ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ; ರಸ್ತೆಗಳೆಲ್ಲ ಹೊಳೆ

ಎಂಟು ಕಡೆ ಗಿಡಗಳು ಬಿದ್ದು ವಿದ್ಯುತ್‌ ವ್ಯತ್ಯಯ, ತುಂಬಿಕೊಂಡ ಚರಂಡಿಗಳಿಂದ ಹೊರಚಿಮ್ಮಿದ ಕೊಚ್ಚೆನೀರು
Last Updated 2 ಅಕ್ಟೋಬರ್ 2021, 1:49 IST
ಅಕ್ಷರ ಗಾತ್ರ

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಭಾರಿ ಮಳೆ ಸುರಿಯಿತು. ಮಳೆಯ ಹೊಡೆತಕ್ಕೆ ನಗರದ ಎಂಟು ಕಡೆಗಳಲ್ಲಿ ಮರಗಳು ನೆಲಕ್ಕುರುಳಿದವು. ಮತ್ತೆ ಕೆಲವೆಡೆ ಟೊಂಗೆಗಳು ಮುರಿದು ವಿದ್ಯುತ್‌ ತಂತಿಗಳ ಮೇಲೆ ಬಿದ್ದವು. ಪ್ರಮುಖ ರಸ್ತೆಗಳೂ ಸೇರಿದಂತೆ ಬಹುಪಾಲು ಮಾರ್ಗಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯಿತು.

ಕಳೆದ ಒಂದು ವಾರದಿಂದ ಬಿಟ್ಟೂಬಿಡದೇ ಸುರಿಯುತ್ತಿದ್ದ ಮಳೆ ಎರಡು ದಿನ ಮಾತ್ರ ಬಿಡುವು ಪಡೆದಿತ್ತು. ಶುಕ್ರವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಲ್ಲಿ ಆರ್ದ್ರತೆ ವಿಪರೀತವಾಗಿತ್ತು. ಧಗೆಯಿಂದ ಜನ ತತ್ತರಿಸಿದರು. ಆದರೆ, ಸಂಜೆ 7ರ ಸುಮಾರಿಗೆ ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಸುರಿಯಲು ಆರಂಭವಾಯಿತು. ಧಗೆಯಿಂದ ಬಸವಳಿದಿದ್ದ ನಗರವಾಸಿಗಳಿಗೆ ಏಕಾಏಕಿ ಚಳಿಯ ಅನುಭವ ಶುರುವಾಯಿತು.

ಹೊಳೆಯಂತಾದ ರಸ್ತೆಗಳು: ಇಲ್ಲಿನ ಸ್ಟೇಷನ್‌ ರಸ್ತೆ, ಎಂಎಸ್‌ಕೆ ಮಿಲ್‌ ರಸ್ತೆ, ಕೋರ್ಟ್‌ ರೋಡ್‌, ಐವಾನ್‌ ಇ ಶಾಹಿ ರಸ್ತೆ, ಹಳೆ ಜೇವರ್ಗಿ ರಸ್ತೆ, ಹೊಸ ಜೇವರ್ಗಿ ರಸ್ತೆ, ಸೇಡಂ ಮಾರ್ಗ, ಹುಮನಾಬಾದ್‌ ಮಾರ್ಗವೂ ಸೇರಿದಂತೆ ಬಹುಪಾಲು ಎಲ್ಲ ರಸ್ತೆಗಳಲ್ಲೂ ಮಳೆಯ ನೀರು ಹಿಳೆಯಂತೆ ಹರಿಯಿತು. ಏಕಾಏಕಿ ಬಿದ್ದ ಮಳೆಯಲ್ಲಿ ಓಡಾಡಲಾಗದೇ ಪಾದಚಾರಿಗಳು, ವಾಹನ ಸವಾರರು ಚೆಲ್ಲಾಪಿಲ್ಲಿಯಾದರು.‌

ಎಂದಿನಂತೆ ಲಾಳಗೇರಿ ಕ್ರಾಸ್‌, ಎಪಿಎಂಸಿ ಆವರಣ, ಅನ್ನಪೂರ್ಣಾ ಕ್ರಾಸ್‌, ಪ‍್ರಶಾಂತ ನಗರ, ಮಹರ್ಷಿ ವಾಲ್ಮೀಕಿ ಸರ್ಕಲ್‌ಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು, ತಾಸುಗಳ ಕಾಲ ಕೆರೆಯಂತೆ ಬಾಸವಾಯಿತು.

