ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಪರರ ಮನೆಯ ಅಂಗಳಕ್ಕೆ ಚರಂಡಿ ನೀರು

ವಾರ್ಡ್‌ ನಂ 2ರ ಸಮಸ್ಯೆ ಕೇಳಿಸಿಕೊಳ್ಳದ ಆಡಳಿತ: ಆಕ್ರೋಶ
Published 17 ಆಗಸ್ಟ್ 2023, 6:33 IST
Last Updated 17 ಆಗಸ್ಟ್ 2023, 6:33 IST
ಅಕ್ಷರ ಗಾತ್ರ

ವಾಡಿ: ಪಟ್ಟಣದ ವಾರ್ಡ್ ನಂ 2ರಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪಕ್ಕದ ಮನೆಯವರ ಬಚ್ಚಲು ನೀರು ತಮ್ಮ ಮನೆ ಮುಂದೆ ಹರಿಯುತ್ತಿದೆ ಎನ್ನುವ ಕಾರಣಕ್ಕಾಗಿ ಇಲ್ಲಿ ಮಹಿಳೆಯರು ನಿತ್ಯ ಜಳವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹದಗೆಟ್ಟ ನೈರ್ಮಲ್ಯ ವ್ಯವಸ್ಥೆಯಿಂದ ಮಹಿಳೆಯರು ರೋಷಿ ಹೋಗಿದ್ದು, ಸಮಸ್ಯೆ ಪರಿಹರಿಸದ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಲರಾಮ ಚೌಕ್‌ ರಸ್ತೆಗೆ ಹೊಂದಿಕೊಂಡಿರುವ ಬಡಾವಣೆಯಲ್ಲಿ ಇಲ್ಲಿಯವರೆಗೂ ಚರಂಡಿ ನಿರ್ಮಿಸಿಲ್ಲ. ಕನಿಷ್ಠ ನಾಗರಿಕ ಸೌಲಭ್ಯಗಳು ಒದಗಿಸಿಲ್ಲ. ಈಚೆಗೆ ಸಿ.ಸಿ ರಸ್ತೆ ನಿರ್ಮಿಸಲಾಗಿದ್ದು ಅದು ಅರೆಬರೇಯಾಗಿದೆ ಎಂದು ಅಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಮತ ಕೇಳಲು ಮಾತ್ರ ಬರುತ್ತಾರೆ. ಈಗ ನಮ್ಮ ಸಮಸ್ಯೆಯತ್ತ ತಿರುಗಿ ನೋಡುತ್ತಿಲ್ಲ ಎಂದು ಸ್ಥಳೀಯರಾದ ಬಸಲಿಂಗಮ್ಮ ಅಲ್ಲಿಪುರ, ಶಂಕರಮ್ಮ ಗೋಪಾಲ ರಾಥೋಡ್‌ ಆಕ್ರೋಶ ವ್ಯಕ್ತಪಡಿಸಿದರು.

ತಗ್ಗು ಪ್ರದೇಶದಲ್ಲಿರುವ ಈ ಬಡಾವಣೆಯ ಮನೆಗಳಿಗೆ ಕೊಳಚೆ ನೀರು ನುಗ್ಗುತ್ತಿದ್ದು, ಮಳೆಗಾಲ ಬಂದರೆ ಇಡೀ ಪ್ರದೇಶದ ತುಂಬಾ ನೀರು ಆವರಿಸಿಕೊಳ್ಳುತ್ತದೆ. ಇದರಿಂದ ಬಡಾವಣೆಯಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಳವಾಗಿದೆ. ಕಾರಣ ಸಾಂಕ್ರಾಮಿಕ ರೋಗದ ಭೀತಿಯೂ ಶುರುವಾಗಿದೆ.

ಚರಂಡಿ ನಿರ್ಮಿಸಿ ಎಂದು ಮೂವತ್ತು ವರ್ಷಗಳಿಂದ ಹೇಳುತ್ತಿದ್ದೇವೆ ಆದರೆ ಅಧಿಕಾರಿಗಳು ಜನಪ್ರತಿನಿಧಿಗಳು ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಸ್ಥಳೀಯರು ಪುರಸಭೆ ವಿರುದ್ಧ ಕಿಡಿ ಕಾರಿದರು.

ಒಂದು ಸಣ್ಣ ರಸ್ತೆ ನಿರ್ಮಿಸಲಾಗಿದೆ, ಆದರೆ ರಸ್ತೆಯ ಎರಡು ಕಡೆ ಮನೆಗಳಿದ್ದು ತಗ್ಗು ಪ್ರದೇಶದಲ್ಲಿವೆ. ಎರಡು ಕಡೆ ಚರಂಡಿ ನಿರ್ಮಿಸುವಂತೆ ಕಳೆದ ಹಲವು ವರ್ಷಗಳಿಂದ ಹೇಳುತ್ತಿದ್ದೇವೆ. ಆದರೆ ಯಾರು ನಮ್ಮ ಮಾತು ಕೇಳುತ್ತಿಲ್ಲ ಪ್ರತಿನಿತ್ಯ ನಾವು ಇಲ್ಲಿ ನರಕದಲ್ಲಿ ಬದುಕುತ್ತಿದ್ದೇವೆ ಎಂದು ದೇವಪ್ಪ ನಾಗರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುತ್ತವೆ ಪಕ್ಕದ ಮನೆಯವರ ನೀರು ನಮ್ಮ ಮನೆಯ ಅಂಗಳಕ್ಕೆ ಬರುತ್ತಿದೆ ಮನೆಯ ಬುನಾದಿ ಅಲುಗಾಡುತ್ತಿದೆ ಕೂಡಲೇ ಇದಕ್ಕೆ ಒಂದು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಚರಂಡಿ ಇಲ್ಲದ ಕಾರಣ ಕೊಳಚೆ ನೀರು ಜನಗಳ ಮನೆ ಮುಂದೆ ನಿಲ್ಲುತ್ತಿದೆ. ಕೂಡಲೇ ಚರಂಡಿ ನಿರ್ಮಿಸಬೇಕು.
ದೇವಪ್ಪ ನಾಗರೆಡ್ಡಿ ಸ್ಥಳೀಯ ಮುಖಂಡ
ಬಡಾವಣೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸುತ್ತೇನೆ. ಚರಂಡಿ ವ್ಯವಸ್ಥೆ ಇಲ್ಲದಿದ್ದರೆ ತಕ್ಷಣ ಕ್ರಿಯಾ ಯೋಜನೆ ರೂಪಿಸಿ ಅನುದಾನಕ್ಕೆ ಮನವಿ ಸಲ್ಲಿಸಲಾಗುವುದು.
ಫಕೃದ್ದೀನ್ ಸಾಬ್ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT