ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತನ ಬೆನ್ನೆಲುಬು ಮುರಿಯಬೇಡಿ’

ಬೃಹತ್‌ ಪ್ರತಿಭಟನೆ ನಡೆಸಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು
Last Updated 5 ಡಿಸೆಂಬರ್ 2020, 16:03 IST
ಅಕ್ಷರ ಗಾತ್ರ

ಕಲಬುರ್ಗಿ: ‘ರೈತನೇ ದೇಶದ ಬೆನ್ನೆಲುಬು. ಆದರೆ, ಕೇಂದ್ರ ಸರ್ಕಾರ ರೈತ ವಿರೋಧ ಕಾಯ್ದೆಗಳ ಮೂಲಕ ರೈತರ ಬೆನ್ನೆಲುಬು ಮುರಿಯುತ್ತಿದೆ’ ಎಂದು ಆರೋಪಿಸಿ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವಲ್ಲಿ ನಗರದಲ್ಲಿ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಜಗತ್‌ ವೃತ್ತದಲ್ಲಿ ಸೇರಿದ ನೂರಾರು ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ರೈತರ ಪರ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಬರೆದು ಫಲಕಗಳನ್ನು ಪ್ರದರ್ಶಿಸಿದರು. ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿದರು.‌

‌ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ‘ರೈತರನ್ನು ಅತೀವ ಸಂಕಷ್ಟಕ್ಕೆ ದೂಡುವಂಥ ಕೃಷಿ ವಿರೋಧಿ ಕಾಯ್ದೆಗಳನ್ನು ದೇಶವೇ ಇಂದು ಖಂಡಿಸುತ್ತಿದೆ. ಸುಗ್ರಿವಾಜ್ಞೆಗಳಿಗೆ ಎರಡೂ ಸದನದಲ್ಲಿ ಅನುಮೋದನೆ ಪಡೆದಿದ್ದು ಪ್ರಜಾಸತ್ತೆಗೆ ವಿರುದ್ಧವಾದ ನಡೆ. ಪ್ರಧಾನಿ ಮೋದಿ ಎಂಥ ವಿಫಲ ನಾಯಕ ಎಂಬುದಕ್ಕೆ ಈ ಸುಗ್ರೀವಾಜ್ಞೆಗಳೇ ಸಾಕ್ಷಿ’ ಎಂದರು.

‘ಎಪಿಎಂಸಿಯ ಸಮಸ್ಯೆಗಳನ್ನು ಬಗೆಹರಿಸುವ ಬದಲು ಎಪಿಎಂಸಿಯನ್ನೇ ಸಂಪೂರ್ಣ ಮೂಲೆಗುಂಪು ಮಾಡಿ, ಬಂಡವಾಳಶಾಹಿಗಳ ಒಡೆತನ ಹೇರುವ ಹುನ್ನಾರ ನಡೆಸಿದೆ. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಯಾವುದೇ ವಿಷಯ ಈ ತಿದ್ದುಪಡಿಯಲ್ಲಿ ಇಲ್ಲ. ಇದರಿಂದ ಕಾರ್ಪೊರೇಟ್ ಉದ್ದಿಮೆಗಳು ಏಕಸ್ವಾಮ್ಯ ಸಾಧಿಸಲು ಅನುಕೂಲವಾಗಲಿದೆ. ಪಡಿತರ ಸೌಲಭ್ಯದಲ್ಲಿಯೂ ಗಣನೀಯವಾಗಿ ಕಡಿತವಾಗುವುದು. ಹೀಗೆ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಕಾರ್ಪೊರೇಟ್ ಧಣಿಗಳಿಗೆ ವಹಿಸಿ, ರೈತರನ್ನು ಅವರ ಗುಲಾಮರನ್ನಾಗಿ ಮಾಡಿ ತಾನು ಮಾತ್ರ ಎಲ್ಲ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಕೇಂದ್ರ ಸರ್ಕಾರದ ನಿರ್ಧಾರ’ ಎಂದು ದೂರಿದರು.

‘ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ ಸಹ ಕಾರ್ಪೊರೇಟ್‍ಗಳ ಪರವಾಗಿದೆ. ಈ ಮಸೂದೆಯ ತಿದ್ದುಪಡಿ ಮೂಲಕ ಆಹಾರ ಸರಕುಗಳ ಸಾಗಾಟ, ಸಂಗ್ರಹ, ಇತ್ಯಾದಿಗಳಿಗಿದ್ದ ಮಿತಿಯನ್ನು ತೆಗೆದು ಹಾಕುತ್ತದೆ. ಆಹಾರ ಸಂಸ್ಕರಣೆಯ ಉದ್ಯಮಗಳಿಗಾಗಿ ಮತ್ತು ರಪ್ತುಗಳಿಗಾಗಿ ದೊಡ್ಡ ಕೃಷಿ ಉದ್ಯಮ ಕಂಪನಿಗಳು ಎಷ್ಟು ಬೇಕಾದರೂ ಆಹಾರ ಸಂಗ್ರಹ ಮಾಡಿಟ್ಟುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಇದು ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳವಾಗುವಂತೆ ಮಾಡುವ ಹುನ್ನಾರ’ ಎಂದು ಕರ್ನಾಟಕ ಕೃಷಿ ಕೂಲಿಕಾರರ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ದೂರಿದರು.‌

‘ಇದೆಲ್ಲವನ್ನೂ ವಿರೋಧಿಸಿ ದೇಶದ ರಾಜಧಾನಿಗೆ ನುಗ್ಗಿದ ರೈತರು ನ್ಯಾಯ ಕೇಳಿದರೆ; ಅವರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ಹೋರಾಟ ಹತ್ತಿಕ್ಕಲು ವಾಮಮಾರ್ಗ ಅನುಸರಿಸಿದ ಪೊಲೀಸರ ಕೃತ್ಯ ಖಂಡನಾರ್ಹ’ ಎಂದೂ ಅರೋಪಿಸಿದರು.

ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ಅಮೀನಾ ಬೇಗಂ, ಕಾರ್ಯದರ್ಶಿ ನಂದಾದೇವಿ ಮಂಗೊಂಡಿ, ಕೃಷಿ ಕೂಲಿಕಾರರ ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದಪ್ಪ ಪೂಜಾರಿ ಕೂಡ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT