ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ: ಎಚ್.ಡಿ. ದೇವೇಗೌಡ

Last Updated 8 ಅಕ್ಟೋಬರ್ 2020, 8:42 IST
ಅಕ್ಷರ ಗಾತ್ರ

ಕಲಬುರ್ಗಿ: ವಿಧಾನಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ‌ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಪಕ್ಷದ ಕಾರ್ಯಕರ್ತರ ಬೆಂಬಲದೊಂದಿಗೆ ‌ಚುನಾವಣೆ ಎದುರಿಸಲಿದ್ದೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಸ್ಪಷ್ಟಪಡಿಸಿದರು.

ವಿಧಾನಪರಿಷತ್ ‌ಶಿಕ್ಷಕರ ಕ್ಷೇತ್ರದ ‌ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ‌ಸ್ಪರ್ಧಿಸಿರುವ ತಿಮ್ಮಯ್ಯ‌ ಪುರ್ಲೆ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸುವುದಕ್ಕೂ‌ ಮುನ್ನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಯಾರು ಎಷ್ಟೇ ಲಘುವಾಗಿ ಮಾತಾಡಿದರೂ ಚುನಾವಣೆ ನಂತರ ಉತ್ತರ ಕೊಡುತ್ತೇನೆ. ಯಾರ ಮಾತಿನ ಬಗ್ಗೆಯೂ ಕಿವಿಗೊಡುವುದಿಲ್ಲ. ಪಕ್ಷ ಸಂಘಟನೆ ಕಡೆ ಒತ್ತು ಕೊಡುತ್ತೇನೆ ಎಂದರು.

ಮೋದಿ ತಪ್ಪು ಹುಡುಕುವುದೇ ಕೆಲಸವಲ್ಲ: ಆರ್ಥಿಕವಾಗಿ ದೇಶ ಸಂಕಷ್ಟಕ್ಕೆ ಗುರಿಯಾಗಿದೆ. ಇದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆದೋರಿದ ಸಮಸ್ಯೆಗಳೂ ಕಾರಣವಾಗಿದೆ ಕೊರೋಯನಾ ಸೋಂಕೂ ಕಾರಣವಾಗಿದೆ‌. ಬರೀ ಮೋದಿಯ ಬಗ್ಗೆ ತಪ್ಪು ಹುಡುಕೋದೇ ನನ್ನ ಕೆಲಸವಲ್ಲ. ಎಲ್ಲವನ್ನೂ ಗಮನಿಸುತ್ತಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಕಾಳಗ ನಡೆದಿದೆ. ಕೊರೊನಾ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ. ಪಕ್ಷ ಸಂಘಟನೆ ಮಾಡುವುದೇ ನನ್ನ ಕೆಲಸ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇವೇಗೌಡರು ಅಳುತ್ತಿದ್ದರು, ಈಗ ಕುಮಾರಸ್ವಾಮಿ ತಂದೆಯನ್ನು ಅನುಕರಿಸಿ ಅಳುತ್ತಿದ್ದಾರೆ ಎಂಬ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ಹೇಳಿಕೆ ಬಗ್ಗೆಯೂ ಮಾತಾಡೋಕೆ ಹೋಗುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನಮ್ಮ ಪಕ್ಷ ಯಾರು ಯಾರನ್ನು ಬೆಳೆಸಿದೆ ಎಲ್ಲರಿಗೂ ಗೊತ್ತಿದೆ. ಯಾರ್ಯಾರು ಯಾವ ಪಕ್ಷ ಸೇರಿದರೂ ಅನ್ನುವುದೂ ಗೊತ್ತಿದೆ. ಚುನಾವಣಾ ಸಂದರ್ಭದಲ್ಲಿ ಏನೇನು ಮಾತನಾಡುತ್ತಿದ್ದಾರೆ ಅನ್ನೋದನ್ನೂ ಗಮನಿಸಿದ್ದೇನೆ. ನಾನು ನಿನ್ನೆ ರಾಜಕಾರಣಕ್ಕೆ ಬಂದಿಲ್ಲ. 1970ರಿಂದಲೂ ಈ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ. ನನಗೆ ಪಕ್ಷ ಬೆಳೆಸುವುದಷ್ಟೇ ಮುಖ್ಯ ಎಂದರು.

ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ. ಇವರೆಲ್ಲಾ ಹೊರಗೆ ಬಂದ್ರು. ಆದರೆ ನಾನು ಏಕಾಂಗಿಯಾಗಿ ಪಕ್ಷ ಮುನ್ನಡೆಸಿದ್ದೇನೆ. ನಾನು ಯಾರ ಹೆಗಲ ಮೇಲೂ ಕೈಯಿಟ್ಟು ಪಕ್ಷ ಮುನ್ನಡೆಸುತ್ತಿಲ್ಲ. ಇವತ್ತು ಜೆಡಿಎಸ್ ಶಕ್ತಿ ಕಡಿಮೆಯಾಗಿದೆ. ಆದರೆ ಕಾರ್ಯಕರ್ತರು ನಮ್ಮ ಜೊತೆಗಿದ್ದಾರೆ. ಪಕ್ಷ ಮುನ್ನಡೆಸೋದೇ ನಮ್ಮ ಗುರಿ ಎಂದು ಹೇಳಿದರು.

ಮತ್ತೊಂದು ‌ನ್ಯಾಯಮಂಡಳಿ ಅಗತ್ಯವಿಲ್ಲ: ಕೃಷ್ಣಾ ನದಿ ನೀರಿನ ‌ಹಂಚಿಕೆ ಸಂಬಂಧ ಮತ್ತೊಂದು ನ್ಯಾಯಮಂಡಳಿ ರಚಿಸುವ ಅಗತ್ಯವಿಲ್ಲ. ರಾಜ್ಯದ ಪಾಲಿನ ನೀರನ್ನು ಉಳಿಸಿಕೊಳ್ಳಲು ಕೊನೆಯವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಬಂಡೆಪ್ಪ‌ ಕಾಶೆಂಪೂರ, ನಾಗನಗೌಡ ಕಂದಕೂರ, ಮುಖಂಡರಾದ ಬೋಜೇಗೌಡ, ಶ್ರೀಕಂಠೇಗೌಡ, ಜಿಲ್ಲಾ‌ ಅಧ್ಯಕ್ಷ ‌ಕೇದಾರಲಿಂಗಯ್ಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT