ಕಲಬುರಗಿ ನಗರದ ರಾಮ ನಗರದಲ್ಲಿರುವ ಯುಜಿಡಿ ಬಳಿ ಸದಾ ನೀರು ನಿಂತಿರುತ್ತದೆ
ಕಲಬುರಗಿ ನಗರದ ಜೇವರ್ಗಿ ಕಾಲೊನಿಯ ಮಾಕಾ ಬಡಾವಣೆಯಲ್ಲಿನ ಒಳಚರಂಡಿ ತುಂಬಿ ರಸ್ತೆ ತುಂಬ ನೀರು ಹರಿದಿದ್ದ ದೃಶ್ಯ
‘ಯುಜಿಡಿ ಶುಲ್ಕ ರದ್ದು ಮಾಡಿದರೆ ಸಂಪರ್ಕ ಹೆಚ್ಚಳ’
‘ಸದ್ಯ ಯುಜಿಡಿ ಸಂಪರ್ಕ ಪಡೆಯಲು ಮಹಾನಗರ ಪಾಲಿಕೆಗೆ ₹ 1500 ಪಾವತಿಸಬೇಕು. ಇದು ಇಷ್ಟಕ್ಕೇ ಮುಗಿಯದೇ ಅದು–ಇದು ಎಂದು ಹೆಚ್ಚಿನ ಹಣ ಖರ್ಚಾಗುತ್ತದೆ. ಅಲ್ಲದೆ ಇದೇ ವೇಳೆ ಹೋಗಬೇಕು ಎನ್ನುವುದು ಮತ್ತು ಅಡ್ಡಾಟ ಹೆಚ್ಚಿರುವುದರಿಂದ ಹೆಚ್ಚು ಜನ ಯುಜಿಡಿ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಅನೇಕರು ತೆರೆದ ಚಂಡಿಗೆ ಸಂಪರ್ಕ ಕಲ್ಪಿಸಿಕೊಳ್ಳುತ್ತಿದ್ದಾರೆ’ ಎಂದು ಸ್ಮಾರ್ಟ್ ಸಿಟಿ ಕ್ಲಬ್ ಸಂಚಾಲಕಿ ನಳಿನಿ ಮಹಾಗಾಂವಕರ್ ಹೇಳಿದರು. ‘ಪಾಲಿಕೆ ಅಧಿಕಾರಿಗಳು ಸೇರಿ ಸಾವಿರ ಜನ ಇರುವ ನಮ್ಮ ವಾಟ್ಸ್‌ಆಪ್ ಬಳಗದಲ್ಲಿ ಯುಜಿಡಿ ಸಮಸ್ಯೆಗೆ ಸಂಬಂಧಿಸಿದ ಹತ್ತಾರು ಚಿತ್ರಗಳು ನಿತ್ಯ ಬರುತ್ತವೆ. ಪಾಲಿಕೆ ಅಧಿಕಾರಿ ಸಿಬ್ಬಂದಿ ಸಾಧ್ಯವಾದಷ್ಟು ಸಮಸ್ಯೆ ಪರಿಹರಿಸುತ್ತಿದ್ದಾರೆ. ಬೇರೆ ದೇಶಗಳ ಮಾದರಿ ಪಡೆದು ಅಲ್ಲಿನಂತೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದು ನಿರ್ವಹಣೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಟೆಂಡರ್ ಹಂತದಲ್ಲಿ ₹ 40 ಕೋಟಿ’
‘ನಗರದಲ್ಲಿ ಯುಜಿಡಿ ಸಮಸ್ಯೆ ಇದೆ. 1972 ಮತ್ತು 2001ರಲ್ಲಿ ಕ್ರಮವಾಗಿ ಆಗಿನ ಜನಸಂಖ್ಯೆಗೆ ತಕ್ಕಂತೆ 92 141 ಕಿ.ಮೀ. ಒಳಚರಂಡಿ ನಿರ್ಮಾಣ ಮಾಡಲಾಗಿತ್ತು. ಅಲ್ಲಿ ಸಮಸ್ಯೆ ಹೆಚ್ಚಾಗಿದೆ. ಯುಜಿಡಿಗಳ ದುರಸ್ತಿಗಾಗಿ ₹ 40 ಕೋಟಿ ಅನುದಾನ ಮಂಜೂರಾಗಿದೆ. ತಾಂತ್ರಿಕ ಟೆಂಡರ್ ಆಗಿದ್ದು ಆರ್ಥಿಕ ಟೆಂಡರ್ ಬಾಕಿ ಇದೆ. 2 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಪರಿಶಿಷ್ಟ ಸಮುದಾಯಗಳ ಜನರಿರುವ ಓಣಿಗಳಲ್ಲಿನ ಯುಜಿಡಿ ಸಮಸ್ಯೆ ಪರಿಹಾರಕ್ಕಾಗಿ ಎಸ್‌ಎಸ್‌ಪಿ ಟಿಎಸ್‌ಪಿ ನಿಧಿಯಿಂದ ₹ 9 ಕೋಟಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಸ್ತಾವ ಕೊಟ್ಟಿದ್ದು ಅನುಮೋದನೆ ಹಂತದಲ್ಲಿದೆ’ ಎಂದು ಮಹಾನಗರ ಪಾಲಿಕೆ ಎಂಜಿನಿಯರ್ ಪುರುಷೋತ್ತಮ ತಿಳಿಸಿದರು. ‘ಹೋಟೆಲ್‌ಗಳಲ್ಲಿ ಪಾತ್ರೆ ತೊಳೆದ ನೀರನ್ನೂ ಯುಜಿಡಿಗೆ ಬಿಡುವುದರಿಂದ ಕೆಲ ಪ್ರದೇಶಗಳಲ್ಲಿ ಸಮಸ್ಯೆಯಾಗಿತ್ತು. ಅಂತವರಿಗೆ ನೋಟಿಸ್ ನೀಡಿ ಬಂದ್ ಮಾಡಿಸಿ ಮತ್ತೆ ಈ ರೀತಿ ಮಾಡದಂತೆ ಸೂಚನೆ ನೀಡಿದ್ದೇವೆ. ಕೆಲವರಿಗೆ ದಂಡವನ್ನೂ ಹಾಕಿದ್ದೇವೆ‘ ಎಂದು ಅವರು ಮಾಹಿತಿ ನೀಡಿದರು.