ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ವಿಮಾನ ನಿಲ್ದಾಣ | ಬೆಂಗಳೂರು, ತಿರುಪತಿ ಹತ್ತಿರ; ದೂರವಾದ ದೆಹಲಿ

Published 22 ನವೆಂಬರ್ 2023, 4:54 IST
Last Updated 22 ನವೆಂಬರ್ 2023, 4:54 IST
ಅಕ್ಷರ ಗಾತ್ರ

ಕಲಬುರಗಿ: ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ದ್ವಾರ ಬಾಗಿಲಿನಂತೆ ಇರುವ ತೊಗರಿ ಕಣಜ ಕಲಬುರಗಿಯಲ್ಲಿ ಲೋಹದ ಹಕ್ಕಿಯ ಹಾರಾಟ ಶುರುವಾಗಿ ನಾಲ್ಕು ವರ್ಷಗಳು ಕಳೆದಿವೆ. ದೆಹಲಿ, ಮುಂಬೈ, ಗೋವಾ, ಜೈಪುರ ನಡುವಿನ ವಿಮಾನ ಹಾರಾಟ ಕನಸು ನನಸಾಗದೇ ಉಳಿದಿದೆ.

ದೇಶಿಯ ವಾಯುಯಾನದ ಸಂಪರ್ಕ ವ್ಯವಸ್ಥೆಯನ್ನು ಬಲಿಷ್ಠ ಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ‘ಉಡಾನ್’ ಯೋಜನೆಯಡಿ 2019ರ ನವೆಂಬರ್ 22ರಂದು ಕಲಬುರಗಿ ವಿಮಾನ ನಿಲ್ದಾಣವು ವಿಮಾನ ಹಾರಾಟದ ಸೇವೆಗೆ ತೆರೆದುಕೊಂಡಿತ್ತು. 2023ರ ನವೆಂಬರ್‌ 22ಕ್ಕೆ ನಾಲ್ಕು ವರ್ಷಗಳು ತುಂಬಿವೆ.

2021ರ ಡಿಸೆಂಬರ್‌ ತಿಂಗಳಲ್ಲಿ 7,170 ಪ್ರಯಾಣಿಕರು ಪ್ರಯಾಣಿಸುವ ಮೂಲಕ ದೇಶದ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಿದ ವಿಮಾನ ನಿಲ್ದಾಣ ಎಂಬ ಖ್ಯಾತಿ ಗಳಿಸಿತ್ತು. ಹಿಂದುಳಿದ ಹಣೆಪಟ್ಟಿ ಎಂಬ ಅಪಖ್ಯಾತಿ ಹೊತ್ತಿಕೊಂಡ ಕಲ್ಯಾಣ ಕರ್ನಾಟಕದಲ್ಲಿ ಇಂತಹ ಬೆಳೆವಣಿಗೆ ಸಾಧಿಸಿದ್ದು ಹಲವರ ಹುಬ್ಬೆರಿಸುವಂತೆ ಮಾಡಿತ್ತು. ಆದರೆ, ಇಂತಹದ್ದೇ ಬೆಳೆವಣಿಗೆಯು ಮುಂದಿನ ವರ್ಷಗಳಲ್ಲಿ ದಾಖಲಿಸಲು ನಿಲ್ದಾಣಕ್ಕೆ ಸಾಧ್ಯವಾಗಲಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ದೊಡ್ಡ ಕೊರತೆಯಾಗಿದೆ.

ಕಲಬುರಗಿ–ಹಿಂಡಾನ್ (ದೆಹಲಿ) ಮಾರ್ಗದಲ್ಲಿ ವಾರದಲ್ಲಿ ಎರಡು ದಿನ ಹಾರಾಡುತ್ತಿದ್ದ ಸ್ಟಾರ್ ಏರ್‌ ವಿಮಾನ 2022ರ ಡಿಸೆಂಬರ್‌ 24ರಿಂದ ರದ್ದಾಗಿದೆ. ತಾಂತ್ರಿಕ ಕಾರಣದಿಂದ ವಿಮಾನ ಹಾರಾಟ ನಡೆಸಲು ಆಗಿತ್ತಿಲ್ಲ ಎಂಬುದು ಸೇವಾ ಸಂಸ್ಥೆಯ ಹೇಳಿಕೆ. ಮುಂಬೈ, ಹೈದರಾಬಾದ್ ಸೇವೆ ಸ್ಥಗಿತವಾಗಿತ್ತು. ಇದಾದ ಬಳಿಕ ವಿಮಾನ ಸೇವೆಯು ಸೀಮಿತಗೊಳ್ಳುತ್ತಾ ಸಾಗಿತ್ತು. ಈಗ ಒಂದೇ ವಿಮಾನ ಸಂಸ್ಥೆ ಸೇವೆ ಸಲ್ಲಿಸುತ್ತಿದೆ.

ಸ್ಟಾರ್ ಏರ್ ಸಂಸ್ಥೆಯ ವಿಮಾನ ಮಾತ್ರ ನಿತ್ಯ ಬೆಂಗಳೂರು (ಬೆಳಿಗ್ಗೆ 8.30) – ಕಲಬುರಗಿ (ಬೆಳಿಗ್ಗೆ 9.35)– ತಿರುಪತಿ ಹಾಗೂ ತಿರುಪತಿ– ಕಲಬುರಗಿ (ಮಧ್ಯಾಹ್ನ 1.05)– ಬೆಂಗಳೂರು (ಮಧ್ಯಾಹ್ನ 2.25) ನಡುವೆ ಹಾರಾಡುತ್ತಿದೆ. ಅಲಯನ್ಸ್ ಏರ್ ವಿಮಾನವು ಹಾರಾಟದಿಂದ ಹಿಂದೆ ಸರಿದಿದೆ.

ಜಿಲ್ಲೆಯಲ್ಲಿ ಬೃಹತ್ ಸಿಮೆಂಟ್, ಸಕ್ಕರೆ ಕಾರ್ಖಾನೆಗಳು, ಉದ್ಯಮಗಳು, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿವೆ. ವರ್ಷಕ್ಕೆ ಲಕ್ಷಾಂತರ ಜನರು ವಿಮಾನ ಸೇವೆಗಾಗಿ ಎದುರು ನೋಡುತ್ತಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ವಿಮಾನಗಳು ಹಾರಾಟ ನಡೆಸುತ್ತಿಲ್ಲ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ನಿಲುಗಡೆ ಸೇವೆಗೆ(ನೈಟ್‌ ಲ್ಯಾಂಡಿಂಗ್‌) ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಅನುಮತಿ ನೀಡಿ ಆರು ತಿಂಗಳು ಕಳೆದಿವೆ. ಇದುವರೆಗೂ ಒಂದೇ ಒಂದು ಸಂಸ್ಥೆಯು ರಾತ್ರಿ ವೇಳೆ ವಿಮಾನ ಸೇವೆ ನೀಡಲು ಮುಂದೆ ಬಂದಿಲ್ಲ. ಜನಪ್ರತಿನಿಧಿಗಳು ನಿಲ್ದಾಣದ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

‘ಸ್ಟಾರ್ ಏರ್ ಸಂಸ್ಥೆಯ ಕಲಬುರಗಿಯಿಂದ ಬೆಳಿಗ್ಗೆ 6ಕ್ಕೆ ಹೊರಟು 8ಕ್ಕೆ ಬೆಂಗಳೂರು ತಲುಪುವಂತೆ ಹಾಗೂ ಸಂಜೆ 6ರಿಂದ ಬೆಂಗಳೂರಿನಿಂದ ಹೊರಟು ರಾತ್ರಿ 8ಕ್ಕೆ ಕಲಬುರಗಿ ತಲುಪುವಂತೆ ಸಮಯ ಬದಲಾವಣೆ ಮಾಡಬೇಕು. ಇದರಿಂದ ವ್ಯಾಪಾರಿಗಳು, ಉದ್ದಿಮೆಗಳು, ಸರ್ಕಾರಿ ನೌಕರರು, ಐಟಿ ನೌಕರರಿಗೆ ನೆರವಾಗಲಿದೆ. ದೆಹಲಿ, ಗೋವಾ, ಅಹಮದಾಬಾದ್‌ಗೆ ವಾರದಲ್ಲಿ ಮೂರು ದಿನವಾದರೂ ವಿಮಾನ ಹಾರಾಡಬೇಕು’ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಬಿ. ಪಾಟೀಲ ಮತ್ತು ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ.

ವಿಮಾನ ನಿಲ್ದಾಣದ ರನ್‌ವೇ ಮರುರಚನೆಯ ಕಾರ್ಯ ಮುಗಿದಿದೆ. ಸ್ಟಾರ್ ಏರ್ ಸಂಸ್ಥೆಯು ರಾತ್ರಿ ವೇಳೆ ವಿಮಾನ ಹಾರಾಟ ಸೇವೆ ಒದಗಿಸಲು ಆಸಕ್ತಿ ತೋರಿದ್ದು ಮಾತುಕತೆ ನಡೆಯುತ್ತಿದೆ
- ಚಿಲಕಾ ಮಹೇಶ, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ
 1980ರಲ್ಲಿ ಪ್ರಸ್ತಾಪ 2019ರಲ್ಲಿ ವಿಮಾನ ಹಾರಾಟ
ಕಲಬುರಗಿಯಲ್ಲಿ ವಿಮಾನ ನಿಲ್ದಾಣದ ಪ್ರಸ್ತಾವನೆಯನ್ನು 1980ರ ಆರಂಭದಲ್ಲಿ ಮಾಡಲಾಗಿತ್ತು. ರಾಜ್ಯ ಸರ್ಕಾರವು 1983ರಲ್ಲಿ ಕಲಬುರಗಿ-ಅಫಜಲಪುರ ರಾಜ್ಯ ಹೆದ್ದಾರಿಯ ಬಿದ್ದಾಪುರ ಗ್ರಾಮದ ಬಳಿ 214 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ (ಎಎಐ) ಈ ಸ್ಥಳ ಸೂಕ್ತವಲ್ಲ ಎಂದು ತಿರಸ್ಕರಿಸಿದ ನಂತರ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಕೈಬಿಡಲಾಯಿತು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ವಿಮಾನ ನಿಲ್ದಾಣದ ಸ್ಥಳವನ್ನು ಕಲಬುರಗಿ ನಗರದ ಹೊರವಲಯದಲ್ಲಿರುವ ಶ್ರೀನಿವಾಸ ಸರಡಗಿ ಗ್ರಾಮದ ಸಮೀಪದ ಕಲಬುರಗಿ–ರಿಪ್ಪನ್‌ಪಲ್ಲಿ ಅಂತರರಾಜ್ಯ ಹೆದ್ದಾರಿ ಬಳಿ ಸ್ಥಳಾಂತರಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಮೂಲಸೌಕರ್ಯ ಅಭಿವೃದ್ಧಿಯ ಹೆಚ್ಚುವರಿ ಹೊಣೆಯನ್ನೂ ಅಂದಿನ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಲಾಗಿತ್ತು. ಯೋಜನೆಗೆ ಹೊಸ ನಿವೇಶನದ ಆಯ್ಕೆಯ ಹೊಣೆಯನ್ನು ಸಹ ಹೊತ್ತಿದ್ದರು. ಶ್ರೀನಿವಾಸ ಸರಡಗಿ ಬಳಿ ಸರ್ಕಾರವು ಆರಂಭದಲ್ಲಿ 571 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ನಂತರ ಅದನ್ನು 693 ಎಕರೆಗಳಿಗೆ ವಿಸ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT