ಶುಕ್ರವಾರ, ಏಪ್ರಿಲ್ 16, 2021
21 °C
ಕಾಮಗಾರಿ ಸ್ಥಗಿತಗೊಳಿಸಲು ಜಿಲ್ಲಾಡಳಿತ ವಿಫಲ; ಮಾಜಿ ಸಚಿವ ಎಸ್‌.ಕೆ.ಕಾಂತಾ ಆರೋಪ

ಕಲಬುರ್ಗಿ: ಹೈಕೋರ್ಟ್‌ ಆದೇಶ ಉಲ್ಲಂಘಿಸಿದ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಮಹಾನಗರ ಪಾಲಿಕೆ ಮಾಜಿ ಸದಸ್ಯರೊಬ್ಬರು ಕೃಷಿಭೂಮಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಶಾದಿಮಹಲ್‌ ನಿರ್ಮಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಅವರು ಹೈಕೋರ್ಟ್‌ನ ಕಲಬುರ್ಗಿ ಪೀಠದ ಆದೇಶ ಉಲ್ಲಂಘಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಮಾಜಿ ಸಚಿವ ಎಸ್‌.ಕೆ.ಕಾಂತಾ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ‘ನಗರದ ರಿಂಗ್‌ ರಸ್ತೆಗೆ ಹೊಂದಿಕೊಂಡ ಜಾಫರಾಬಾದ್‌ ಗ್ರಾಮದ ಸರ್ವೆ ಸಂಖ್ಯೆ 30/1 ರ 2.20 ಎಕರೆ ಕೃಷಿ ಭೂಮಿಯಲ್ಲಿ ಪಾಲಿಕೆ ಮಾಜಿ ಸದಸ್ಯ ಅಲಿಮುದ್ದೀನ್‌ ಪಟೇಲ್‌ ಅವರು ಕೃಷಿಯೇತರ ಹಾಗೂ ಇತರೆ ಇಲಾಖೆಗಳ ಪರವಾನಗಿ ಪಡೆಯದೇ ‘ಕ್ಯೂ.ಪಿ  ಪ್ಯಾಲೇಸ್‌’ ಎಂಬ ಶಾದಿ ಮಹಲ್‌ ನಿರ್ಮಿಸಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ’ ಎಂದು ಅವರು ದೂರಿದರು.

‘ಈ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ ದೂರಿನ ಪ್ರತಿಯನ್ನು ಅಂದಿನ ಜಿಲ್ಲಾಧಿಕಾರಿ ಬಿ.ಶರತ್‌ ಅವರಿಗೆ ಸಲ್ಲಿಸಲಾಗಿತ್ತು. ಅವರು ಭೂಮಾಲೀಕ ಅಲಿಮುದ್ದೀನ್‌ ಪಟೇಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದರು. ಪಟೇಲ್‌ ಅವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯವು, ನಗರ ಯೋಜನೆಯ ಮಾಸ್ಟರ್‌ ಪ್ಲಾನ್‌ನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಅವಕಾಶವಿದ್ದಲ್ಲಿ ಅರ್ಜಿದಾರರು, ಒಂದು ತಿಂಗಳ ಒಳಗಾಗಿ ವಾಣಿಜ್ಯ ಉದ್ದೇಶಕ್ಕಾಗಿ ಕೃಷಿಯೇತರ ಪರವಾನಗಿಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಜಿಲ್ಲಾಧಿಕಾರಿ ಪರಿಶೀಲಿಸಿ ದಂಡ ವಿಧಿಸಿ, ಘಟನೋತ್ತರ ಮಂಜೂರಾತಿ ನೀಡತಕ್ಕದ್ದು ಎಂದು ಆದೇಶ ಹೊರಡಿಸಿದೆ. ಅಲ್ಲಿಯವರೆಗೆ ಈ ಜಮೀನಿನಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಬಾರದು ಎಂದೂ ಜಮೀನಿನ ಮಾಲೀಕರಿಗೆ ನಿರ್ದೇಶಿಸಿದೆ. ಆದರೆ, ಹೈಕೋರ್ಟ್‌ ಆದೇಶವನ್ನು ಗಾಳಿಗೆ ತೂರಿ ಕಟ್ಟಡ ಉದ್ಘಾಟಿಸಿ, ಮದುವೆ ಸೇರಿದಂತೆ ಅನೇಕ ಸಮಾರಂಭಗಳಿಗೆ ಬಾಡಿಗೆ ನೀಡಲಾಗುತ್ತಿದೆ’ ಎಂದು ಆಮಂತ್ರಣ ಪತ್ರಿಕೆ ಹಾಗೂ ಛಾಯಾಚಿತ್ರಗಳನ್ನು ಬಿಡುಗಡೆ
ಮಾಡಿದರು.

‘ಜಿಲ್ಲಾಧಿಕಾರಿ ಯಾವುದೇ ಕ್ರಮ ಜರುಗಿಸದೇ ನ್ಯಾಯಾಂಗ ನಿಂದನೆ ಮಾಡಿದ್ದು, ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಗೂ ದೂರು ನೀಡಲಾಗಿದೆ. ಅವರು ಕೂಡ ಕ್ರಮ ಜರುಗಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಅಲ್ಲದೇ, ನ್ಯಾಯಾಲಯದ ಆದೇಶದಂತೆ ಪ್ರಕರಣ ಇತ್ಯರ್ಥ ಆಗುವವರೆಗೂ ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತರು ಜಿಲ್ಲಾಧಿಕಾರಿಯನ್ನು ಕೋರಿ ತಿಂಗಳು ಕಳೆದರೂ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಕರಣ ಕುರಿತಂತೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಕೋರ್ಟ್‌ ಮೊರೆ ಹೋಗುತ್ತೇವೆ’ ಎಂದು ಎಸ್‌.ಕೆ. ಕಾಂತಾ ತಿಳಿಸಿದರು.

ಕಟ್ಟಡ ಧ್ವಂಸಕ್ಕೆ ನೋಟಿಸ್ ಕೊಟ್ಟಿದ್ದೆವು: ಜಿಲ್ಲಾಧಿಕಾರಿ

‘ಕೃಷಿ ಭೂಮಿಯಲ್ಲಿ ಶಾದಿ ಮಹಲ್ ನಿರ್ಮಿಸಿದ್ದರ ಬಗ್ಗೆ ದೂರು ಬಂದ ಪ್ರಯುಕ್ತ ಕಟ್ಟಡವನ್ನು ಧ್ವಂಸಗೊಳಿಸಲು ತೀರ್ಮಾನಿಸಿ ಈ ಸಂಬಂಧ ಕಟ್ಟಡ ಮಾಲೀಕರಿಗೆ ನೋಟಿಸ್‌ ಕೊಟ್ಟಿದ್ದೆವು.
ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠವು ಅಗತ್ಯ ದಂಡ ಹಾಗೂ ಶುಲ್ಕವನ್ನು ಪಾವತಿಸಿ ಎನ್‌.ಎ. ಮಾಡಿಕೊಳ್ಳುವಂತೆ ಅರ್ಜಿದಾರರಿಗೆ ಸೂಚನೆ ನೀಡಿತ್ತು’ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದರು.

ಎಸ್‌.ಕೆ. ಕಾಂತಾ ಅವರ ಆರೋಪಗಳ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘ನ್ಯಾಯಾಲಯದ ಸೂಚನೆಯಂತೆ ಶಾದಿ ಮಹಲ್‌ನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಮಹಾನಗರ ಪಾಲಿಕೆ ಆಯುಕ್ತರು ನೋಟಿಸ್‌ ನೀಡಿದ್ದಾರೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು