ಮಂಗಳವಾರ, ಮಾರ್ಚ್ 21, 2023
25 °C
ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ ಪಿಎಸ್‌ಐ ಹಗರಣದ ಆರೋಪಿ ಆರ್‌.ಡಿ ಪಾಟೀಲ 

ಜನರು ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ; ವಿಡಿಯೊ ಹರಿಬಿಟ್ಟ ಪಿಎಸ್‌ಐ ಹಗರಣ ಆರೋಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಶುಕ್ರವಾರ ಮಧ್ಯರಾತ್ರಿ ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 

ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರ್‌.ಡಿ.ಪಾಟೀಲ ಅವರು ಸಿಐಡಿ ವಿಚಾರಣೆಗೂ ಹಾಜರಾಗಿಲ್ಲ. ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. 

ವಿಡಿಯೊದಲ್ಲಿ ತಮ್ಮ ಅಭಿಮಾನಿಗಳಿಗೆ ನಮಸ್ಕಾರ ತಿಳಿಸಿರುವ ಪಾಟೀಲ, ‘ರಾಜಕೀಯ ಕುತಂತ್ರ ಮಾಡಿ ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ಕೆಲ ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಾಗಿ, ನನ್ನ ಮೇಲೆ ಕುತಂತ್ರ ಹೆಣೆದಿದ್ದಾರೆ. ಅಫಜಲಪುರ ಕ್ಷೇತ್ರದ ಜನರು ಬಯಸಿದರೆ, ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವೆ’ ಎಂದು ಹೇಳಿದ್ದಾರೆ.

ವಿಡಿಯೊದಲ್ಲಿ ಆರ್‌.ಡಿ ಪಾಟೀಲ ಹೇಳಿದ್ದು ಏನು?
‘ಸುಮಾರು 8–9 ತಿಂಗಳು ಕಾಲ ಕೆಲವೊಂದು ರಾಜಕೀಯ ಮುಖಂಡರು ಕುತಂತ್ರದಿಂದ ನನ್ನನ್ನು ಹಾಗೂ ನನ್ನ ಸಹೋದರ ಮಹಾಂತೇಶ ಪಾಟೀಲ ಅವರನ್ನು ಪಿಎಸ್‌ಐ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಿಲುಕಿಸಿದ್ದಾರೆ. ಸಮಾಜ ಸೇವೆ, ಚುನಾವಣಾ ಸ್ಪರ್ಧೆಗೆ ಬರಬಹುದು ಎಂಬ ಭಯದಿಂದ ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಕೆಲವು ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಮಾತು ಕೇಳಿ ಸುಳ್ಳು ಆರೋಪ ಮಾಡಿದ್ದಾರೆ. ಹಾಗಾಗಿ, ಅಂತಹ ಯಾವುದೇ ಸುಳ್ಳು ಆರೋಪಕ್ಕೆ ನಾವು ಬೆದರದೆ, ನಮ್ಮ ಸೇವೆ ಅಫಜಲಪುರದ ಬಡವರ ಪರವಾಗಿ, ಸಾಮಾಜಿಕ ಕಳಕಳಿಯ ಪರವಾಗಿ ಇರುತ್ತದೆ. ಯಾವತ್ತು ನಮ್ಮ ಸಹಾಯ ಸಹಕಾರ ಮುಂದುವರೆಯುತ್ತದೆ. ನಮ್ಮ ಅಭಿಮಾನಿಗಳು ಆತ್ಮೀಯರು, ಮಿತ್ರರು, ಬಂಧುಗಳು, ಹಿತೈಷಿಗಳು ಭಯಪಡುವ ಅಗತ್ಯವಿಲ್ಲ’ ಎಂದಿದ್ದಾರೆ. 

‘ಇತ್ತೀಚಿನ ದಿನಗಳಲ್ಲಿ ಆರ್‌.ಡಿ ಪಾಟೀಲ ಜಾಮೀನಿನ ಮೇಲೆ ಹೊರ ಬಂದ ಬಳಿಕ ಸಿಐಡಿ ವಿಚಾರಣೆಗೆ ಸ್ಪಂದಿಸುತ್ತಿಲ್ಲ, ಓಡಿ ಹೋಗಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಒಂದು ಕಡೆಯ ಹೇಳಿಕೆಗಳು ಮಾತ್ರ ಬರುತ್ತಿವೆ. ಅವರು ಏನು ಹೇಳುತ್ತಿದ್ದಾರೆ ಅದಷ್ಟೆ ಬರುತ್ತಿದೆ. ಸತ್ಯಾಸತ್ಯತೆ ಗೊತ್ತಿಲ್ಲ. ಅದನ್ನೇ ಸತ್ಯವೆನ್ನುವುದು ಬೇಡ ಎಂಬ ಉದ್ದೇಶದಿಂದ ಈ ವಿಡಿಯೊ ಮೂಲಕ ಕೇಳಿಕೊಳ್ಳುತ್ತಿದ್ದೇನೆ’ ಎಂದು ಕೋರಿದ್ದಾರೆ.

‘ಯಾರೂ ನಮ್ಮನ್ನು ರಾಜಕೀಯ ಕುತಂತ್ರದಿಂದ ಈ ಪ್ರಕರಣದಲ್ಲಿ ಸಿಲುಕಿಸಿ ಬಗ್ಗು ಬಡಿಯಬೇಕು, ಇವರನ್ನು ಯಾವುದೇ ರಾಜಕೀಯದಲ್ಲಿ  ಮುಂದುವರಿಯಲು ಬಿಡಬಾರದು ಎಂಬ ಉದ್ದೇಶದಿಂದ ಸಿಲುಕಿಸಿದ್ದಾರೆ. ಇಂತಹ ಹತ್ತಾರು ಪ್ರಕಣಗಳಲ್ಲಿ ಸಿಲುಕಿಸಿದರೂ ನಮ್ಮ ಸಾಮಾಜಿಕ ಕಳಕಳಿ, ಬಡವರ ಪರವಾದ ಸಹಾಯ ಸಹಕಾರ ಮುಂದುವರಿಯುತ್ತದೆ’ ಎಂದು ಹೇಳಿದ್ದಾರೆ.
‘ನೀನು ಶಾಸಕನಾಗಲು ತುಂಬ ಪ್ರಯತ್ನಪಡುತ್ತಿದ್ದಿಯಂತೆ, ತಾಲ್ಲೂಕಿನ ಅನೇಕ ರಾಜಕೀಯ ಮುಖಂಡರು ಫೋನ್ ಮಾಡಿ ಹೇಳುತ್ತಿದ್ದಾರೆ ಎಂಬ ಸಂಗತಿಗಳು ನನಗೆ ಹೇಳುತ್ತಿದ್ದರು. ನಾನು ಯಾವತ್ತೂ ಅಫಜಲಪುರ ತಾಲ್ಲೂಕಿನ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ.  ಸುಮ್ಮನೆ ಏನೋ ವದಂತಿ ಹಬ್ಬಿಸುತ್ತಿದ್ದರು ಆವಾಗ. ಆದರೆ, ಇವತ್ತು ನಾನು ಈ ವಿಡಿಯೊ ಮುಖಾಂತರ, ರಾಜಕೀಯ ಕುತಂತ್ರದಿಂದ ಈ ಪ್ರಕರಣದಲ್ಲಿ ಸಿಲುಕಿಸಿದವರಿಗೆ ಮುಟ್ಟಿಸುವ ಸಂದೇಶ ಏನೆಂದರೆ, ನಮ್ಮ ಅಫಜಲಪುರ ಕ್ಷೇತ್ರದ ಜನರು ನನಗೆ ಅವಕಾಶ ಮಾಡಿಕೊಟ್ಟರೆ, ಅವರು ಬಯಸಿದರೆ ಖಂಡಿತವಾಗಿ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ’ ಎಂದಿದ್ದಾರೆ. 

‘ನಾನು ಎಲ್ಲಿಯೂ ಓಡಿ ಹೋಗಿಲ್ಲ. ಇದೇ 19ರಂದು ಜಾರಿ ನಿರ್ದೇಶನಾಲಯದ  ಅನೇಕ ಅಧಿಕಾರಿಗಳು ಬೆಳಿಗ್ಗೆ 6ಕ್ಕೆ ಮನೆಯ ಮೇಲೆ ದಾಳಿ ಮಾಡಿ ರಾತ್ರಿ 11ರ ವರೆಗೆ ಸುದೀರ್ಘ 16 ಗಂಟೆ ವಿಚಾರಣೆ ಮಾಡಿದ್ದಾರೆ. ಅವರಿಗೆ ಸಂಪೂರ್ಣ ಬೆಂಬಲ ಸಹಕಾರ ಕೊಟ್ಟಿದ್ದೇನೆ. ಆ ಸಂದರ್ಭದಲ್ಲಿ ಸಿಐಡಿ ಅಧಿಕಾರಿಗಳು ಸಹ ವಿಚಾರಣೆ ಮಾಡಿ ಮನೆಯಿಂದ ಹೋದರು. ಆ ನಂತರ ‘ಆರ್‌ಡಿ ಪಾಟೀಲ ತಳ್ಳಿಬಿಟ್ಟು ಓಡಿ ಹೋಗಿದ್ದಾರೆ’ ಎಂದು ಆರೋಪ ಮಾಡಿದ್ದಾರೆ. ಯಾವುದೇ ವ್ಯಕ್ತಿ ಸಿಐಡಿಯಂತ ಸಂಸ್ಥೆಯ ವಿರುದ್ಧ ಇಂತಹ ಚಟುವಟಿಕೆ ಮಾಡಲು ಸಾಧ್ಯವಿಲ್ಲ. ನಾನು ಈ ನೆಲದ ಕಾನೂನಿಗೆ ಗೌರವ ಕೊಡುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು