ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಸಂಭ್ರಮದ ಜೋಳದ ಹಂತಿ ರಾಶಿ

Last Updated 27 ಮಾರ್ಚ್ 2023, 13:24 IST
ಅಕ್ಷರ ಗಾತ್ರ

ಕಲಬುರಗಿ: ಆಧುನಿಕ ಕೃಷಿ ಯಂತ್ರಗಳ ಭರಾಟೆಯಲ್ಲಿ ಕಣ್ಮರೆ ಆಗುತ್ತಿರುವ ಜೋಳದ ಹಂತಿ ರಾಶಿಗೆ ಮರುಜೀವ ನೀಡಲು ಎಂಬಂತೆ ಚಿತ್ತಾಪುರ ತಾಲ್ಲೂಕಿನ ಸೂಗುರು(ಎನ್‌) ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಾಂಪ್ರದಾಯಿಕ ಹಂತಿ ರಾಶಿ ನಡೆಯಿತು.

ಗ್ರಾಮದ ಭೋಜಲಿಂಗೇಶ್ವರ ಮಠದ ಪೀಠಾಧಿಪತಿ ಹಿರಗಪ್ಪ ತಾತನವರು ನಾಲ್ಕು ವರ್ಷಗಳಿಂದ ಎತ್ತುಗಳಿಂದ ಧಾನ್ಯಗಳ ತೆನೆ ತುಳಿಸಿ ಜೋಳದ ರಾಶಿ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಗ್ರಾಮದ ರೈತರು ಹಾಗೂ ಭಕ್ತರು ಕೈಜೋಡಿಸಿದ್ದು, ಹಂತಿ ರಾಶಿಯ ಮೂಲಕ ನಾಡಿನ ಗಮನ ಸೆಳೆದಿದ್ದಾರೆ.

25 ಎಕರೆ ಜಮೀನಿನಲ್ಲಿ ಬಿತ್ತನೆಯಾದ ಜೋಳವನ್ನು ಗ್ರಾಮದ ಕೃಷಿ ಕೂಲಿಕಾರ್ಮಿಕರು ಕೊಯ್ದು, ಸೂಡು ಕಟ್ಟಿ, ತೆನೆ ಮುರಿದರು. ಜಮೀನಿನ ಬನ್ನಿ ಮರದ ಸುತ್ತಲಿನ ಕಣದಲ್ಲಿ ತೆನೆಗಳ ಗೂಡು ಕಟ್ಟಿ ಒಪ್ಪವಾಗಿ ಜೋಡಿಸಿದರು. ಮರದ ಬುಡದಲ್ಲಿ ಆನೆ ಗಾತ್ರದ ತೆನೆಗಳ ಗೂಡಿನ ನಡುವೆ ಕಲ್ಲಿನ ಪಾಂಡವರನ್ನು ಪ್ರತಿಷ್ಠಾಪಿಸಿ, ತೆನೆ ಪೂಜೆ ನೆರವೇರಿಸಲಾಯಿತು. ಕುಡಗೋಲು, ರೌವ್‌ಗೋಲ್, ಮೇಟಿಯಂತಹ ಸಲಕರಣೆಗಳಿಗೂ ಪೂಜೆ ಸಮರ್ಪಿಸಲಾಯಿತು.

ಪೂಜೆಯ ಬಳಿಕ ಅಲ್ಲಿ ನೆರೆದಿದ್ದವರಿಗೆ ಗೆಣಸಿನ ಹೋಳಿಗೆ, ಅನ್ನ–ಸಾಂಬರ್ ಊಟ ಬಡಿಸಲಾಯಿತು. ಇದಾದ ಬಳಿಕ ತೆನೆ ತುಳಿಯಲು ಸಜ್ಜಾಗಿದ್ದ ಎರಡು ಜೋಡು ಎತ್ತುಗಳಿಗೆ ಹಿರಗಪ್ಪ ತಾತನವರು ಬಾರಕೋಲು ಬೀಸಿ ಹಂತಿ ರಾಶಿಗೆ ಚಾಲನೆ ನೀಡಿದರು. ಅಲ್ಲಿ ಸೇರಿದ್ದ ನೂರಾರು ಭಕ್ತರು, ರೈತರು ಬಸವಣ್ಣನಿಗೆ ಜೈ, ಭೋಜಲಿಂಗೇಶ್ವರರಿಗೆ ಜೈ, ಏಳು ಕೋಟಿ... ಏಳು ಕೋಟಿಗೆ... ಎಂದು ಜೈಕಾರ ಹಾಕಿದರು.

ಹಂತಿಗೆ ಚಾಲನೆ ಸಿಗುತ್ತಿದ್ದಂತೆ ರೈತರು ಎತ್ತುಗಳ ಹಗ್ಗ ಹಿಡಿದು ಸಡಗರದಿಂದ ಹಂತಿ ಹೊಡೆದರು. ಒಬ್ಬ ಕೋಚು ಎತ್ತಿ ಹಾಡು ಮುಗಿಸುವಷ್ಟರಲ್ಲಿಯೇ ಮತ್ತೊಬ್ಬ ಬಂದು ಹಂತಿ ತಿರುಗಿಸಿದರು. ಕೃಷಿಕರ ಮಕ್ಕಳು ಸಹ ಹಂತಿ ಎತ್ತುಗಳ ಹಿಂದೆ ನಾಲ್ಕು ಸುತ್ತು ಹಾಕಿ ಸಂತಸಪಟ್ಟರು.

ಹಂತಿ ಹೊಡೆಯುವವರನ್ನು ಹುರಿದುಂಬಿಸಲು ಕಣದ ಸುತಲ್ಲೂ ಇಡೀ ರಾತ್ರಿ ದೇವ ಸುತ್ತಿ, ಬಸವ ನಾಮಾವಳಿ, ಭೂಮಿ ತಾಯಿ ಸ್ಮರಣೆ, ಶೃಂಗಾರ, ಸಂವಾದ, ವೀರ ರಸಗಳುಳ್ಳ ಹಂತಿಯ ಹಾಡುಗಳನ್ನು ಹಾಡಲಾಯಿತು. ಮಹಿಳಾ ಕೃಷಿಕರು ಕೂಡ ದೂರದಲ್ಲಿ ಕುಳಿತು ಹಂತಿ ಪದಗಳನ್ನು ಮನದುಂಬಿ ಹಾಡಿದರು.

ಕಣದ ಸುತ್ತಲು ಸೇರಿದ್ದ ಸೂಗೂರು ಸೇರಿದಂತೆ ನೆರೆಯ ಗ್ರಾಮಗಳಿಂದಲೂ ಬಂದಿದ್ದ ನೂರಾರು ಜನರು ಹಂತಿಯನ್ನು ನೋಡಿ ಸಂತಸ ಪಟ್ಟರು. ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ಎತ್ತುಗಳ ತುಳಿತಕ್ಕೆ ತೆನೆಗಳಿಂದ ಬೇರ್ಪಟ್ಟ ಜೋಳದ ಕಾಳುಗಳನ್ನು ಚೀಲದಲ್ಲಿ ತುಂಬಿಸುವರು. ರಾಶಿಯ ಚೀಲಗಳನ್ನು ಹತ್ತಾರು ಬಂಡಿಗಳಲ್ಲಿ ಹೇರಿಕೊಂಡು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣೆಗೆ ಮೂಲಕ ತೆಗೆದುಕೊಂಡು ಹೋಗಿ ಹಿರಗಪ್ಪ ತಾತನವರ ಮನೆಯಲ್ಲಿ ಇರಿಸುವರು.

***

ಯಂತ್ರೋಪಕರಣಗಳು ಬಂದ ಬಳಿಕ ಹಂತಿ ರಾಶಿಯನ್ನೇ ಕೃಷಿಕರು ಮರೆತಿದ್ದರು. ಯುವ ರೈತರು ಮುಂದೆ ಬಂದು ಹಂತಿ ರಾಶಿ ಮಾಡುವುದಾಗಿ ಹೇಳಿದಾಗ, ಅವರಿಗೆ ಸಹಕಾರ ಕೊಡುತ್ತಿದ್ದೇವೆ
–ಹಿರಗಪ್ಪ ತಾತನವರು, ಭೋಜಲಿಂಗೇಶ್ವರ ಮಠದ ಪೀಠಾಧಿಪತಿ

****

ಪ್ರತಿಯೊಂದು ಕೆಲಸಕ್ಕೂ ಯಂತ್ರಗಳು ಬಂದು ಕೃಷಿ ಸಂಬಂಧಿತ ಜನಪದ ಕಲೆಗಳು ಮರೆಯಾಗುತ್ತಿವೆ. ಹಂತಿಯಂತಹ ಸಾಂಪ್ರದಾಯಿಕ ರಾಶಿ ಪದ್ಧತಿಯನ್ನು ಯುವಕರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ
–ಶರಣುಗೌಡ ತುಮಕೂರ್, ಸೂಗುರು(ಎನ್‌) ಗ್ರಾಮದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT