ಚಿತ್ತಾಪುರ: ತಾಲ್ಲೂಕಿನಾದ್ಯಂತ ಗುರುವಾರ ಧಾರಾಕಾರ ಮಳೆ ಸುರಿದಿದ್ದು, ಜನರಿಗೆ ತೀವ್ರ ತೊಂದರೆಯಾಗಿದೆ.
ಸುರಿಯುವ ಮಳೆಯಲ್ಲಿ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ವಿದ್ಯಾರ್ಥಿಗಳು ಪರದಾಡಿದರು. ಬೆಳಿಗ್ಗೆ ಪಟ್ಟಣದಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತಾ ಸಾಗಿದರು. ಕೆಲವರು ಕೊಡೆ ಬಳಸಿದರೆ, ಕೆಲವರು ಪ್ಲಾಸ್ಟಿಕ್ ಚೀಲ, ಕರವಸ್ತ್ರ ತಲೆಗೆ ಹಾಕಿಕೊಂಡು ತೆರಳಿದರು. ಶಾಲೆ ಬಿಟ್ಟ ನಂತರ ಅದೇ ಪರಿಸ್ಥಿತಿಯಲ್ಲಿ ಮನೆಗೆ ಮರಳಿದರು.
ಪಟ್ಟಣದಲ್ಲಿರುವ ಶಾಲಾ ಕಾಲೇಜುಗಳಿಗೆ ದಂಡೋತಿ, ಮಲಕೂಡ, ತೊನಸನಹಳ್ಳಿ, ಇವಣಿ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಬಂದು, ಹೋಗುತ್ತಾರೆ.
ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿವೆ. ಹೊಲಗದ್ದೆಗಳು ಮಳೆ ನೀರಿನಿಂದ ಆವೃತವಾಗಿವೆ. ತಗ್ಗು ಪ್ರದೇಶದಲ್ಲಿನ ಹೆಸರು, ಉದ್ದು, ತೊಗರಿ ಬೆಳೆಗೆ ಹಾನಿಯಾಗಿದೆ. ಭೂಮಿಯಲ್ಲಿ ತೇವಾಂಶ ಅಗತ್ಯಕ್ಕಿಂತ ಹೆಚ್ಚಾಗಿದ್ದರಿಂದ ಮುಂಗಾರು ಬೆಳೆಗಳ ಬೇರು ಕೊಳೆತು ಬೆಳೆ ಹಾನಿಯ ಪ್ರಮಾಣ ಹೆಚ್ಚಾಗುತ್ತದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.
ಶಾಲೆಗಳಿಗೆ ರಜೆ ಇಲ್ಲ: ಮಳೆಯಾಗುತ್ತಿರುವ ಕುರಿತು ತಹಶೀಲ್ದಾರ್ ಮತ್ತು ಸೇಡಂ ಉಪ ವಿಭಾಗದ ಅಧಿಕಾರಿಯೊಂದಿಗೆ ಚರ್ಚೆ ಮಾಡಲಾಗಿದೆ. ಶಾಲೆಗಳಿಗೆ ರಜೆ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.