ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: 24 ಗಂಟೆಯೂ ವೈದ್ಯಕೀಯ ಸೌಲಭ್ಯ

ಸಮ್ಮೇಳನಕ್ಕೆ ಆಗಮಿಸುವ ಜನರ ಆರೋಗ್ಯ ಕಾಳಜಿಗೆ ಸಕಲ ಸಿದ್ಧತೆ, 18 ವೈದ್ಯರು, ನಾಲ್ಕು ಆಂಬುಲೆನ್ಸ್‌, 10 ಸಂಚಾರ ಔಷಧ ಘಟಕ
Last Updated 2 ಫೆಬ್ರುವರಿ 2020, 10:25 IST
ಅಕ್ಷರ ಗಾತ್ರ

ಕಲಬುರ್ಗಿ: 18 ವೈದ್ಯರು, ಮೂರು ತಂಡ, ನಾಲ್ಕು ಆಂಬುಲೆನ್ಸ್‌, 10 ಸಂಚಾರ ಔಷಧಿ ಘಟಕಗಳು, 24 ಗಂಟೆಯೂ ವೈದ್ಯಕೀಯ ಸೇವೆ.

ಸಾಹಿತ್ಯ ಸಮ್ಮೇಳನಕ್ಕೆ ಬರುವವರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಸಮಿತಿ ಮಾಡಿಕೊಂಡ ತಯಾರಿ ಇದು.

ದಿನವಿಡೀ ಮೂರು ಪಾಳಿಯಲ್ಲಿ ಮೂರು ವೈದ್ಯರ ತಂಡಗಳು ಇದಕ್ಕೆ ಸಿದ್ಧವಾಗಿವೆ. ಪ್ರತಿ ತಂಡದಲ್ಲಿ ಇಬ್ಬರು ತಜ್ಞ ವೈದ್ಯರು, ನಾಲ್ವರು ವೈದ್ಯರು, ಇಬ್ಬರು ಹೌಸ್‌ಮನ್‌ಶಿಪ್‌ ಮಾಡುತ್ತಿರುವ ವೈದ್ಯ ವಿದ್ಯಾರ್ಥಿಗಳು,ಒಬ್ಬ ಟೆಕ್ನಿಷಿಯನ್‌, ಮೂವರು ಶುಶ್ರೂಷಕಿಯರು ಇರುತ್ತಾರೆ.

ಸಮ್ಮೇಳನದ ವೇದಿಕೆ ಹತ್ತಿರ 30X50 ಅಳತೆಯಲ್ಲಿ ಮೂರು ಟೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಅಲ್ಲದೇ, ತುರ್ತು ಚಿಕಿತ್ಸೆಗಾಗಿ 2 ಆಂಬುಲೆನ್ಸ್‌ಗಳು ವೇದಿಕೆ ಹತ್ತಿರ ಯಾವಾಗಲೂ ಸನ್ನದ್ಧ ಸ್ಥಿತಿಯಲ್ಲಿ ಇರಲಿವೆ.

ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್), ಖಾಜಾ ಬಂದಾ ನವಾಜ್‌ ಆಸ್ಪತ್ರೆ (ಕೆಬಿಎನ್), ಇಎಸ್‌ಐ ಅಸ್ಪತ್ರೆ ಮತ್ತು ಬಸವೇಶ್ವರ ಆಸ್ಪತ್ರೆಗಳಲ್ಲಿ ತಲಾ 10 ಬೆಡ್‌ಗಳನ್ನು ಸಮ್ಮೇಳನ ನಡೆಯುವ ಮೂರೂ ದಿನ ಕಾಯ್ದಿರಿಸಲು ನಿರ್ಧರಿಸಲಾಗಿದೆ.

ಅಲ್ಲದೇ, ತೀವ್ರನಿಗಾ (ಐಸಿಯು) ಘಟಕದಲ್ಲಿ ವೆಂಟಿಲೇಟರ್ ಸೌಲಭ್ಯವಿರುವ ಎರಡು ಬೆಡ್‌ಗಳನ್ನು ಯಾವಾಗಲೂ ಸಿದ್ಧ ಮಾಡಿ ಇಟ್ಟಿರಲಾಗುತ್ತದೆ. ಜಯದೇವ ಆಸ್ಪತ್ರೆಯಲ್ಲಿ ಏಳು ಹಾಸಿಗೆ ಹಾಗೂ ಐಸಿಯು ಘಟಕಗಳಲ್ಲಿ ನಾಲ್ಕು ಬೆಡ್‌ಗಳನ್ನು ಕಾಯ್ದಿರಿಸಲು ನಿರ್ಧರಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಮೂರ್ಛೆ, ಹೃದಯಾಘಾತದಂತ ಪ್ರಕರಣಗಳು ಕಂಡುಬಂದರೆ ಇಲ್ಲಿ ತಕ್ಷಣಕ್ಕೆ ಲಭ್ಯವಾಗುವಂತೆ ವೈದ್ಯರನ್ನು ನಿಯೋಜಿಸಲಾಗಿದೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ವೆಂಟಿಲೆಟರ್ ಇರುವ ಎರಡು ಎಎಸ್‌ಡಿಎಲ್ ಆಂಬುಲೆನ್ಸ್‌ಗಳು ಇರಲಿವೆ.

ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆಗೆ ಮನವಿ

‘ನಗರದಲ್ಲಿ 387 ನೋಂದಾಯಿತ ಖಾಸಗಿ ಆಸ್ಪತ್ರೆಗಳು ಇವೆ. ಎಲ್ಲ ಆಸ್ಪತ್ರೆಗಳನ್ನೂ ಸಂಪರ್ಕಿಸಿ, ಸಭೆ ನಡೆಸಲಾಗಿದೆ. ಸಮ್ಮೇಳನದ ಸಂದರ್ಭದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣಕ್ಕೆ ಚಿಕಿತ್ಸೆ ನೀಡಬೇಕು. ಇದಕ್ಕೆ ಯಾವುದೇ ತರದ ಚೌಕಾಶಿ ಮಾಡಕೂಡದು. ಸಾಧ್ಯವಾದರೆ ಉಚಿತ ಚಿಕಿತ್ಸೆ ನೀಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು ಎಂದು ಕೋರಿದ್ದೇವೆ’ ಎಂದುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಕೆ. ಪಾಟೀಲ ತಿಳಿಸಿದ್ದಾರೆ.

ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಹೊಂದಿರುವ ಚಿರಾಯು ಆಸ್ಪತ್ರೆ, ಯುನೈಟೆಡ್, ವಾತ್ಸಲ್ಯ, ಸತ್ಯ ಕೇರ್, ಮೆಡಿಕೇರ್ ಅಸ್ಪತ್ರೆಗಳು ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳು ಸಮ್ಮೇಳನದ ದಿನ ಜನರಿಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ನೀಡಲು ಒಪ್ಪಿಕೊಂಡಿವೆ. ತಮ್ಮ ಆಸ್ಪತ್ರೆಯಲ್ಲಿ ಎರಡು ಬೆಡ್‌ಗಳನ್ನು ಮೀಸಲಿಡಲು ಒಪ್ಪಿಕೊಂಡಿವೆ ಎಂದೂ ಆರೋಗ್ಯಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT