ದೇಶನ ಬಂದಿದೆ. ಅದರ ಪ್ರಕಾರ ಗುಲಬರ್ಗಾ ವಿಶ್ವವಿದ್ಯಾಲಯ ಮೂರು ಆಯ್ದ ವಿಷಯಗಳಲ್ಲಿ ಇದನ್ನು ಜಾರಿ ಮಾಡುತ್ತಿದೆ’ ಎಂದು ಪ್ರೊ.ದಯಾನಂದ ಅಗಸರ ತಿಳಿಸಿದರು.

‘ಸದ್ಯಕ್ಕೆ ‘ನ್ಯಾಕ್‌’ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಮಾತ್ರ ಹೊಸ ನೀತಿ ಜಾರಿ ಮಾಡಲಾಗುವುದು. ಉಳಿದವುಗಳಲ್ಲಿ ಮೂರು ವರ್ಷಗಳ ಹಳೆಯ ಪದ್ಧತಿಯೇ ಮುಂದುವರಿಯಲಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು