ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣಕ್ಕೂ ಕಲಬುರಗಿ ವಿಮಾನ ಸೇವೆ ವಿಸ್ತರಣೆ

Last Updated 16 ಸೆಪ್ಟೆಂಬರ್ 2022, 4:19 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣದ ನೂತನ ನಿರ್ದೇಶಕ ಡಾ.ಚಿಲಕಾ ಮಹೇಶ್ ಅವರು ಗಡಿಭಾಗದ ತೆಲಂಗಾಣ ರಾಜ್ಯಕ್ಕೂ ವಿಮಾನ ಸೇವೆ ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ.

ತೆಲಂಗಾಣ ರಾಜ್ಯದ ಹೈದರಾ ಬಾದ್‌ನ ರಾಜೀವ್ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿರುವ ಅವರು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.

‘ತೆಲಂಗಾಣ ಮತ್ತು ಕಲಬುರಗಿ ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಗುರಿಯಿದೆ. ಕಲಬುರಗಿ ಜಿಲ್ಲೆ ಜೊತೆ ಗಡಿ ಹಂಚಿಕೊಂಡಿರುವ ತೆಲಂಗಾಣ ರಾಜ್ಯದ ಜಿಲ್ಲೆಗಳ ಜನರನ್ನು ಸಂಪರ್ಕಿಸಿ, ಕಲಬುರಗಿ ನಿಲ್ದಾಣವನ್ನೂ ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಅವರಿಗೆ ಮನ ವರಿಕೆ ಮಾಡುತ್ತೇವೆ’ ಎಂದು ಡಾ. ಚಿಲಕಾ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೈದರಾಬಾದ್‌ನ ರಾಜೀವ್‌ ಗಾಂಧಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ದಟ್ಟಣೆಯಾದಲ್ಲಿ ಕಲಬುರಗಿ ನಿಲ್ದಾಣವನ್ನು ತಾತ್ಕಾಲಿಕ ನಿಲುಗಡೆಗೆ ಬಳಸಿಕೊಳ್ಳುವ ಯೋಚನೆ ಇದೆ’ ಎಂದು ಅವರು ವಿವರಿಸಿದರು.

‘ರಾತ್ರಿ ವೇಳೆ ವಿಮಾನ ನಿಲುಗಡೆಗೂ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಡಿವಿಒಆರ್(ಡಾಪ್ಲರ್ ವೆರಿ ಹೈ ಫ್ರೆಕ್ವೆನ್ಸಿ ಒಮ್ನಿ ರೇಂಜ್) ಹಾಗೂ ಡಿಎಂಇ (ದೂರ ಅಳೆಯುವ ಸಾಧನ– ಡಿಸ್ಟೆನ್ಸ್ ಮೇಜರಿಂಗ್ ಇಕ್ಯುಪ್ಮೆಂಟ್) ತಂತ್ರಜ್ಞಾನ ಅಳವಡಿಕೆ ಕಾರ್ಯಪೂರ್ಣಗೊಂಡಿದೆ. ಔಪಚಾರಿಕ ಕಾರ್ಯಾರಂಭ ಮಾತ್ರ ಬಾಕಿಯಿದೆ. ನೈಟ್‌ ಲ್ಯಾಂಡಿಂಗ್ ಬಗ್ಗೆ ಚರ್ಚೆ ನಡೆಯುತ್ತಿದ್ದು, ಶೀಘ್ರವೇ ಕಾರ್ಯರೂಪಕ್ಕೆ ಬರಬಹುದು’ ಎಂದು ಅವರು ತಿಳಿಸಿದರು.

‘ಕಾರ್ಗೊ ಸೇವೆ ಅಲ್ಲದೇ ಅಹಮದಾ ಬಾದ್, ಗೋವಾ, ಮಂಗಳೂರು, ಮುಂಬೈ ನಗರಗಳ ಸಂಪರ್ಕಕ್ಕೆ ಬೇಡಿಕೆ ಇದೆ. ಇದಕ್ಕೆ ವಾಣಿಜ್ಯ ಸಂಸ್ಥೆಯವರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಮುದಾಯಗಳ ನಾಯಕರು ಸಹಕರಿಸಬೇಕಿದೆ’ ಎಂದರು.

‘ವಿಮಾನ ನಿಲ್ದಾಣ ಸಮೀಪದಲ್ಲೇ ಹೋಟೆಲ್‌ಗಳು ನಿರ್ಮಾಣವಾಗಬೇಕು. ನಿಲ್ದಾಣದ ರಸ್ತೆ ಮಾರ್ಗದಲ್ಲಿ ಟ್ರಾಫಿಕ್‌ ಪೊಲೀಸರನ್ನು ನಿಯೋಜಿಸಿದರೆ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ’ ಎಂದು ಅವರು ತಿಳಿಸಿದರು.

ಏರ್ ನ್ಯಾವಿಗೇಷನ್‌ ಪರಿಣಿತ

ತೆಲಂಗಾಣದ ಡಾ.ಚಿಲಕಾ ಮಹೇಶ್ ಅವರು ವಿಮಾನ ಕಾರ್ಯಾಚರಣೆ, ನಿರ್ವಹಣೆ ಮತ್ತು ವ್ಯವಸ್ಥಾಪಕ ಹುದ್ದೆಗಳಲ್ಲಿ 16 ವರ್ಷಗಳ ಅನುಭವ ಹೊಂದಿದ್ದಾರೆ.

ಅವರು ಏರ್ ಟ್ರಾಫಿಕ್ ಸುರಕ್ಷತೆಯ ಎಲೆಕ್ಟ್ರಾನಿಕ್ ಎಂಜಿನಿಯರ್ ಸಹ ಆಗಿದ್ದು, ರೇಡಿಯೊ ತಾಂತ್ರಿಕ ಸಂಚರಣೆ ವ್ಯವಸ್ಥೆಯ ಪರಿಣಿತರಾಗಿದ್ದಾರೆ. ಫ್ರಾನ್ಸ್‌ನ ಟೌಲೌಸ್‌ನ ಫ್ರೆಂಚ್ ಏರ್ ನ್ಯಾವಿಗೇಷನ್ ಸ್ಕೂಲ್‌ನಿಂದ ಏರ್ ನ್ಯಾವಿಗೇಷನ್‌ ಸುಧಾರಿತ ನಿರ್ವಹಣೆಯಲ್ಲಿ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT