ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋಮಿಯೊಪಥಿ ವೈದ್ಯರಿಗೆ ಉತ್ತಮ ಭವಿಷ್ಯ’

ಡಾ.ಮಾಲಕರಡ್ಡಿ ಹೋಮಿಯೊಪಥಿಕ್ ಮೆಡಿಕಲ್‌ ಕಾಲೇಜ್‌– ಆಸ್ಪತ್ರೆಯ ಸುಸಜ್ಜಿತ ನೂತನ ಕಟ್ಟಡ ಉದ್ಘಾಟನೆ
Last Updated 13 ಡಿಸೆಂಬರ್ 2020, 15:16 IST
ಅಕ್ಷರ ಗಾತ್ರ

ಕಲಬುರ್ಗಿ: ‘ಇತ್ತೀಚಿನ ದಿನಗಳಲ್ಲಿ ಹೋಮಿಯೊ‍ಪಥಿ ಔಷಧಿಯ ಮಹತ್ವ ಎಲ್ಲೆಡೆ ಅರ್ಥವಾಗುತ್ತಿದೆ. ಆಧುನಿಕ ಸಮಾಜವನ್ನು ಕಾಡುತ್ತಿರುವ ಹಲವು ರೋಗಗಳು ಇದರಿಂದ ಗುಣಮುಖವಾಗುತ್ತಿವೆ. ಇದು ಹೋಮಿಯೊಪಥಿ ವೈದ್ಯರ ಮಹತ್ವ ಹೆಚ್ಚುವಂತೆ ಮಾಡಿದೆ. ಹೀಗಾಗಿ, ವಿದ್ಯಾರ್ಥಿಗಳು ಕೀಳರಿಮೆ ತೊರೆದು ಅಧ್ಯಯನ ನಡೆಸಬೇಕು’ ಎಂದು ಮಾಜಿ ಸಚಿವ ಡಾ.ಎ.ಬಿ. ಮಾಲಕರಡ್ಡಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಡಾ.ಮಾಲಕರಡ್ಡಿ ಹೋಮಿಯೊಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾನಾಡಿದರು.

‘ಈ ಔಷಧಿ ಬಗ್ಗೆ ಹಿಂದೆ ತಿರಸ್ಕಾರದ ಭಾವನೆ ಇತ್ತು. ಹೋಮಿಯೊಪಥಿ ವೈದ್ಯರೆಂದರೆ ಮೂಗು ಮುರಿಯುವ ದಿನಗಳಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದ್ದು, ಪರಿಣಾಮಕಾರಿ ಚಿಕಿತ್ಸೆಯೂ ದೊರೆಯುತ್ತಿದೆ. ಕಡಿಮೆ ಖರ್ಚಿನಲ್ಲಿ ಹೋಮಿಯೊಪಥಿ ಚಿಕಿತ್ಸೆ ಪಡೆದುಕೊಳ್ಳಬಹುದು. ಬಡ, ಮಧ್ಯಮ ವರ್ಗದ ಜತೆಗೆ ಉಳ್ಳವರೂ ಹೋಮಿಯೊಪಥಿಯತ್ತ ವಾಲುತ್ತಿದ್ದಾರೆ‘ ಎಂದರು.

‘ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಈ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಇದರ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಾಶ್ವತವಾಗಿ ಉಳಿಯುವ ಮತ್ತು ಜನ ಮೆಚ್ಚುವಂಥ ಕೆಲಸ ಮಾಡಬೇಕು. ಅಧಿಕಾರದಲ್ಲಿ ಎಷ್ಟು ದಿನ ಇವೆ ಎಂಬುದಕ್ಕಿಂತ ಇದ್ದ ಅವಧಿಯಲ್ಲಿ ಮಾಡಿರುವ ಕೆಲಸಗಳು ಎಷ್ಟು ಮಹತ್ವದ್ದವು ಎಂದು ಜನ ನೋಡುತ್ತಾರೆ ಎಂಬ ಎಚ್ಚರಿಕೆ ನಮ್ಮಲ್ಲಿ ಇರಬೇಕು’ ಎಂದು ಅವರು ಸಲಹೆ ನೀಡಿದರು.

‘ಈ ಸಂಸ್ಥೆ ಚುನಾವಣೆ ಸಮೀಪಿಸುತ್ತಿದೆ. ಎಲ್ಲರೂ ಕೂಡಿ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಿ. ಯಾವುದೇ ಕಾರಣಕ್ಕೂ ಸಂಸ್ಥೆಗೆ ಧಕ್ಕೆ ತರುವಂಥ ತಂಟೆಗಳು ಆಗದಿರಲಿ. ಸೇವಾ ಮನೋಭಾವದಿಂದ ಕೆಲಸ ಮಾಡಿದವರಿಗೆ ಯಶಸ್ಸು ಖಂಡಿತ ಸಿಗುತ್ತೆ’ ಎಂದೂ ಅವರು ಕಿವಿಮಾತು ಹೇಳಿದರು.‌

ಸಂಸದ ಡಾ.ಉಮೇಶ ಜಾಧವ ಮಾತನಾಡಿ, ‘ಕಲಬುರ್ಗಿ ನಗರಕ್ಕೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 150 ಎಕರೆ ಜಮೀನು ನೀಡುವ ಭರವಸೆ ಕೂಡ ದೊರೆತಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೂಡ ಈ ಬಗ್ಗೆ ಸಕಾರಾತ್ಮಕ ನಿಲುವು ಹೊಂದಿದ್ದಾರೆ. ಕೇಂದ್ರ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ’ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಎಚ್‌ಕೆಇ ಸಂಸ್ಥೆ ಈ ಭಾಗದಲ್ಲಿ ಹೋಮಿಯೊ‍ಥಿ ಚಿಕಿತ್ಸೆಗಾಗಿಯೇ ಹೈಟೆಕ್ ಆಸ್ಪತ್ರೆ ನಿರ್ಮಿಸಿದ್ದು ಪ್ರಶಂಸನೀಯ. ಕೆಕೆಆರ್‌ಡಿಬಿ ಅಧ್ಯಕ್ಷನಾಗಿ ಈ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲು ಪ್ರಯತ್ನಿಸುತ್ತಿದ್ದೇನೆ‌’ ಎಂದರು.

ಇದಕ್ಕೂ ಮುನ್ನ ಕಟ್ಟಡ ಉದ್ಘಾಟಿಸಿದ ಅಬ್ಬೆತುಮಕೂರು ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಿದ್ದರು. ತೆಲಂಗಾಣದ ಜಡಚರ್ಲ ಶಾಸಕ ಡಾ.ಸಿ.ಲಕ್ಷ್ಮಾರೆಡ್ಡಿ, ಸಂಸ್ಥೆಯ ಉಪಾಧ್ಯಕ್ಷ ಡಾ.ಶಿವಾನಂದ ದೇವರಮನಿ, ಕಾರ್ಯದರ್ಶಿ ನಿತಿನ್ ಜವಳಿ, ಡಾ.ಬಸವರಾಜ, ಡಾ.ಸಂಪತಕುಮಾರ ಲೋಯಾ, ವಿಜಯಕುಮಾರ ದೇಶಮುಖ, ಡಾ.ನಾಗೇಂದ್ರ ಮಂಠಾಳೆ, ಅರುಣಕುಮಾರ ಪಾಟೀಲ, ಉದಯಕುಮಾರ ಚಿಂಚೋಳಿ, ಅನುರಾಧ ದೇಸಾಯಿ, ಅನಿಲಕುಮಾರ ಮರಗೋಳ, ಡಾ.ಎಸ್.ಬಿ. ಕಾಮರಡ್ಡಿ, ಸತೀಶ್ಚಂದ್ರ ಹಡಗಲಿಮಠ, ಡಾ.ಶಿವಪುತ್ರಪ್ಪ ಹರವಾಳ, ಸಂಜಯ ಮಾಕಲ್ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT