ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ನಾಲ್ವರು ಅಪರಾಧಿಗಳಿಗೆ 4 ವರ್ಷ ಜೈಲು ಶಿಕ್ಷೆ

Published 10 ಜನವರಿ 2024, 16:13 IST
Last Updated 10 ಜನವರಿ 2024, 16:13 IST
ಅಕ್ಷರ ಗಾತ್ರ

ಕಲಬುರಗಿ: ಸುಳ್ಳು ದಸ್ತಾವೇಜುವನ್ನು ಬಳಸಿ ಜಮೀನು ಮಾರಾಟ ಮಾಡಿ, ನೋಂದಣಿ ಮಾಡಿ ಮೋಸ ಮಾಡಿದ್ದ ಆರೋಪ ಸಾಬೀತಾಗಿದ್ದರಿಂದ ಸೇಡಂ ಜೆಎಂಎಫ್‌ಸಿ ನ್ಯಾಯಾಲಯವು ನಾಲ್ವರು ಅ‍ಪರಾಧಿಗಳಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 5 ಸಾವಿರ ದಂಡ ವಿಧಿಸಿದೆ.

ಮಳಖೇಡ (ಜೆ) ಗ್ರಾಮದ ಸಿದ್ದಮ್ಮ ಲಕ್ಷ್ಮಯ್ಯ ದೂರುದಾರರು. ಸಿದ್ದಮ್ಮ ಅವರ ಪತಿ ಲಕ್ಷ್ಮಯ್ಯ ಅವರು 2009ರ ಜುಲೈ 1ರಂದು ಮೃತಪಟ್ಟಿದ್ದರು. ನಾಗಯ್ಯ ಮೃತ ಲಕ್ಷ್ಮಯ್ಯನ ತಮ್ಮನಾಗಿದ್ದು, 2011ರ ಜುಲೈ 15ರಂದು ಸೇಡಂ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಗೆ ಹಾಜರಾಗಿ, ತಾನೇ ಲಕ್ಷ್ಮಯ್ಯ ಚಿನ್ನಯ್ಯ ವಡ್ಡರ ಎಂದು ಹೇಳಿಕೊಂಡಿದ್ದರು.

ಜಗದೇವಿ ನಾಗಯ್ಯ ಮತ್ತು ಆರೋಪಿತ ಯೂಸುಫ್‌ಖಾನ್ ಅವರ ಸಹಾಯದಿಂದ ಸರ್ವೆ ನಂಬರ್ 541ರಲ್ಲಿನ 2.20 ಎಕರೆ ಜಮೀನಿನನ್ನು ಆರೋಪಿ ಮೆಹರ್ಜಾನ್ ಯೂಸುಫ್ ಖಾನ್ ಅವರಿಗೆ ವಂಚಿಸಲು ಸುಳ್ಳು ದಸ್ತಾವೇಜವನ್ನು ಬಳಸಿದ. ಆ ಬಳಿಕ ಜಮೀನು ಮಾರಾಟ ಮಾಡಿ, ನೋಂದಣಿ ಸಹ ಮಾಡಿ ಮೋಸ ಮಾಡಿದ್ದು ತನಿಖೆಯಿಂದ ಸಾಬೀತಾಗಿದೆ.

ಈ ಪ್ರಕರಣ ಸಂಬಂಧ ನ್ಯಾಯಾಧೀಶ ಸುನಿಲ್ ತಳವಾರ ಅವರು ನಾಲ್ವರು ಅಪರಾಧಿಗಳಿಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 4 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 5,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಮೂವರಿಗೆ 3 ವರ್ಷ ಜೈಲು:

ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಾಬೀತು ಆಗಿದ್ದರಿಂದ ಸೇಡಂ ಜೆಎಂಎಫ್‌ಸಿ ನ್ಯಾಯಾಲಯವು ಮೂವರು ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹5 ಸಾವಿರ ದಂಡ ವಿಧಿಸಿದೆ.

ಸೇಡಂ ತಾಲ್ಲೂಕಿನ ಬಡಗೇರಾ (ಕೆ) ಗೇಟ್‌ ಸಮೀಪದಲ್ಲಿ 2013ರ ಮಾರ್ಚ್‌ 3ರಂದು ಗೋವಿಂದರೆಡ್ಡಿ ವೀರಾರೆಟ್ಟಿ ಮತ್ತು ಗೌಸುದ್ದೀನ್ ದಾವಲಸಾಬ್ ಅವರು ಬಸ್ ಚಾಲಕ ಸೋಮಪ್ಪ ನಿಂಗಪ್ಪ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಚಾಲಕನ ಎದೆಯ ಮೇಲಿನ ಅಂಗಿ ಹಿಡಿದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಜಗಳ ಬಿಡಿಸಲು ಬಂದ ನಿರ್ವಾಹಕ ದೇವೀಂದ್ರಕುಮಾರ ಅವರ ಮೇಲೆ ಹಲ್ಲೆ ಮಾಡಿದ್ದರು. ಭರತಕುಮಾರ ಮತ್ತು ವೀರಯ್ಯ ಆನಂದ್ಯ ಅವರು ನಿರ್ವಾಹಕನ ಕೈಯಲ್ಲಿದ್ದ ಇಟಿಎಂ ಮಷಿನ್‌ಗೆ ಹಾನಿ ಮಾಡಿದ್ದ ಸಂಬಂಧ ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯದಲ್ಲಿ ವಾದ–ವಿವಾದಗಳನ್ನು ಆಲಿಸಿದ ಬಳಿಕ, ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪಗಳು ಸಾಬೀತಾಗಿವೆ. ನ್ಯಾಯಾಧೀಶ ಸುನಿಲ್ ತಳವಾರ ಅವರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೂವರು ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಎರಡೂ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ರಾಜಕುಮಾರ ಸ್ವಾಮಿ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕ ಹನುಮಗೌಡ ಅವರು ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT