ಸೋಮವಾರ, ಸೆಪ್ಟೆಂಬರ್ 20, 2021
21 °C
ನೋಂದಾಯಿಸಿಕೊಂಡಿದ್ದ 10,860 ಮಂದಿಯ ಪೈಕಿ 1728 ಅಭ್ಯರ್ಥಿಗಳು ಗೈರು

ಕಲಬುರ್ಗಿ: ಕೆ–ಸೆಟ್‌ ಬರೆದ 9132 ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ–ಸೆಟ್‌) ಭಾನುವಾರ ಸುಸೂತ್ರವಾಗಿ ನಡೆಯಿತು. ಹೆಸರು ನೋಂದಾಯಿಸಿಕೊಂಡಿದ್ದ 10,860 ಅಭ್ಯರ್ಥಿಗಳ ಪೈಕಿ 9132 ಮಂದಿ ಪರೀಕ್ಷೆಗೆ ಹಾಜರಾದರು. 1728 ಅಭ್ಯರ್ಥಿಗಳು ಗೈರಾದರು.

ಮೈಸೂರು ವಿಶ್ವವಿದ್ಯಾಲಯವು ಗುಲಬರ್ಗಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಪರೀಕ್ಷೆ ನಡೆಸಿತು. ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯವೂ ಸೇರಿದಂತೆ ನಗರದ ವಿವಿಧೆಡೆ 16 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಕೊರೊನಾ ಕಾರಣದಿಂದ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಆದ ಮಾರ್ಪಾಡಿನಂತೆ ಯಾವುದೇ ಮಾರ್ಪಾಡು, ಬದಲಾವಣೆ ಇಲ್ಲದೇ ಯಥಾ ಪ್ರಕಾರ ಪರೀಕ್ಷೆ ತೆಗೆದುಕೊಳ್ಳಲಾಯಿತು.

ಸಾಮಾನ್ಯ ಜ್ಞಾನ ಹಾಗೂ ಆದ್ಯತಾ ವಿಷಯ ಸೇರಿ ಎರಡು ಪರೀಕ್ಷೆಗಳು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದವು. ಬಹುಪಾಲು ಅಭ್ಯರ್ಥಿಗಳು ಬೆಳಿಗ್ಗೆ 8ರ ಹೊತ್ತಿಗೆ ಆಯಾ ಪರೀಕ್ಷಾ ಕೇಂದ್ರಗಳನ್ನು ತಲುಪಿದ್ದರು. 9ರ ಸುಮಾರಿಗೆ ಎಲ್ಲರನ್ನೂ ಕೊಠಡಿಯೊಳಗೆ ಬಿಟ್ಟು, ಸರಿಯಾಗಿ 9.30ಕ್ಕೆ ಪರೀಕ್ಷೆ ಆರಂಭವಾದವು.

ಕೊರೊನಾ ಮಾರ್ಗಸೂಚಿಗಳಂತೆ ಬಹುಪಾಲು ಕಡೆ ಗೇಟ್‌ ಬಳಿಯೇ ಅಭ್ಯರ್ಥಿಗಳನ್ನು ಥರ್ಮಲ್‌ ಗನ್‌ ಮೂಲಕ ಸ್ಕ್ರೀನಿಂಗ್‌ ನಡೆಸಲಾಯಿತು. ಸ್ಯಾನಿಟೈಸರ್‌ ನೀಡಿ, ಮಾಸ್ಕ್‌ ಇದ್ದವರನ್ನು ಒಳಗೆ ಬಿಡಲಾಯಿತು. ಆದರೆ, ಕೆಲವು ಕಾಲೇಜುಗಳಲ್ಲಿ ಯಾವುದೇ ರೀತಿಯ ತಪಾಸಣೆ ಇಲ್ಲದೇ ನೇರವಾಗಿ ಒಳಗೆ ಬಿಡಲಾಯಿತು. ಜತೆಗೆ, ಒಂದೇ ಡೆಸ್ಕ್‌ ಮೇಲೆ ಇಬ್ಬರನ್ನು ಕೂಡಿಸಿ ಕನಿಷ್ಠ ಅಂತರವೂ ಸಾಧ್ಯವಾಗದಂತೆ ಮಾಡಲಾಯಿತು ಎಂದು ಅಭ್ಯರ್ಥಿಗಳು ದೂರಿದರು.

ಒಟ್ಟು 41 ವಿಷಯಗಳಲ್ಲಿ ಪರೀಕ್ಷೆ ನಡೆಯಿತು. ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂದರೆ 1324 ಅಭ್ಯರ್ಥಿಗಳು ಹಾಜರಾರು. ಜಾನಪದ ಸಾಹಿತ್ಯ ವಿಷಯದಲ್ಲಿ ಅತಿ ಕಡಿಮೆ ಅಂದರೆ; ನೋಂದಣಿ ಮಾಡಿಕೊಂಡಿದ್ದ ಒಬ್ಬರೇ ಅಭ್ಯರ್ಥಿ ಪರೀಕ್ಷೆ ಬರೆದರು.

ಪರೀಕ್ಷಾ ಕೇಂದ್ರಗಳಿದ್ದ ಸರ್ಕಾರಿ ಪದವಿ ಮಹಾವಿದ್ಯಾಲಯ, ನೂತನ ಪದವಿ ಮಹಾವಿದ್ಯಾಲಯ, ವಿ.ಜಿ. ಮಹಿಳಾ ಮಹಾವಿದ್ಯಾಲಯ, ಎಸ್.ಬಿ. ವಿಜ್ಞಾನ ಮಹಾವಿದ್ಯಾಲಯ, ಎಸ್.ಬಿ. ಕಲಾ ಮಹಾವಿದ್ಯಾಲಯ, ಎಸ್.ಬಿ. ವಾಣಿಜ್ಯ ಮಹಾವಿದ್ಯಾಲಯ, ಎಸ್.ಬಿ. ಶಿಕ್ಷಣ ಸಂಸ್ಥೆ, ಗೋದುತಾಯಿ ಎಂಜಿನಿಯರಿಂಗ್ ಕಾಲೇಜು, ಎನ್.ವಿ. ಮಹಾವಿದ್ಯಾಲಯ, ರೇಶ್ಮಿ ಮಹಾವಿದ್ಯಾಲಯ, ಡಾ. ಅಂಬೇಡ್ಕರ್ ಮಹಾವಿದ್ಯಾಲಯ, ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯಗಳ ಸುತ್ತ ಅಭ್ಯರ್ಥಿಗಳ ಪಾಲಕರು, ಪೋಷಕರು ಗುಂಪಾಗಿ ಸೇರಿಕೊಂಡಿದ್ದು ಕಂಡುಬಂತು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಅವರೂ ವಿವಿಧ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

‘ಕೊರೊನಾ ಕಾರಣದಿಂದ ಕೆ–ಸೆಟ್‌ ಪರೀಕ್ಷೆಯನ್ನು ಪದೇಪದೇ ಮುಂದೂಡಿದ್ದರಿಂದ ತೀವ್ರ ಗೊಂದಲ ಉಂಟಾಗಿತ್ತು. ಈ ಬಾರಿ ಅವಸರದಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ನಡೆಸಿದ್ದಾರೆ. ವಿಶೇಷವಾಗಿ ಕನ್ನಡ ಸಾಹಿತ್ಯ ವಿಷಯದಲ್ಲಿ ಹಿಂದಿಗಿಂತಲೂ ಈ ಬಾರಿ ಹೆಚ್ಚು ಕಠಿಣ ಪ್ರಶ್ನೆಗಳು ಇದ್ದವು’ ಎನ್ನುವುದು ಅನಿತಾ ತಳವಾರ, ಅನಸೂಯಾ ಬಸವರಾಜ, ಪದ್ಮಾವತಿ ಕಾಳಿರಾಯ, ಶಿವನಾಗ, ಶೋಭಾ ಬಸವರಾಜ ಬಾವಿ ಹಾಗೂ ಮಂಜುನಾಥ ಹೊಸಪೇಟೆ ಅವರ ಅನಿಸಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು