ಬುಧವಾರ, ಜುಲೈ 28, 2021
21 °C
ಸಿಮೆಂಟ್ ಕಾರ್ಖಾನೆಯ ನೆರಳಿಗೆ ನಲುಗಿದ ಪುಟ್ಟ ಗ್ರಾಮ

ಕಲಬುರ್ಗಿ ಇಂಜೆಪಲ್ಲಿ: ಕಲ್ಲುಗಳ ಮಧ್ಯೆ ಅರಳದ ಬದುಕು

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲ್ಲು ಗಣಿಗಾರಿಕೆ ಅಬ್ಬರಕ್ಕೆ ಪುಟ್ಟ ಗೂಡಿನಂತಹ ಮನೆಗಳು ಒಂದೆಡೆ ನಲುಗಿದರೆ, ಮತ್ತೊಂದೆಡೆ ರಾಶಿಗಟ್ಟಲೇ ಬಿದ್ದಿರುವ ಕಲ್ಲುಗಳ ಮಧ್ಯೆ ಬದುಕು ಅರಳಿಸುವ ಪ್ರಯಾಸ ಗ್ರಾಮಸ್ಥರದ್ದು. ಅಚ್ಚುಕಟ್ಟಾದ ರಸ್ತೆ, ಮೂಲಸೌಕರ್ಯ ಹೊಂದಿರದ ಈ ಗ್ರಾಮದಲ್ಲಿ 600ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಅವರಲ್ಲಿ ಬಹುತೇಕ ಮಹಿಳೆಯರು, ಮಕ್ಕಳು ಕುಡಿಯುವ ನೀರನ್ನು ಹೊತ್ತು ತರಲಿಕ್ಕೆ ದಿನಪೂರ್ತಿ ಬಸವಳಿಯಬೇಕು!

ಸೇಡಂನ ಹೊರವಲಯದ ಇಂಜೆಪಲ್ಲಿ ಎಂಬ ಗ್ರಾಮದ ಸಂಕ್ಷಿಪ್ತ ಪರಿಚಯವಿದು. ಕೂಲಿಕಾರ್ಮಿಕರು ಮತ್ತು ರೈತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಗ್ರಾಮಕ್ಕೆ ವ್ಯವಸ್ಥಿತ ಸಾರಿಗೆ ಸಂಪರ್ಕವಿಲ್ಲ. ಮನೆಗೆ ಪಡಿತರ ಅಥವಾ ಅಗತ್ಯ ವಸ್ತು ತರಬೇಕಿದ್ದರೂ ಸ್ವಂತ ಬೈಕ್‌ನಲ್ಲಿ ಇಲ್ಲವೇ ನಡೆದುಕೊಂಡೇ ಸೇಡಂಗೆ ತೆರಳಬೇಕು. ಆಟೋರಿಕ್ಷಾದಲ್ಲಿ ಬರುವುದಾದರೆ, ₹ 200ಕ್ಕೂ ಹೆಚ್ಚು ಬಾಡಿಗೆ ಪಾವತಿಸಬೇಕು!

ಮದನಕಲ್ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಹೊಂದಿಕೊಂಡೇ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಿದೆ. ಗ್ರಾಮಸ್ಥರ ಪಾಲಿಗೆ, ಇದು ವರ ಮತ್ತು ಶಾಪವೂ ಹೌದು. ಕೆಲವರು ಅಲ್ಲಿ ಕಾರ್ಮಿಕರಾಗಿ ದುಡಿಯಲು ಹೋದರೆ, ‘ಕಾರ್ಖಾನೆ ಪ್ರದೇಶವು ಸಂಪೂರ್ಣವಾಗಿ ಸುತ್ತುವರೆದಿರುವ ಕಾರಣ ನಾವು ದ್ವೀಪದಂತೆ ಬದುಕುವಂತಾಗಿದೆ’ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಾರೆ.

‘ಮುಖ್ಯರಸ್ತೆಯಿಂದ 1 ಕಿ.ಮೀ.ದೂರದಲ್ಲಿರುವ ಈ ಗ್ರಾಮವು ಸುಲಭವಾಗಿ ಕಾಣಿಸುವುದಿಲ್ಲ. ಸಿಮೆಂಟ್ ಕಾರ್ಖಾನೆಯ ಗೇಟು ಮುಖಾಂತರವೇ ಬರಬೇಕು–ಹೋಗಬೇಕು. ಇರುವ ಏಕೈಕ ಬೋರ್‌ವೆಲ್ ಕೆಟ್ಟು ನಿಂತರೆ, ನೀರಿಗಾಗಿ ಅಲೆದಾಡಬೇಕು. ಶೌಚಾಲಯ, ನರೇಗಾದಂತಹ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಅಷ್ಟೇ ಅಲ್ಲ, ಒಂದು ಸಣ್ಣ ಕಿರಾಣಿ ಅಂಗಡಿಯೂ ಇಲ್ಲಿಲ್ಲ’ ಎಂದು ಗ್ರಾಮಸ್ಥ ದಶರಥ ‘ಪ್ರಜಾವಾಣಿ’ಗೆ ತಿಳಿಸಿದರು.

‘600 ಮಂದಿ ಪೈಕಿ 200ರಷ್ಟು ಮಾತ್ರ ಮತದಾರರು ಇದ್ದಾರೆ. ಮತ ಚಲಾವಣೆ ಮಾಡುವವರು ಕಡಿಮೆಯಿದ್ದಾರೆ ಎಂಬುದನ್ನೇ ನೆಪವಾಗಿಸಿಕೊಂಡು ಜನಪ್ರತಿನಿಧಿಗಳು ಇಲ್ಲಿ ಬರುವುದಿಲ್ಲ, ಅಧಿಕಾರಿಗಳೂ ಸಹ ಸುಳಿಯುವುದಿಲ್ಲ. ಹೀಗಾಗಿ ನಾವು ಅನಾಥರಾಗಿ ಬದುಕುವಂತಹ ಸ್ಥಿತಿಯಿದೆ’ ಎಂದು ಅವರು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು