ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹನಿಟ್ರ್ಯಾಪ್ ಪ್ರಕರಣ ಸಿಬಿಐಗೆ ಒಪ್ಪಿಸಿ: ತೇಲ್ಕೂರ ಒತ್ತಾಯ

ಹನಿಟ್ರ್ಯಾಪ್ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕು ಇದೆಯಾ: ತೇಲ್ಕೂರ ಪ್ರಶ್ನೆ
Published : 10 ಸೆಪ್ಟೆಂಬರ್ 2024, 15:28 IST
Last Updated : 10 ಸೆಪ್ಟೆಂಬರ್ 2024, 15:28 IST
ಫಾಲೋ ಮಾಡಿ
Comments

ಕಲಬುರಗಿ: ‘ಹೊರ ರಾಜ್ಯಗಳ ಯುವತಿಯರನ್ನು ಬಳಸಿಕೊಂಡು ಉದ್ಯಮಿಗಳಿಗೆ, ಅಧಿಕಾರಿಗಳಿಗೆ ಹನಿಟ್ರ್ಯಾಪ್ ಮಾಡಿ, ಅವರಿಗೆ ವಿಡಿಯೊ, ಗನ್‌ ತೋರಿಸಿ ಹಣ ವಸೂಲಿ ಮಾಡಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಒತ್ತಾಯಿಸಿದರು.

‘ಹನಿಟ್ರ್ಯಾಪ್ ಪ್ರಕರಣ ಕೇವಲ ಕಲಬುರಗಿಗೆ ಸೀಮಿತವಾಗಿಲ್ಲ. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಮಹಿಳೆಯರೂ ಭಾಗಿಯಾಗಿದ್ದಾರೆ. ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿ ಭಾಗದ ಉದ್ಯಮಿಗಳು ಸಹ ವಂಚಕರ ಜಾಲಕ್ಕೆ ಸಿಲುಕಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರ ಹಿಂದೆ ಪೊಲೀಸ್‌ ಇನ್‌ಸ್ಪೆಕ್ಟರ್ ಶಕೀಲ್ ಅಂಗಡಿ ಅವರು ಭಾಗಿಯಾಗಿರುವ ಶಂಕೆ ಇದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಪ್ರಕರಣದ ಜಾಲ ನೆರೆಯ ರಾಜ್ಯಗಳಿಗೂ ವ್ಯಾಪಿಸಿಕೊಂಡಿದೆ. ನಮ್ಮ ರಾಜ್ಯದ ಪೊಲೀಸರು ತಳ ಮಟ್ಟಕ್ಕೆ ಹೋಗಿ ತನಿಖೆ ಮಾಡಲು ಆಗುವುದಿಲ್ಲ. ಅಕ್ರಮವಾಗಿ ಗನ್ ಬಳಸಿ ಹಣ ವಸೂಲಿ ಮಾಡಲಾಗಿದ್ದು, ಜೀವ ಭಯದಿಂದಾಗಿ ಹನಿಟ್ರ್ಯಾಪ್‌ಗೆ ಸಿಲುಕಿದ ಉದ್ಯಮಿಗಳು ದೂರು ಕೊಡಲು ಮುಂದೆ ಬರುತ್ತಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಕೊಡದೆ ಇದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

‘ಕಲಬುರಗಿಯಲ್ಲಿ ಘೋರ ಅಪರಾಧ ನಡೆದಿದೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ರಾಜಕೀಯ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವರು (ಪ್ರಿಯಾಂಕ್ ಖರ್ಗೆ) ತಮ್ಮದೇ ನೆಲದಲ್ಲಿ ನಡೆದ ಪ್ರಕರಣದ ಬಗ್ಗೆ ಬಾಯಿಯೇ ಬಿಡುತ್ತಿಲ್ಲ. ನಿಮ್ಮದು ಏನಾದರೂ ಕುಮ್ಮಕ್ಕು ಇದೆಯಾ? ನಿಮ್ಮ ಪ್ರಸ್ತುತಿ ಏನಿದೆ ಎಂಬುದನ್ನು ತಿಳಿಸಬೇಕು’ ಎಂದು ಕೇಳಿದರು.

ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ: ‘ಮಳೆಯ ಪ್ರವಾಹಕ್ಕೆ ಜನ– ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಧನ ಬಿಡುಗಡೆಯಾಗಿಲ್ಲ. ಪರಿಹಾರ ಕೊಡಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾಣೆಯಾಗಿದ್ದಾರೆ’ ಎಂದು ತೇಲ್ಕೂರ ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ್ ಜಾಧವ, ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ, ಮುಖಂಡರಾದ ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ ಉಪಸ್ಥಿತರಿದ್ದರು.

ಸಚಿವ ಸಂಪುಟ ಸಭೆ ದಿನ ಪ್ರತಿಭಟನೆ ಎಚ್ಚರಿಕೆ

‘ಚಿಂಚೋಳಿಯಲ್ಲಿನ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಒಡೆತನದ ಸಿದ್ಧಸಿರಿ ಸಕ್ಕರೆ ಮತ್ತು ಎಥೆನಾಲ್ ಕಾರ್ಖಾನೆಗೆ ಸೆಪ್ಟೆಂಬರ್ 15ರ ಒಳಗೆ ಕಬ್ಬು ನುರಿಸಲು ಅನುಮತಿ ಕೊಡದೆ ಇದ್ದರೆ ಸಚಿವ ಸಂಪುಟ ಸಭೆ ನಡೆಯುವ ದಿನ (ಸೆ.17) ಸಾವಿರಾರು ರೈತರೊಂದಿಗೆ ಪ್ರತಿಭಟನೆ ನಡೆಸುತ್ತೇವೆ’ ಎಂದು ರಾಜಕುಮಾರ ಪಾಟೀಲ ತೇಲ್ಕೂರ ಎಚ್ಚರಿಸಿದರು. ‘ಕಬ್ಬು ನುರಿಸಲು ಹೈಕೋರ್ಟ್ ಅನುಮತಿಗೆ ಆದೇಶಿಸಿದ್ದರೂ ರಾಜ್ಯ ಸರ್ಕಾರ ವಿನಾಕಾರಣ ರಾಜಕೀಯ ಮಾಡಿ ಕಾರ್ಖಾನೆ ಬಂದ್ ಮಾಡಿಸಿದೆ. ಅರಣ್ಯ ಸಚಿವರ ತವರು ಜಿಲ್ಲೆ ಬೀದರ್‌ನಲ್ಲಿ ಎಷ್ಟು ಕಾರ್ಖಾನೆಗಳು ನಿಯಮಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ? ಕಲಬುರಗಿಯ ಹತ್ತಾರು ಸಿಮೆಂಟ್ ಕಾರ್ಖಾನೆಗಳು ದೂಳು ಉಗುಳುತ್ತಿವೆ. ಒಮ್ಮೆಯಾದರೂ ಭೇಟಿ ನೀಡಿದ್ದಾರಾ’ ಎಂದು ಪ್ರಶ್ನಿಸಿದರು. ‘ತಮ್ಮದೇ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನಾನುಕೂಲತೆಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಕಾರ ಎತ್ತುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT