ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾಪುರ | ಕಾಟಾಚಾರಕ್ಕೆ ಮಾನವ ಸರಪಳಿ ಆಯೋಜನೆ: ಸಾರ್ವಜನಿಕರ ಬೇಸರ

ಕಿಣ್ಣಿ ಸಡಕ್‌ನಿಂದ ಕಮಲಾಪುರವರೆಗೆ ತುಂಡುತುಂಡಾದ ಸರಪಳಿ
Published : 16 ಸೆಪ್ಟೆಂಬರ್ 2024, 3:29 IST
Last Updated : 16 ಸೆಪ್ಟೆಂಬರ್ 2024, 3:29 IST
ಫಾಲೋ ಮಾಡಿ
Comments

ಕಮಲಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ನಿಮಿತ್ತ ಆಯೋಜಿಸಿದ್ದ ಮಾನವ ಸರಪಳಿ ಕಮಲಾಪುರ ತಾಲ್ಲೂಕಿನಾದ್ಯಂತ ಕಡಿದು ತುಂಡಾಗಿದ್ದು ಕಂಡುಬಂದಿದ್ದು ಕಾಟಾಚಾರಕ್ಕೆ ಮನವ ಸರಪಳಿ ಆಯೋಜಿಸಲಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲೆಯ ಗಡಿ ಕಿಣ್ಣಿಸಡಕ್‌ ಸೇತುವೆಯಿಂದ ಕಮಲಾಪುರ ತಾಲ್ಲೂಕು ಸರಹದ್ದು ಆರಂಭಗೊಂಡಿದ್ದು, ಆರಂಭದಲ್ಲೇ ಅವ್ಯವಸ್ಥೆ ಎದ್ದು ಕಾಣುತ್ತಿತ್ತು. ವೇದಿಕೆ ಕಾರ್ಯಕ್ರಮ ಇಲ್ಲದಿದ್ದರೂ ಕಿಣ್ಣಿ ಸಡಕ್ ಬಳಿ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಕೆಲ ರಾಜಕೀಯ ನಾಯಕರು, ಮೇಲಧಿಕಾರಿಗಳು ವೇದಿಕೆ ಮೇಲೆ ಕುಳಿತಿದ್ದರು. ಕೆಲ ಶಾಲೆ ಮಕ್ಕಳು ಸಾಂಸ್ಕೃತಿಕ ನೃತ್ಯ ಮಾಡುತ್ತಿದ್ದರಿಂದ ಅಲ್ಲಿಯೆ ಜನ ಸುತ್ತುವರಿದಿದ್ದರು. ಸ್ಥಳದಲ್ಲೇ ಸಾವಿರಾರು ಜನ ಇದ್ದರೂ ಒಬ್ಬರಿಗೊಬ್ಬರು ಕೈಹಿಡಿದು ಸಾಲಾಗಿ ನಿಲ್ಲಲ್ಲಿಲ್ಲ. 

ಶಿಕ್ಷಣ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ, ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಕೇವಲ ಸೆಲ್ಫಿ ತೆಗೆದುಕೊಳ್ಳುವಲ್ಲಿ ಮಗ್ನರಾಗಿದ್ದರು. ಮಾನವ ಸರಪಳಿ ನಿರ್ವಹಣೆಗೆಂದು ನೇಮಿಸಿದ್ದ ನೋಡಲ್ ಅಧಿಕಾರಿ, ಸೆಕ್ಟರ್‌ ಅಧಿಕಾರಿ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಶಿಕ್ಷಕರು ಮುತುವರ್ಜಿ ವಹಿಸಲಿಲ್ಲ. ಎಲ್ಲ ಕಡೆ ತಹಶೀಲ್ದಾರ್ ಮೊಹಸೀನ್‌ ಅಹಮ್ಮದ್‌ ಒಬ್ಬರೇ ಓಡಾಡುತ್ತಿದ್ದರು. ನಂತರ ಬೇಸರಗೊಂಡ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ವೈಜನಾಥ ತಡಕಲ್ ತಾವೆ ಬಂದು ಜನರನ್ನು ಕೈ ಹಿಡಿದು ಸಾಲಾಗಿ ನಿಲ್ಲಿಸುವಂತೆ ಮನವಿ ಮಾಡಿದರು.

ಕಮಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ ಸೂಕ್ತ ನಿರ್ವಹಣೆ ಮಾಡಿದ್ದರು.

ಕಿಣ್ಣಿ ಸಡಕ್‌ ಬಳಿ ಬಂಜಾರ ಮಹಿಳೆಯರು ಸಂವಿಧಾನ ಪೀಠಿಕೆ ಓದಿದರು
ಕಿಣ್ಣಿ ಸಡಕ್‌ ಬಳಿ ಬಂಜಾರ ಮಹಿಳೆಯರು ಸಂವಿಧಾನ ಪೀಠಿಕೆ ಓದಿದರು

ಬೀದರ್‌ ಬಲ, ಕಲಬುರಗಿ ಎಡ– ಗೊಂದಲ: ಬೀದರ್‌ ಜಿಲ್ಲೆಯ ಬಸವಕಲ್ಯಾಣದಿಂದ ಹಳ್ಳಿಖೇಡ (ಕೆ) ವರೆಗೆ ಬಲಭಾಗದಲ್ಲಿ ಮಾನವ ಸರಪಳಿ ನಿರ್ಮಿಸಲಾಗಿತ್ತು. ಕಲಬುರಗಿ ಜಿಲ್ಲೆಯಲ್ಲಿ ಎಡ ಭಾಗದಲ್ಲಿ ಮಾನವ ಸರಪಳಿ ನಿರ್ಮಿಸಲಾಗಿತ್ತು.

ಕಿಣ್ಣಿ ಸಡಕ್‌ ಬಳಿ ಬೀದರ್ ಜಿಲ್ಲೆಯವರು ಕಲಬುರಗಿಯವರಿಗೆ ಬಲ ಭಾಗಕ್ಕೆ ನಿಲ್ಲುವಂತೆ ತಿಳಿಸಿದರು. ಸರ್ಕಾರದ ಆದೇಶದಂತೆ ಈಗಾಗಲೇ ನಾವು ಎಲ್ಲೆಡೆ ಎಡ ಭಾಗದಲ್ಲಿ ನಿಲ್ಲಿಸಿದ್ದೇವೆ. ಹೀಗಾಗಿ ನಾವು ಬಲಭಾಗಕ್ಕೆ ಬರಲು ಆಗುವುದಿಲ್ಲ ಎಂದರು. ಇದರಿಂದಾಗಿ ಬೀದರ್‌ ಕಲಬುರಗಿ ಮಧ್ಯೆ ಮಾನವ ಸರಪಳಿ ತುಂಡಾಯಿತು.

ಕಿಣ್ಣಿಸಡಕ ಬಳಿ ಸಸಿ ನೆಡಲಾಯಿತು. ಎಸಿಪಿ ಬಿಂದುಮಣಿ, ಮಾಜಿ ಸಚಿವ ರೇವುನಾಯಕ ಬೆಳಮಗಿ, ವೈಜನಾಥ ತಡಕಲ್, ಗುರುರಾಜ ಮಾಟೂರ, ಸಿಪಿಐ ಶಿವಶಂಕರ ಸಾಹು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಕ್ಷೇತ್ರ ಸಮನ್ವಯಾಧಿಕಾರಿ ಶಾಂತಾಬಾಯಿ ಬಿರಾದಾರ, ಪಿಎಸ್ಐ ಸಂಗೀತಾ ಸಿಂಧೆ ಮತ್ತಿತರರು ಇದ್ದರು.

ಕಮಲಾಪುರ ತಾಲ್ಲೂಕಿನ ಕಿಣ್ಣಿಸಡಕ್ ಬಳಿ ಗಣ್ಯರು ಸಸಿ ನೆಟ್ಟರು
ಕಮಲಾಪುರ ತಾಲ್ಲೂಕಿನ ಕಿಣ್ಣಿಸಡಕ್ ಬಳಿ ಗಣ್ಯರು ಸಸಿ ನೆಟ್ಟರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT