ಸೇಡಂ (ಕಲಬುರಗಿ ಜಿಲ್ಲೆ): ಲೈಂಗಿಕ ಕ್ರಿಯೆಯಲ್ಲಿ ಸಹಕರಿಸದ ಪತ್ನಿಯನ್ನು ಕೊಡಲಿಯಿಂದ ಕೊಲೆ ಮಾಡಿದ ಪತಿ, ಬಳಿಕ ಸೇಡಂ ಠಾಣೆಯ ಪೊಲೀಸರಿಗೆ ಭಾನುವಾರ ಶರಣಾಗಿದ್ದಾನೆ.
ಬಟಗೇರಾ (ಬಿ) ನಿವಾಸಿ ನಾಗಮ್ಮ ಶೇಖಪ್ಪ (45) ಕೊಲೆಯಾದವರು. ಪತಿ ಶೇಖಪ್ಪ ಮಾದ್ವಾರ ಕೊಲೆ ಆರೋಪಿ. ದಂಪತಿಗೆ ಮೂವರು ಪುತ್ರಿಯರು ಇದ್ದಾರೆ.
ಕೊಲೆಯಾದ ನಾಗಮ್ಮ ಅವರು ಶೇಖಪ್ಪನ ಮೊದಲ ಪತ್ನಿಯಾಗಿದ್ದು, ಐದಾರು ವರ್ಷಗಳ ಹಿಂದೆಯೇ ಶೇಖಪ್ಪ 2ನೇ ಮದುವೆಯಾಗಿದ್ದ. ಕುಡಿತದ ಚಟದಿಂದಾಗಿ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ನಾಗಮ್ಮ ಅವರ ಸಹೋದರ ಮತ್ತು ಆತನ ಪತ್ನಿ ಮನೆಗೆ ಬಂದು ರಾಜಿ ಸಂಧಾನ ಮಾಡಿಸುತ್ತಿದ್ದರು. ಶನಿವಾರ ರಾತ್ರಿ ನಾಗಮ್ಮ ಸಹೋದರ ತನ್ನ ಪತ್ನಿಯನ್ನು ಶೇಖಪ್ಪನ ಮನೆಯಲ್ಲಿ ಬಿಟ್ಟು, ತಮ್ಮ ಸ್ವಂತ ಮನೆಗೆ ವಾಪಸಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಗಮ್ಮ ಹಾಗೂ ಶೇಖಪ್ಪ ಕೊಣೆಯಲ್ಲಿ ಮಲಗಿದ್ದರು. ರಾತ್ರಿ ಲೈಂಗಿಕ ಕ್ರಿಯೆಯಲ್ಲಿ ಶೇಖಪ್ಪನಿಗೆ ಪತ್ನಿ ಸಹಕರಿಸಲಿಲ್ಲ. ಬೆಳಗಿನ ಜಾವ ಒತ್ತಾಯ ಮಾಡಿದಾಗ ಮತ್ತೆ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಕೋಪಗೊಂಡ ಶೇಖಪ್ಪ, ಪತ್ನಿಯ ಕುತ್ತಿಗೆಗೆ ಹಗ್ಗ ಬಿಗಿದು, ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಡಲಿಯನ್ನು ಶವದ ಮೇಲಿಟ್ಟು ಪೊಲೀಸರಿಗೆ ಶರಣಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.