ಮಂಗಳವಾರ, ಜನವರಿ 28, 2020
24 °C

ತಾಯಿ ಕಾಲೊನಿಯಲ್ಲಿ ಸಾಂಕ್ರಾಮಿಕ ರೋಗದ ಭೀತಿ

ಮಲ್ಲಿಕಾರ್ಜುನ ಅರಿಕೇರಕರ್ Updated:

ಅಕ್ಷರ ಗಾತ್ರ : | |

Prajavani

ಸೈದಾಪುರ: ತಾಯಿ ಕಾಲೊನಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದರ ಪರಿಣಾಮ ಚರಂಡಿ ನೀರು ಎಲ್ಲೆಂದರಲ್ಲಿ ನಿಂತು ಕೆಸರು ಕಟ್ಟಿಕೊಂಡಿದೆ. ಇದರಿಂದ ಬಡಾವಣೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಇದು ಸೈದಾಪುರ ಪಟ್ಟಣದ ತಾಯಿ ಕಾಲೊನಿಯಲ್ಲಿರುವ ಸಮಸ್ಯೆ. ಚರಂಡಿಗಳಲ್ಲಿ ತುಂಬಿಕೊಂಡಿರುವ ಪ್ಲಾಸ್ಟಿಕ್‌ ಸೇರಿದಂತೆ ಬಡಾವಣೆಯ ಮನೆಗಳ ಅಕ್ಕ–ಪಕ್ಕ ಚರಂಡಿ ನೀರು ನಿಲ್ಲುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. 

ಇಲ್ಲಿ ಹಲವೆಡೆ ಡಾಂಬರೀಕರಣವಾಗದ ರಸ್ತೆಗಳು, ಕಸದ ಸಮಸ್ಯೆ,  ಸೇರಿದಂತೆ ಹಲವು ಸಮಸ್ಯೆಗಳ ಆಗರವಾಗಿದೆ. ಇಲ್ಲಿ ತಿರುಗಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಬರಬೇಕಾದ ಸ್ಥಿತಿ ಉಂಟಾಗಿದೆ. 

ಕಾಲೊನಿಯ ಮನೆಗಳ ಸುತ್ತಲೂ ಚರಂಡಿ ನೀರು ಆವರಿಸಿ ಅವವ್ಯಸ್ಥೆಯ ಆಗರವಾಗಿ ಪರಿಣಮಿಸಿದೆ. ಪಾಚು ಗಟ್ಟಿದ ನೀರಿನ ಮಧ್ಯದಲ್ಲಿ ಬದುಕಬೇಕಾಗಿದೆ. ಆದ್ದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಬಹುದು ಎಂಬುದು ಇಲ್ಲಿಯ ಜನರ ಆತಂಕ. 

ವಾರದಲ್ಲೊಮ್ಮೆ ನೀರು: ಕಾಲೊನಿಯಲ್ಲಿ ಅತಿಯಾದ ನೀರಿನ ಸಮಸ್ಯೆ ಇದೆ. ಬಡಾವಣೆಯಲ್ಲಿ ಶುದ್ಧ ನೀರಿನ ಘಟಕ ಇದ್ದರೂ ಸಹ ಇಲ್ಲದಂತಾಗಿದೆ. ತಿಂಗಳಲ್ಲಿ ಹಲವಾರು ಬಾರಿ ಅದು ಕೆಟ್ಟಿರುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ ಎನ್ನುತ್ತಾರೆ ಸ್ಥಳೀಯರು. 

ಎಲ್ಲೆಂದರಲ್ಲಿ ಕಸ: ಕಾಲೊನಿಯ ಪ್ರಮುಖ ಬೀದಿಗಳಲ್ಲಿ ಕಸ ಕಾಣುತ್ತಿರುತ್ತದೆ. ಇದರಿಂದ ಗಾಳಿ ಬಿಸಿದಾಗ ರಸ್ತೆ ಮಧ್ಯೆ ಕಸ ಹರಡುತ್ತದೆ. ಇದರಿಂದ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎನ್ನುತ್ತಿದ್ದಾರೆ  ಇಲ್ಲಿನ ವಾಹನ ಸವಾರರು.

ಈ ಬಡಾವಣೆಗೆ ಹೊಂದಿಕೊಂಡಂತೆ ಶಾಲೆಗಳು, ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ವಿವಿಧ ಸಾರ್ವಜನಿಕ ಇಲಾಖೆಗಳಿವೆ. ಇವುಗಳಿಗೆ ತೆರಳುವ ಜನರ ಪಾಡು ಎನೂ?. ಸ್ವಚ್ಚ ಅಭಿಯಾನದ ಬಗೆಗೆ ಪ್ರಚಾರ ಮಾಡುವ ಸರ್ಕಾರಕ್ಕೆ ಈ ಸಮಸ್ಯೆ ಕಾಣದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿ ಪರಿಣಮಿಸಿದೆ.

ಸಂಬಂಧಪಟ್ಟ ‌ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳ ಒತ್ತಾಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು