ಕಲಬುರಗಿ: ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆದ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಯಲ್ಲಿ ನಡೆದ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ರಾಜ್ಯ ಬಿಜೆಪಿ ವಕ್ತಾರ ರಾಜಕುಮಾರ್ ಪಾಟೀಲ ತೇಲ್ಕೂರ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಪ್ರಿಯಾಂಕ್ ಖರ್ಗೆ ಅವರ ಮೂಗಿನ ನೇರಕ್ಕೆ ಎಂಬಂತೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿಯೇ ಅಕ್ರಮ ನಡೆದಿದೆ. ಎಲ್ಲಿ ಹೋಗಿದ್ದಾರೆ ಪ್ರಿಯಾಂಕ್ ಖರ್ಗೆಯವರು? ಒಂದು ಪರೀಕ್ಷೆ ನಡೆಸಲು ಆಗದ ಬಿಜೆಪಿ ಸರ್ಕಾರ ಎಂದು ಟೀಕಿಸುತ್ತಿದ್ದ ನಿಮ್ಮ ಪೌರುಷ ಇವತ್ತು ಎಲ್ಲಿ ಹೋಯಿತು? ನಿಮ್ಮ ಸರ್ಕಾರ ಪರೀಕ್ಷೆ ನಡೆಸುವಷ್ಟು ಅಸಮರ್ಥವಾ’ ಎಂದು ಪ್ರಶ್ನಿಸಿದರು.
‘ಬ್ಲೂಟೂತ್‌ಗಳನ್ನು ಬಳಸಿ ಪರೀಕ್ಷೆ ಕೇಂದ್ರಗಳಲ್ಲಿ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ. ಸರ್ಕಾರ ಮತ್ತು ಅಧಿಕಾರಿಗಳ ಕೈವಾಡ ಇಲ್ಲದೆ ಪರೀಕ್ಷಾ ಕೇಂದ್ರಕ್ಕೆ ಬ್ಲೂಟೂತ್‌ಗಳು ಹೋಗಲು ಹೇಗೆ ಸಾಧ್ಯ? ಪರೀಕ್ಷೆಯಲ್ಲಿ ಅಕ್ರಮದ ಮುನ್ಸೂಚನೆ ಇದ್ದರೂ ಮೆಟಲ್ ಡಿಟೆಕ್ಟರ್‌ಗಳನ್ನು ಏಕೆ ಅಳವಡಿಸಿಕೊಂಡಿಲ್ಲ’ ಎಂದರು.
‘ಈ ಅಕ್ರಮದಲ್ಲಿ ನಿಮ್ಮ ಪಾಲಿದೆಯಾ? ಎಷ್ಟು ಹಣ ವಸೂಲಿಯಾಗಿದೆ? ಯಾರು ಹಣ ವಸೂಲಿ ಮಾಡಿದ್ದಾರೆ? ಯಾರಿಗೆ ತಲುಪಿಸಲು ವಸೂಲಿ ಮಾಡಿದ್ದಿರಿ? ಪರೀಕ್ಷಾ ಕೇಂದ್ರದಲ್ಲಿ ಎಲ್ಲ ರೀತಿಯ ಸಂಚು ರೂಪಿಸಲು ಅವಕಾಶ ನೀಡಿದ್ದು ಯಾರು? ಅಕ್ರಮದ ಹಿಂದಿರುವ ವ್ಯಕ್ತಿಗಳನ್ನು ಇಲ್ಲಿಯವರೆಗೂ ಏಕೆ ಬಂಧಿಸಿಲ್ಲ. ಅಕ್ರಮದ ಕಿಂಗ್‌ಪಿನ್ ಎಲ್ಲಿ ಹೋಗಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.
‘ಈ ಬಗ್ಗೆ ನೀವು ಮಾತನಾಡುತ್ತಿಲ್ಲ ಎಂದರೆ ಜನರಲ್ಲಿ ಶಂಕೆ ಮೂಡುತ್ತಿದೆ. ಈ ಹಿಂದೆ ಎಲ್ಲದಕ್ಕೂ ಮಾತನಾಡುತ್ತಿದ್ದ ನೀವು ಅಕ್ರಮ ನಡೆದು ಮೂರು ದಿನ ಕಳೆದರೂ ಮಾತನಾಡಿಲ್ಲ. ಸರ್ಕಾರ ಏನು ಮಾಡಲು ಹೊರಟಿದೆ’ ಎಂದು ಪ್ರಶ್ನಿಸಿದರು.
‘ಅಕ್ರಮದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರೆ ಎಂಬ ಗುಮಾನಿ ಇದೆ. ಪ್ರಶ್ನೆಪತ್ರಿಕೆ ಪರೀಕ್ಷಾ ಸಮಯಕ್ಕಿಂತಲೂ ಮುಂಚೆ ಸೋರಿಕೆಯಾಗಿದೆ ಎಂಬ ಅನುಮಾನ ಇದೆ. ಹೊರಗಡೆಯಿಂದ ಉತ್ತರ ಹೇಳುತ್ತಾರೆ ಎಂದರೆ ಮೊದಲೇ ಪ್ರಶ್ನೆ ಪತ್ರಿಕೆ ಹೊರಗೆ ಕಳುಹಿಸಲಾಗಿದೆ ಎಂದರ್ಥ. ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ಹೇಳುತ್ತಿದ್ದೀರಿ. ಸರ್ಕಾರ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿ ಬರ ಆವರಿಸಿದ್ದು, ಕೃಷಿ ಸಚಿವರು ಎಲ್ಲಿ ಮಾಯವಾಗಿದ್ದಾರೆ. ಜಿಲ್ಲೆಯ ಎಷ್ಟು ಜನರಿಗೆ ಬರ ಪರಿಹಾರದ ಹಣವನ್ನು ನೀಡಿದ್ದೀರಿ? ಬರದಿಂದ ದನಕರುಗಳಿಗೆ ಮೇವಿಲ್ಲದೆ ಕಸಾಯಿ ಕಾರ್ಖಾನೆಗಳಿಗೆ ಕಳುಹಿಸಿ ಕೊಡುವ ಪರಿಸ್ಥಿತಿ ಇದೆ. ರೈತರ ಕಣ್ಣಲ್ಲಿ ರಕ್ತ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರಾಜಕುಮಾರ್ ಪಾಟೀಲ್ ತೇಲ್ಕೂರ ದೂರಿದರು.
‘ಕೇವಲ ರಾಜ್ಯ ರಾಜಕಾರಣ ಮಾಡುತ್ತಾ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ. ಜನರಿಗೆ ದಾರಿ ತಪ್ಪಿಸಲು ಕೇಂದ್ರ ಸರ್ಕಾರದ ಕಡೆ ಬೊಟ್ಟು ತೋರಿಸುವುದು ಸರಿಯಲ್ಲ. ಮನರೇಗಾ ಅಡಿಯಲ್ಲಿ ಕೆಲಸ ನೀಡಲು ಸಾಧ್ಯವಾಗಿಲ್ಲ. ಅದಕ್ಕೆ ಸಂಬಂಧ ಪಟ್ಟ ತಯಾರಿ ಏನಾಗಿದೆ? ಅಧಿಕಾರಿಗಳು ಅದರ ಬಗ್ಗೆ ಸಭೆಯನ್ನೂ ಮಾಡಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ನೀಡದ ಕಾರಣ ರೈತರು ₹ 3 ಸಾವಿರದಿಂದ ₹4 ಸಾವಿರ ಹಣವನ್ನು ಜನರೇಟರ್‌ಗಾಗಿ ಖರ್ಚು ಮಾಡಬೇಕಿದೆ’ ಎಂದರು.
‘ಕೇಂದ್ರ ಸರ್ಕಾರದಿಂದ ನರೇಗಾ ಕಾಮಗಾರಿಯ ₹320 ಕೋಟಿ ಹಣ ಬಿಡುಗಡೆಯಾಗದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯ ಸರ್ಕಾರವೂ ಹಿಂದಿನ ಬಿಲ್ ಇಟ್ಟಿಕೊಂಡಿದೆಯಲ್ಲ. ಕೇಂದ್ರ ಸರ್ಕಾರ ತನ್ನ ಪಾಲಿನ ದುಡ್ಡನ್ನು ಅದೇ ವರ್ಷದ ಅವಧಿಯಲ್ಲಿ ನೀಡುತ್ತಿದೆ. ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಚಂದ್ರಶೇಖರ್ ಪರಸರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.