ಶಕ್ತಿ ನಗರ, ಗಾಜಿಯಾಬಾದ್‌, ದರ್ಗಾ ಬಡಾವಣೆ, ಮೋಮಿನ್‌ಪುರ, ಚೌದಾಪುರ ಪ್ರದೇಶ, ಸೂಪರ್‌ ಮಾರ್ಕೆಟ್‌ ಪ್ರದೇಶ, ಸೋನಿಯಾ ಗಾಂಧಿ ಬಡಾವಣೆ, ಹೈಕೋರ್ಟ್‌ ರಸ್ತೆ, ಪೂಜಾ ಕಾಲೊನಿ ರಸ್ತೆ ಹಾಗೂ ಓಂ ನಗರದ ತಗ್ಗು ಪ‍್ರದೇಶಗಳಲ್ಲಿ ನೀರು ನಿಂತಿದ್ದರಿಂದ ಜನ ಪರದಾಡುವಂತಾಯಿತು.

ವೆಂಕಟೇಶ್ವರ ನಗರ, ಶಕ್ತಿನಗರ, ಶಾಸ್ತ್ರಿನಗರ, ಮಹಾವೀರ ನಗರ, ಗುಲ್ಲಾಬಾಡಿ, ಮೋಮಿನ್‌ಪುರ, ವೀರೇಂದ್ರ ಪಾಟೀಲ ಬಡಾವಣೆ, ಗುಲಬರ್ಗಾ ವಿಶ್ವವಿದ್ಯಾಲಯ‍ ಮತ್ತು ಹೈಕೋರ್ಟ್‌ ಸುತ್ತಮತ್ತಲ ಪ್ರದೇಶ ಸೇರಿದಂತೆ ನಗರದ ಹೊರವಲಯದಲ್ಲೂ ಭಾರಿ ಮಳೆಯಾಯಿತು.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅ. 2ರಂದು ಕಲಬುರ್ಗಿಗೆ ಆಗಮಿಸುತ್ತಿರುವ ಕಾರಣ, ನಗರದ ತುಂಬ ಹಾಕಿದ್ದ ಸ್ವಾಗತ ಕಮಾನು, ಫ್ಲೆಕ್ಸ್‌ಗಳು ಮಳೆಯಿಂದಾಗಿ ಕಿತ್ತುಬಿದ್ದವು. ತಡರಾತ್ರಿಯವರೆಗೂ ಕೆಲಸಗಾರರು ಬ್ಯಾನರ್‌, ಸ್ವಾಗತ ಕಮಾನುಗಳನ್ನು ಮರಳಿ ನಿಲ್ಲಿಸುಲು ಶ್ರಮಿಸಿದರು.

ಉಳಿದಂತೆ ಜಿಲ್ಲೆಯ ಕಾಳಗಿ, ಚಿತ್ತಾಪುರ, ಯಡ್ರಾಮಿ, ಸೇಡಂ, ವಾಡಿ, ಕಮಲಾಪುರ, ಯಡ್ರಾಮಿ, ಜೇವರ್ಗಿ ತಾಲ್ಲೂಕು ಗಳಲ್ಲಿಯೂ ಗುಡುಗ ಸಹಿತ ಉತ್ತಮ ಮಳೆ ಬಿದ್ದಿದೆ.

*

ಮರಗಳು ಬಿದ್ದು, ವಿದ್ಯುತ್‌ ಬಂದ್‌

ಕಲಬುರ್ಗಿಯ ಐವಾನ್‌ ಇ ಶಾಹಿ ರಸ್ತೆ, ಅಶೋಕ ನಗರ, ಮಹಾವೀರ ನಗರ, ಪೊಲೀಸ್‌ ಕ್ವಾಟರ್ಸ್‌, ಪ್ರಶಾಂತ ನಗರ, ಭವಾನಿ ನಗರ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಮಳೆಯ ರಭಸಕ್ಕೆ ಎಂಟು ಗಿಡಗಳು ನೆಲಕ್ಕುರುಳಿವೆ. ಮತ್ತೆ ಕೆಲವು ಕಡೆ ಟೊಂಗೆಗಳು ಮುರಿದು ವಿದ್ಯುತ್‌ ತಂತಿ ಮೇಲೆ ಬಿದ್ದಿವೆ ಎಂದು ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡ ಜೆಸ್ಕಾಂ ಸಿಬ್ಬಂದಿ ವಿದ್ಯುತ್‌ ಕಡಿತಗೊಳಿಸಿದರು. ಶುಕ್ರವಾರ ತಡರಾತ್ರಿಯವರೆಗೂ ನಗರದ ಬಹುಪಾಲು ಕಡೆಗಳಲ್ಲಿ ಕತ್ತಲು ಆವರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT