ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಸಚಿವ ಸಂಪುಟ ಸಭೆ: ಜಿಲ್ಲೆಯಲ್ಲಿ ಗರಿಗೆದರಿದ ಅಭಿವೃದ್ಧಿ ನಿರೀಕ್ಷೆ

ಕಲಬುರಗಿಯಲ್ಲಿ ಸೆ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ
Published : 7 ಸೆಪ್ಟೆಂಬರ್ 2024, 0:19 IST
Last Updated : 7 ಸೆಪ್ಟೆಂಬರ್ 2024, 0:19 IST
ಫಾಲೋ ಮಾಡಿ
Comments

ಕಲಬುರಗಿ: ನಗರದಲ್ಲಿ ಸೆ.17ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಕಲ್ಯಾಣ ಭಾಗದ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯ ನಿರೀಕ್ಷೆಗಳು ಗರಿಗೆದರಿವೆ.

ಸಚಿವ ಸಂಪುಟ ಸಭೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿರುವ ಸಂಘ–ಸಂಸ್ಥೆಗಳು, ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿವೆ.

ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಲಭ್ಯದಂಥ ಕ್ಷೇತ್ರಗಳ ಅಭಿವೃದ್ಧಿಗೆ ಸಚಿವ ಸಂಪುಟ ಸಭೆಯಲ್ಲಿ ಆದ್ಯತೆ ಸಿಗಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ.

ಎಸ್‌ಇಝೆಡ್‌ ಸ್ಥಾಪನೆಗೆ ಒತ್ತಾಯ:

‘ಕಲ್ಯಾಣ ಭಾಗದ ಅಭಿವೃದ್ಧಿಗಾಗಿ ಹೂಡಿಕೆ ಮತ್ತು ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಕಲಬುರಗಿಯಲ್ಲಿ  ಎಸ್‌ಇಝೆಡ್‌ (ವಿಶೇಷ ಆರ್ಥಿಕ ವಲಯ) ಜೊತೆಗೆ ಆರ್ಥಿಕ ಜಿಲ್ಲೆ ಸ್ಥಾಪಿಸುವುದು ಬಹಳ ಮುಖ್ಯ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕೈಗಾರಿಕೆಗಳು ಮತ್ತು ವಾಣಿಜ್ಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಮರನಾಥ ಪಾಟೀಲ ಪ್ರತಿಪಾದಿಸಿದ್ದಾರೆ.

‘ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗಾಗಿ ಬಜೆಟ್ ಮತ್ತು ಮಾರ್ಗಸೂಚಿ ನಿಗದಿಪಡಿಸಬೇಕು. ಈ ಭಾಗದ ಅಭಿವೃದ್ಧಿಗೆ ಕಾರಣವಾಗುವ ಸಂಪರ್ಕವನ್ನು ಹೆಚ್ಚಿಸಲು ಸೂರತ್‌ನಿಂದ ಚೆನ್ನೈ ಷಟ್ಪಥ ಕಾರಿಡಾರ್ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸಲು ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಮಾಡಬೇಕು. ರೈಲ್ವೆ ವಿಭಾಗ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಬೇಕು. ಈ ಪ್ರದೇಶದ ತಲಾ ಆದಾಯ ಸುಧಾರಿಸುವ ಪರಿಣಾಮವಾಗಿ ಹಾಳಾಗುವ ಮತ್ತು ಹಾಳಾಗದ ಸರಕುಗಳ ರಫ್ತು ಮತ್ತು ಆಮದು ಸುಧಾರಿಸಲು ಒಳನಾಡು ಕಂಟೈನರ್ ಡಿಪೊ ಸ್ಥಾಪಿಸುವುದು. ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಕೃಷ್ಣಾ ಮೇಲ್ದಂಡೆ ಯೋಜನೆ ಸಂಪರ್ಕಿಸುವ ಜಲಾಶಯ ಯೋಜಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ನಿರ್ಧಾರ ಸ್ವಾಗತಾರ್ಹ–ದೇಶಮುಖ, ದಸ್ತಿ:

‘ಸಂವಿಧಾನದ 371 (ಜೆ) ಕಲಂ ಜಾರಿಯಾಗಿ ಹತ್ತು ವರ್ಷಗಳು ಗತಿಸಿರುವ ಪ್ರಸ್ತುತ ಸಂದರ್ಭದಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದು ಅತಿ ಅವಶ್ಯವಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಗಂಭೀರವಾಗಿ ಯೋಚಿಸಿ, ಸಚಿವ ಸಂಪುಟ ಸಭೆ ನಡೆಸಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿರುವುದು ಸ್ವಾಗತಾರ್ಹ ಬೆಳವಣಿಗೆ’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಅವರ ಮುತುವರ್ಜಿಯಿಂದ ಆಗಿನ ಮುಖ್ಯಮಂತ್ರಿ ಗುಂಡೂರಾವ ಇಚ್ಛಾಶಕ್ತಿಯಿಂದ ಕಲಬುರಗಿಯಲ್ಲಿ 1982ರಲ್ಲಿ ಪ್ರಥಮ ಸಚಿವ ಸಂಪುಟ ಸಭೆ ನಡೆದಿತ್ತು. ಬಳಿಕ ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಕಲಬುರಗಿಯಲ್ಲಿ ಸಂಪುಟ ಸಭೆಗಳನ್ನು ನಡೆಸಿದರು. ಕಳೆದೊಂದು ದಶಕದಿಂದ ಕಲಬುರಗಿಯಲ್ಲಿ ಸಂಪುಟ ಸಭೆ ನಡೆದಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಪ್ರಿಯಾಂಕ್‌ ಖರ್ಗೆ ಇಚ್ಛಾಶಕ್ತಿಯಿಂದ ಕಲ್ಯಾಣದ ಎಲ್ಲಾ ಸಚಿವರ, ಶಾಸಕರ ಸಹಯೋಗದಿಂದ ಇದೀಗ ಮತ್ತೆ ಸಚಿವ ಸಂಪುಟ ಸಭೆ ನಿಗದಿಯಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

‘ಕಲ್ಯಾಣದ ಸಮಗ್ರ ಚರ್ಚೆಗೆ ವೇದಿಕೆ’

‘ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹಾಗೂ ಕೈಗೊಳ್ಳಬೇಕಿರುವ ಜನಪರ ಕೆಲಸಗಳ ಕುರಿತು ಸಮಗ್ರ ಚರ್ಚೆ ನಡೆಸಲು ಮುಂದಿನ‌ ಸಚಿವ ಸಂಪುಟ ಸಭೆ ಕಲಬುರಗಿಯಲ್ಲಿ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಎಲ್ಲ‌ ಸಚಿವರು ಒಪ್ಪಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ‘ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಿ.ಎಂ ಅವರಿಗೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಸಭೆ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕ ಕೈಗಾರಿಕಾ ನೀತಿಗೆ ಆಗ್ರಹ

ಸಚಿವ ಸಂಪುಟ ಸಭೆಯ ನಿರ್ಧಾರ ಸ್ವಾತಿಸಿರುವ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ ಮತ್ತು ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಈ ಭಾಗದ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಬೇಕು. ತೊಗರಿ ಬೇಳೆ ಕಾರ್ಖಾನೆಗಳನ್ನು ಕೃಷಿ ಆಧಾರಿತ ಕಾರ್ಖಾನೆ ಎಂದು ಪರಿಗಣಿಸಬೇಕು. ಯಾದಗಿರ ಜಿಲ್ಲೆಯ ಕಡೇಚೂರ್–ಬಾಡಿಯಾಲ್ ಅಥವಾ ಕಲಬುರಗಿ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಸೆಮಿಕಂಡಕ್ಟರ್ ಚಿಪ್ ಘಟಕ ಸ್ಥಾಪಿಸಬೇಕು. ಮೆಗಾ ಟೆಕ್ಸಟೈಲ್ ಪಾರ್ಕ್‌ ಕಾಮಗಾರಿಗೆ ವೇಗ ನೀಡಬೇಕು. ಕಲಬುರಗಿ ಹೊರವಲಯದಲ್ಲಿ ನೂತನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ ಸ್ಥಾಪಿಸಬೇಕು. ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಆದೇಶ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕು. ಕಲಬುರಗಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಬೇಕು. ಕಲಬುರಗಿ ಹೊರವಲಯದಲ್ಲಿ ನೂತನ ವರ್ತುಲ ರಸ್ತೆ ನಿರ್ಮಿಸಬೇಕು ಹಾಗೂ ಆಳಂದ–ಉಮರ್ಗಾ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT