ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರಿಂಗ್ ರಸ್ತೆ ಅನುಷ್ಠಾನಗೊಳ್ಳದಿದ್ದರೆ ರಾಜೀನಾಮೆ- ಸಂಸದ ಡಾ. ಉಮೇಶ ಜಾಧವ್

ಸಂಸದ ಡಾ. ಉಮೇಶ ಜಾಧವ ಅವರೊಂದಿಗೆ ಎಚ್‌ಕೆಸಿಸಿಐ ಸಂವಾದ
Last Updated 22 ಜನವರಿ 2022, 16:25 IST
ಅಕ್ಷರ ಗಾತ್ರ

ಕಲಬುರಗಿ: ‘ನಗರದ ಹೊರವಲಯದಲ್ಲಿ ಹೊಸ ಬೈಪಾಸ್ ರಿಂಗ್ ರಸ್ತೆ ಮಂಜೂರು ಮಾಡಿಸುವುದು ಶತಃ ಸಿದ್ಧ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ₹ 300 ಕೋಟಿ ಬಿಡುಗಡೆ ಮಾಡಿಸುತ್ತೇನೆ. ಈ ಕೆಲಸ ಆಗದಿದ್ದರೆ ನಾನು ರಾಜೀನಾಮೆ ನೀಡಲೂ ಹಿಂಜರಿಯುವುದಿಲ್ಲ’ ಎಂದು ಸಂಸದ ಡಾ. ಉಮೇಶ ಜಾಧವ್ ಸ್ಪಷ್ಟಪಡಿಸಿದರು.

ಇಲ್ಲಿನ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ (ಎಚ್‌ಕೆಸಿಸಿಐ) ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಆರಂಭ, ಕಲಬುರಗಿ, ಆಳಂದ, ಉಮರ್ಗಾ, ಉಸ್ಮಾನಾಬಾದ್‌ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ, ಹೈದರಾಬಾದ್, ಗುರಮಠಕಲ್, ಕಲಬುರಗಿ, ಯಾದಗಿರಿ, ವಿಜಯಪುರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿ ಪಡಿಸುವ, ಶಹಾಬಾದ್ ರೈಲು ನಿಲ್ದಾಣದಲ್ಲಿ ಸ್ಥಗಿತಗೊಳಿಸಲಾಗಿರುವ ಹಲವು ರೈಲುಗಳ ನಿಲುಗಡೆಯನ್ನು ಪುನಃ ಜಾರಿಗೊಳಿಸುವ ಹಾಗೂ ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಸೌಕರ್ಯ ಒದಗಿಸುವ ಬಗ್ಗೆ ಸಂವಾದದಲ್ಲಿ ವಿವಿಧ ಸಂಘ–ಸಂಸ್ಥೆಗಳ ಮುಖಂಡರು ಸಂಸದರನ್ನು ಪ್ರಶ್ನಿಸಿದರು.

ಸಂಸದ ಡಾ. ಉಮೇಶ ಜಾಧವ ಮಾತನಾಡಿ, ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆಗೆ ಪ್ರಯತ್ನ ಮುಂದುವರೆದಿದೆ. ಕಲಬುರಗಿಯಲ್ಲಿ ಹೊಸ ರಿಂಗ್ ರಸ್ತೆಯನ್ನು ನಿರ್ಮಿಸುವ ವಿಷಯವನ್ನು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದು, ಅವರುಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅತೀ ಶೀಘ್ರವೇ ಮಂಜೂರಾಗುವುದು ಎಂದು ಆಶ್ವಾಸನೆ ನೀಡಿದರು.

ಕಲಬುರಗಿ ನಗರದಲ್ಲಿ ಬೃಹತ್ ಜವಳಿ ಉದ್ಯಾನ ಸ್ಥಾಪನೆ ಕುರಿತು ಪ್ರಸ್ತಾಪಿಸಿದ ಅವರುಗಳು ಅದು ಸಹ ಮಂಜೂರಾಗುವ ಸಾಧ್ಯತೆಯನ್ನು ಹೇಳಿದರು. ಹಲವು ಹೊಸ ರೈಲುಗಳನ್ನು ಪ್ರಾರಂಭಿಸಲು ರೈಲ್ವೆ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದರು.

ಶಹಾಬಾದ್ ರೈಲು ನಿಲ್ದಾಣದಲ್ಲಿ ಸ್ಥಗಿತಗೊಳಿಸಲಾಗಿರುವ ರೈಲು ನಿಲುಗಡೆಯನ್ನು ಹಾಗೂ ಇತರ ರೈಲು ಸೌಕರ್ಯಗಳ ಬಗ್ಗೆ ಇದೇ 25ರಂದು ಪುಣೆಯಲ್ಲಿ ಆಯೋಜಿಸಲಾಗಿರುವ ಸಭೆಯಲ್ಲಿ ಕೇಂದ್ರ ರೈಲ್ವೆಯ ಪ್ರಧಾನ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಇತ್ಯರ್ಥ ಪಡಿಸಲಾಗುವುದು ಎಂದು ಹೇಳಿದರು.

ಎಚ್‌ಕೆಸಿಸಿಐ ಅಧ್ಯಕ್ಷ ಪ್ರಶಾಂತ ಎಸ್. ಮಾನಕರ, ಗೌರವ ಕಾರ್ಯದರ್ಶಿ ಶರಣಬಸಪ್ಪ ಎಂ. ಪಪ್ಪಾ, ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ಎಚ್‌ಕೆಸಿಸಿಐ ಆಡಳಿತ ಮಂಡಳಿ ಸದಸ್ಯ ಮನೀಷ್ ಜಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT