ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ: ಸುತ್ತಲಿನ ಹಳ್ಳಿಗಳಿಗೆ 'ಒಡೆಯ' ಹನುಮಾನ

ಜನರನ್ನು ಆಕರ್ಷಿಸುತ್ತಿರುವ ಹಚ್ಚ ಹಸಿರಿನ ಕೋಡ್ಲಿ ಗ್ರಾಮದ ಬೆಟ್ಟದ ದೇವಸ್ಥಾನ
Last Updated 8 ಡಿಸೆಂಬರ್ 2019, 4:22 IST
ಅಕ್ಷರ ಗಾತ್ರ

ಕಾಳಗಿ: ಹಚ್ಚಹಸಿರಿನ ಬೆಟ್ಟದಲ್ಲಿ ಎದ್ದು ಕಾಣುವ ತಾಲ್ಲೂಕಿನ ಕೋಡ್ಲಿ ಗ್ರಾಮದ ಒಡೆಯ ಹನುಮಾನ ದೇವಸ್ಥಾನ ಸುತ್ತಲಿನ ಹಳ್ಳಿಗಳಿಗೂ ‘ಒಡೆಯ’ನಂತೆ ಕಂಡುಬರುತ್ತಿದೆ. ಜನರು ಸಹ ತಮ್ಮ ಭಾಗದ ‘ಒಡೆಯ’ ಎಂದೇ ಭಾವಿಸಿ ಇಲ್ಲಿಗೆ ನಡೆದು ಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಇದಕ್ಕೆಲ್ಲ ದೇವಸ್ಥಾನದ ಒಳಗಡೆ ಕಾಣುವ 300 ವರ್ಷಗಳ ಇತಿಹಾಸ ಹೊಂದಿರುವ ಬೃಹತ್ ಆಕಾರದ ಕಲ್ಲಿನಲ್ಲಿ ‘ನಿಂತ ಹನುಮಾನ, ಕುಳಿತ ಗಣಪತಿ ಮತ್ತು ನಾಗರ ಆಕೃತಿ’ಗಳೇ ಮುಖ್ಯ ಕಾರಣವಾಗಿವೆ.

ಹೌದು, ಇಲ್ಲಿ ಕಾಣುವ ಬೆಟ್ಟದಲ್ಲಿ (ದೇವಸ್ಥಾನದ ಸದ್ಯದ ಜಾಗ) ರೈತನೊಬ್ಬ ಹೊಲ ಉಳುಮೆ ಮಾಡುತ್ತಿದ್ದಾಗ ನೇಗಿಲ ಭಾರಕ್ಕೆ ಕಲ್ಲೊಂದನ್ನು ಬಳಸಲಾಗುತ್ತಿತ್ತು. ಕೆಲಸವಾದ ನಂತರ ರೈತ ಆ ಕಲ್ಲನ್ನು ತನ್ನ ಹೊಲದಲ್ಲೇ ಬಿಸಾಕಿ ಮನೆಗೆ ಹೋಗುತ್ತಿದ್ದ. ಮತ್ತೆ ಮರುದಿನ ಬಂದು ಅದೇ ಕಲ್ಲು ಬಳಸಬೇಕು ಎನ್ನುವಷ್ಟರಲ್ಲಿ ಆ ಕಲ್ಲು ತನ್ನ ಮೂಲ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳುತ್ತಿತ್ತು. ಈ ಆಶ್ಚರ್ಯ ಒಂದೆರಡು ದಿನ ಮಾತ್ರ ನಡೆಯದೆ ದಿನಾಲೂ ನಡೆದು ರೈತನ ಹುಬ್ಬೇರಿಸುವಂತೆ ಮಾಡಿತ್ತು.

ರೈತ ಕೆಲ ದಿನಗಳ ಬಳಿಕ ಹೊಲದಲ್ಲಿ ನಡೆದಿರುವ ಸಂಗತಿಯನ್ನೆಲ್ಲ ಗ್ರಾಮಸ್ಥರಿಗೆ ತಿಳಿಸಿದ. ವಸ್ತುಸ್ಥಿತಿಯನ್ನು ಅರಿಯಲು 8-10 ಮುಖಂಡರು ರೈತನೊಂದಿಗೆ ಹೊಲಕ್ಕೆ ತೆರಳಿ ಕಲ್ಲಿಗೆ ಸುಣ್ಣಬಣ್ಣ ಹಚ್ಚಿ ಕೆಲ ದಿನಗಳವರೆಗೆ ಬಂದು ನೋಡಿ ಪರೀಕ್ಷಿಸಿದಾಗಲೂ ಅದೇ ಆಶ್ಚರ್ಯ ಎಲ್ಲರನ್ನು ಚಕಿತರನ್ನಾಗಿಸಿತ್ತು. ಮುನ್ನೂರು ವರ್ಷಗಳ ಹಿಂದೆಯೇ ಈ ಅನುಭವ ಆಗಿತ್ತು ಎನ್ನುತ್ತಾರೆ ಗ್ರಾಮಸ್ಥರು.

ಮುಂದೆ ರೈತ ಈ ಕಲ್ಲನ್ನು ಮುಟ್ಟಲು ಹೋಗಲಿಲ್ಲ. ಈ ಕಲ್ಲಿನಲ್ಲಿ ಏನೋ ಮಹಿಮೆ ಇದೆ ಎಂದುಕೊಂಡ ಗ್ರಾಮಸ್ಥರು ನಿತ್ಯ ಪೂಜೆಗೆ ಪೂಜಾರಿಯನ್ನು ನೇಮಿಸಿದರು. ಪ್ರತಿನಿತ್ಯ ಕಲ್ಲಿನ ಪೂಜೆ ನಡೆದು ಕಲ್ಲು ದೊಡ್ಡದಾಗಿ ಬೆಳೆಯುತ್ತ ಕಲ್ಲಿನಲ್ಲಿ ನಿಂತ ಹನುಮಾನ, ಕುಳಿತ ಗಣೇಶ ಮತ್ತು ನಾಗರ ಆಕೃತಿಗಳು ಮೂಡತೊಡಗಿದವು.

ಇದನ್ನು ಕಂಡ ಕೋಡ್ಲಿ ಮತ್ತು ಸುತ್ತಲಿನ ಗ್ರಾಮಗಳ ಜನರು ನಮ್ಮೆಲ್ಲರ ಒಡೆಯನೆಂದು ಭಾವಿಸಿ ಭಯಭಕ್ತಿಯಿಂದ ಆರಾಧಿಸಲು ಆರಂಭಿಸಿದರು. ಹೀಗೆ ಮಹಿಮೆ, ಪವಾಡ ಎನ್ನುವಂತೆ ಇಲ್ಲಿ ಒಂದಲ್ಲ ಒಂದು ಘಟನೆ ಜರುಗಿ ಚಂದನಕೇರಾ ಗ್ರಾಮದ ಕಡಗದ ಮನೆತನದವರು ಕಲ್ಲಿಗೆ ಚಿಕ್ಕ ಗುಡಿ ಕಟ್ಟಿಸಿದರು.

ಕಾಲಕಳೆದಂತೆ ಜನರ ನಂಬಿಕೆ ಹೆಚ್ಚಾಗಿ ಕೋಡ್ಲಿ ಮತ್ತಿತರ ಗ್ರಾಮಸ್ಥರು ಒಟ್ಟುಗೂಡಿ ಈ ವರ್ಷ ಒಂದು ಕೋಟಿ ರೂಪಾಯಿ ವೆಚ್ಚದ ಭವ್ಯ ದೇವಸ್ಥಾನವನ್ನು ನಾಡಿಗೆ ಸಮರ್ಪಿಸಿದ್ದಾರೆ. ಕಳೆದ ನವೆಂಬರ್ 23ರಂದು ಉದ್ಘಾಟನೆಗೊಂಡಿರುವ ಈ ದೇವಸ್ಥಾನ ಆಸ್ತಿಕರ ಭಕ್ತಿಯ ಕ್ಷೇತ್ರವಾಗಿ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗಿ ಕೈಬೀಸಿ ಕರೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT