ಸೋಮವಾರ, ಡಿಸೆಂಬರ್ 5, 2022
19 °C

ಯುವ ಮಹಿಳಾ ಮತಶಕ್ತಿ ಬಲಿಷ್ಠವಾಗಲಿ; ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಜಿಲ್ಲೆಯಲ್ಲಿ ಪ್ರತಿ ಸಾವಿರ ಯುವ ಪುರುಷ ಮತದಾರರಿಗೆ 626 ಯುವ ಮಹಿಳಾ ಮತದಾರರು ಮಾತ್ರ ಮತದಾರರ ಪಟ್ಟಿಗೆ ಸೇರ್ಪಡೆ ಆಗುತ್ತಿದ್ದಾರೆ. ಯುವ ಮಹಿಳೆಯರು ಜಾಗೃತರಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಆಗುವ ಮೂಲಕ ಜನತಂತ್ರದ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ಹೇಳಿದರು.

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ರ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ 1,024 ಮತಗಟ್ಟೆಯಲ್ಲಿ ಯುವ ಮಹಿಳಾ ಮತದಾರರ ನೋಂದಣಿ ಕಡಿಮೆ ಇದೆ. ಅರ್ಹರ ಹೆಸರು ನೋಂದಣಿಗೆ ವಿಶೇಷ ಗಮನ ಹರಿಸಲಾಗುವುದು. ತೃತೀಯ ಲಿಂಗಿಗಳು ಮತ್ತು ಲೈಂಗಿಕ ಕಾರ್ಯಕರ್ತೆಯರನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಿಶೇಷ ಆಸಕ್ತಿ ವಹಿಸಲಾಗಿದೆ. ತಮ್ಮ ಇಚ್ಛೆಯ ಲಿಂಗದ ಹೆಸರು ನಮೂದಿಸಬಹುದು’ ಎಂದರು.

‘ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 8 ಕೊನೆಯ ದಿನ. ಸ್ವೀಕೃತ ಆಕ್ಷೇಪಣೆಗಳನ್ನು ಡಿಸೆಂಬರ್ 26ರೊಳಗೆ ವಿಲೇವಾರಿ ಮಾಡಿ, 2023ರ ಜನವರಿ 5ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು’ ಎಂದು ಹೇಳಿದರು.

‘ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಎಲ್‌ಒಗಳು ಮನೆಗೆ ಬಂದಾಗ ಅಗತ್ಯ ದಾಖಲಾತಿ ನೀಡಿದಲ್ಲಿ ಸ್ಥಳದಲ್ಲೇ ಗರುಡಾ ತಂತ್ರಾಂಶದ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗುವುದು. ಅಂಗವಿಕಲರ ಮತದಾನಕ್ಕೆ ರ‍್ಯಾಂಪ್ ಹಾಗೂ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಹೆಸರು ಸೇರ್ಪಡೆಗೆ ನಮೂನೆ 6, ಪಟ್ಟಿಯಿಂದ ತೆಗೆದು ಹಾಕಲು ನಮೂನೆ 7 ಹಾಗೂ ತಿದ್ದುಪಡಿ, ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ವರ್ಗಾವಣೆಗೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ವೊಟರ್ ಹೆಲ್ಪ್‌ ಲೈನ್ ಆ್ಯಪ್ ಅಥವಾ www.nvsp.in ಮೂಲಕ ಸಲ್ಲಿಸಬಹುದು. ಯಾವುದೇ ದೂರುಗಳನ್ನು ಉಚಿತ ದೂರವಾಣಿ ಸಂಖ್ಯೆ 1950ಗೆ ಕರೆ ಮಾಡುವಂತೆ ಅವರು ಮನವಿ ಮಾಡಿದರು.

‘9 ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತವಾಗಿ ಎರಡೆರಡು ಮತಗಟ್ಟೆಗಳಲ್ಲಿ ಒಂದೇ ಭಾವಚಿತ್ರ ಇರುವ 1,84,532 ಹೆಸರು ಪತ್ತೆಹಚ್ಚಲಾಗಿದೆ. ‌ಬಿಎಲ್‌ಒಗಳ ಭೌತಿಕ ಸಮೀಕ್ಷೆ ನಡೆಸಿ 91,000 ಜನರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಇದ್ದರು.

ಅರ್ಹತಾ ದಿನಾಂಕ ಪರಿಷ್ಕರಣೆ

ಮತದಾರರ ಪಟ್ಟಿ ಪರಿಷ್ಕರಣೆಯ ದಿನಂಕವನ್ನು ಪ್ರತಿ ವರ್ಷದ ಜನವರಿ 1 ಎಂದು ಪರಿಗಣಿಸಲಾಗಿದೆ. ಈಚೆಗೆ ಚುನಾವಣಾ ಆಯೋಗವು ಪ್ರತಿ ವರ್ಷದ ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ರಂದು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಲು ನಿರ್ಧರಿಸಿದೆ. ಹೀಗಾಗಿ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಯಶವಂತ ಗುರುಕರ್ ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ನವೆಂಬರ್ 12 ಮತ್ತು 20, ಡಿಸೆಂಬರ್ 3 ಮತ್ತು 4ರಂದು ವಿಶೇಷ ಅಭಿಯಾನ ನಡೆಸಲಾಗುವುದು. ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಯಲ್ಲಿ ಹಾಜರಿದ್ದು, ಅರ್ಜಿಗಳನ್ನು ಪಡೆಯಲಿದ್ದಾರೆ’ ಎಂದರು.

‘18 ವರ್ಷಕ್ಕೆ 3 ತಿಂಗಳ ಕಡಿಮೆ ಇದ್ದರೂ ಹೆಸರು ಸೇರ್ಪಡೆ’

‘ಹದಿನೆಂಟು ವರ್ಷ ತುಂಬಲು ಮೂರು ತಿಂಗಳು ಕಡಿಮೆ ಇದ್ದವರು ಮತದಾನಕ್ಕೆ ಅರ್ಹರು. ಅರ್ಹ ಯುವಕರು ತಕ್ಷಣವೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಮುಂದಾಗಬೇಕು‘ ಎಂದು ಯಶವಂತ ಗುರುಕರ್ ಕೋರಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚುನಾವಣಾ ಜಾಗೃತಿಯ ವಾಕಥಾನ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಚುನಾವಣೆ ಆಯೋಗದ ನಿರ್ದೇಶನದಂತೆ ಎಲ್ಲಾ ಮತದಾರರ ಪಟ್ಟಿ ಪ್ರಚುರಪಡಿಸಲಾಗಿದೆ. ಜಿಲ್ಲೆಯಲ್ಲಿ 18-20 ವರ್ಷದ ಮಕ್ಕಳು ನೋಂದಣೆ ಮಾಡುವುದನ್ನು ಕಡಿಮೆಯಾಗಿದೆ. ಕೂಡಲೇ ಎಲ್ಲರೂ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ ಬದೋಲೆ, ಮಹಾನಗರ ಪಾಲಿಯ ಆಯುಕ್ತ ಭುವನೇಶ ಪಾಟೀಲ, ಉಪ-ಆಯುಕ್ತ ಪ್ರಕಾಶ ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶೇಖರ ಮಾಲಿ, ಜಿ.ಪಂ. ಯೋಜನಾ ನಿರ್ದೇಶಕ ಜಗದೇವಪ್ಪ ಇದ್ದರು.

ವಿದ್ಯಾರ್ಥಿಗಳಿಗೆ ಜಾಗೃತಿ

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಅಂಗವಾಗಿ ಬುಧವಾರ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ಗುಲಬರ್ಗಾ ಗ್ರಾಮೀಣ ವಿಧಾನಸಬಾ ಕ್ಷೇತ್ರದ ಧರ್ಮಾಪೂರ ಮತಗಟ್ಟೆ ಸಂಖ್ಯೆ 226ರಲ್ಲಿ ಸಾಂಕೇತಿಕವಾಗಿ ಪ್ರಕಟಿಸಿದರು.

ಈ ವೇಳೆ ಮಾತನಾಡಿದ ಅವರು, ‘ಈ ಮತಗಟ್ಟೆಯಲ್ಲಿ 854 ಜನರು ಮತ ಚಲಾಯಿಸಲು ಅರ್ಹರಿದ್ದಾರೆ. ಅವರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಡಿಸೆಂಬರ್ 8ರವರೆಗೆ ಸ್ಥಳೀಯ ಬಿಎಲ್‌ಒ ಅವರಿಗೆ ಸಲ್ಲಿಸಬೇಕು’ ಎಂದರು.

ಕಲಬುರಗಿ ತಹಶೀಲ್ದಾರ್ ಪ್ರಕಾಶ ಕುದರಿ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ್ ಮಹಾಂತೇಶ ಮುಡಬಿ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಇದ್ದರು.

ಕಲಬುರಗಿ ಜಿಲ್ಲೆಯ ತಾಲ್ಲೂಕುವಾರ ಮತದಾರರ ವಿವರ(ನ.7ರ ಅಂತ್ಯಕ್ಕೆ)

ವಿಧಾನಸಭಾ ಕ್ಷೇತ್ರ; ಪುರುಷರು; ಮಹಿಳೆಯರು; ಒಟ್ಟು

ಅಫಜಲಪೂರ; 1,16,022; 1,09,832; 2,25,854

ಜೇವರ್ಗಿ; 1,19,040; 1,15,900; 2,34,940

ಚಿತ್ತಾಪುರ; 1,16,133; 1,14,714; 2,30,847

ಸೇಡಂ; 1,09,146; 1,11,653; 2,20,799

ಚಿಂಚೋಳಿ; 1,01,724; 97,277; 1,99,001,

ಗುಲಬರ್ಗಾ ಗ್ರಾಮೀಣ; 1,28,894; 1,21,992; 2,50,886

ಗುಲಬರ್ಗಾ ದಕ್ಷಿಣ; 1,34,233; 1,35,700; 2,69,933,

ಗುಲಬರ್ಗಾ ಉತ್ತರ; 1,48,038; 1,48,160; 2,96,198,

ಆಳಂದ; 1,22,811; 1,12,958; 2,35,769

ಒಟ್ಟು; 10,96,041; 10,68,186; 21,64,227

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು