ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ– ₹50 ಲಕ್ಷ ಸುರಿದರೂ ಬಾಯ್ತೆರೆದ ಗುಂಡಿಗಳು!

Last Updated 29 ನವೆಂಬರ್ 2022, 16:27 IST
ಅಕ್ಷರ ಗಾತ್ರ

ಕಲಬುರಗಿ: ಸತತ ಮಳೆ, ಅಸಮರ್ಪಕ ಚರಂಡಿ, ಅವೈಜ್ಞಾನಿಕ ಕಾಮಗಾರಿ, ಪಾಲಿಕೆಯ ಅಧಿಕಾರಿಗಳ ವೈಫಲ್ಯದಿಂದಾಗಿ ನಗರದ ರಸ್ತೆಗಳ ಗುಂಡಿಗಳಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ.

ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾದ ಕಲಬುರಗಿ ನಗರವು ಸಾಲು ಸಾಲು ಗುಂಡಿಗಳ ತಾಣವಾಗಿದೆ. ಕೇಂದ್ರ ಸ್ಥಾನದ ನಗರದ ರಸ್ತೆ ಗುಂಡಿಗಳೇ ಮೃತ್ಯುಕೂಪಗಳಂತೆ ಇರುವಾಗ, ಗ್ರಾಮೀಣ ಭಾಗದ ರಸ್ತೆಗಳು ಗತಿ ಹೇಗೆ ಎಂಬುದು ಇಲ್ಲಿನ ನಿವಾಸಿಗಳ ಪ್ರಶ್ನೆ!

ನಗರದ ಕೇಂದ್ರ ಬಸ್ ನಿಲ್ದಾಣ ರಸ್ತೆ, ಜಿಲ್ಲಾಧಿಕಾರಿ ಕಚೇರಿ– ಕೆಕೆಆರ್‌ಡಿಬಿ–ಐವಾನ್‌–ಎ–ಶಾಹಿ ರಸ್ತೆ, ಶರಣಬಸವೇಶ್ವರ ದೇವಸ್ಥಾನ ರಸ್ತೆ, ಮಾರ್ಕೆಟ್ ರಸ್ತೆ, ಹೈಕೋರ್ಟ್ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರು.ಅಗ್ನಿಶಾಮಕ ರಸ್ತೆಯಿಂದ ಲಾಲಗೇರಿ ಕ್ರಾಸ್‌ವರೆಗೂ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಗಳು ಸಹ ತಗ್ಗುಗಳಿಂದ ಬಾಯಿ ತೆರೆದಿವೆ. ಈ ರಸ್ತೆಗಳಲ್ಲಿ ಸಂಚರಿಸುವಾಗ ಸ್ವಲ್ಪವೇ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಸ್ಥಿತಿ ಇದೆ.

‘ಮಳೆಯಿಂದಾಗಿ ಪದೇ ಪದೇ ಗುಂಡಿಗಳು ಬೀಳುತ್ತವೆ. ಮಳೆಯು ರಸ್ತೆ ಗುಂಡಿ ಮುಚ್ಚಲು ತೊಡಕಾಗಿತ್ತು. ಈಗ ನಿತ್ಯ 4–5 ಬ್ಯಾರೆಲ್ ಟಾರ್ ಹಾಕುವ ಕಾರ್ಯ ನಡೆಯುತ್ತಿದೆ. ಪ್ರಮುಖ ರಸ್ತೆಗಳ ಡಾಂಬರೀಕರಣಕ್ಕೂ ಟೆಂಡರ್ ಕರೆಯಲಾಗಿದೆ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

‘ಗುಂಡಿಗಳ ಸೃಷ್ಟಿಗೆ ಮಳೆಯತ್ತ ಬೆರಳು ತೋರುವ ‍ಪಾಲಿಕೆಯ ಅಧಿಕಾರಿ
ಗಳು ಕಾಮಗಾರಿಗಳ ಗುಣಮಟ್ಟ, ಗುತ್ತಿಗೆದಾರರ ಬಗ್ಗೆ ಏಕೆ ಚಕ್ಕಾರ ಎತ್ತುವುದಿಲ್ಲ? ಇಲ್ಲದ ನೆಪ ಹೇಳಿ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಿದ್ದಾರೆ. ಮಳೆ ನಿಂತು ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುತ್ತಿದೆ. ಆದರೆ, ಮತ್ತೆ ಮಳೆ ಬಂದಾಗ ಮುಚ್ಚಿದ ಗುಂಡಿಗಳು ಪುನಃ ಬಾಯಿತೆರೆಯುವುದು ಮಳೆ ನೀರು ನುಂಗಲೋ, ಸವಾರರ ರಕ್ತ ಕುಡಿಯಲೋ’ ಎಂದು ಪ್ರಶ್ನಿಸುತ್ತಾರೆ ಬೈಕ್ ಸವಾರ ಅನಿಲ್‌ಕುಮಾರ್.

‘ಕಲಬುರಗಿ ನಗರದ ರಸ್ತೆಗಳ ಮೇಲಿನ ಗುಂಡಿ ಮುಚ್ಚಲು ಮಹಾನಗರ ಪಾಲಿಕೆಯು ವಾರ್ಷಿಕವಾಗಿ ₹50 ಲಕ್ಷ ತೆಗೆದಿರಿಸಿ, ಖರ್ಚು ಮಾಡುತ್ತಿದೆ. ಇಷ್ಟೆಲ್ಲಾ ದುಡ್ಡು ಸುರಿದ ಬಳಿಕವೂ ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ? ಆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗುವುದು ಸಹಜ. ಈ ಕುರಿತು ತನಿಖೆ ಆಗಬೇಕಿದೆ ಎನ್ನುತ್ತಾರೆ ನಗರದ ನಿವಾಸಿಗಳು.

‘ಡಾಂಬಾರು ಖರೀದಿಗೆ ₹35 ಲಕ್ಷ ಮೀಸಲು’

‘ರಸ್ತೆಗಳ ಗುಂಡಿ ಮುಚ್ಚಲು ಟಾರ್ ಖರೀದಿಗೆ ₹35 ಲಕ್ಷ ಹಾಗೂ ₹12 ಲಕ್ಷ ಇತರೆ ಸಾಮಗ್ರಿಗಳಿಗೆ ವ್ಯಯಿಸಲಾಗುತ್ತದೆ. ಮಾರ್ಚ್‌ನಿಂದ ಇಲ್ಲಿಯವರೆಗೆ ₹50 ಲಕ್ಷ ಖರ್ಚು ಮಾಡಲಾಗಿದೆ’ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ. ಜಾಧವ ತಿಳಿಸಿದರು.

‘ಟಾರ್ ಖರೀದಿಗೆ ಈಗ ₹25 ಲಕ್ಷ ಮೊತ್ತದ ಟೆಂಡರ್ ಕರೆಯಲಾಗಿದ್ದು, ಒಂದು ವಾರದೊಳಗೆ ಬರಬಹುದು. ಪಾಲಿಕೆಯ ಸಾಮಾನ್ಯ ನಿಧಿಯಿಂದ ₹3 ಲಕ್ಷ ಮೊತ್ತದ ಟಾರ್ ಖರೀದಿಸಿದ್ದು, ಅಗತ್ಯ ಬಿದ್ದರೇ ₹10–15 ಲಕ್ಷದವರೆಗೆ ತೆಗೆದುಕೊಳ್ಳುವ ಅವಕಾಶ ಇದೆ. ರಸ್ತೆ ಗುಂಡಿಗಳು ಮುಚ್ಚಲು ನಿತ್ಯ 4–5 ಬ್ಯಾರೆಲ್‌ ಟಾರ್ ಹಾಕಲಾಗುತ್ತಿದೆ’ ಎಂದರು.

‘ಮಳೆಯಿಂದಾಗಿ ಶಹಾಬಜಾರ್ ನಾಕಾ ಮತ್ತು ಆಳಂದ ಚಕ್‌ ಪೋಸ್ಟ್‌ವರೆಗಿನ ರಸ್ತೆಯ ಡಾಂಬರ್ ಕಿತ್ತುಹೋಗಿದ್ದು, ಮತ್ತೆ ಡಾಂಬರ್ ಹಾಕಲಾಗುವುದು. ಲಾಲಗೇರಿ ಕ್ರಾಸ್‌–ಶಹಾಬಜಾರ್ ನಾಕಾ ಮತ್ತು ಆಳಂದ ಚಕ್‌ ಪೋಸ್ಟ್‌ವರೆಗಿನ ರಸ್ತೆ ಕಾಮಗಾರಿ ಕೆಲಸ ಶೀಘ್ರವೇ ಆರಂಭಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿ– ಕೆಕೆಆರ್‌ಡಿಬಿ ಮಾರ್ಗದ ರಸ್ತೆ ಡಾಂಬರೀಕರಣ ಟೆಂಡರ್ ಕರೆದಾಗ ಯಾರೂ ಮುಂದೆ ಬರಲಿಲ್ಲ. 2ನೇ ಬಾರಿಗೆ ಟೆಂಡರ್ ಕರೆಯಲಾಗಿದೆ ನೀಡಿದರು.

*ಕಲ್ಯಾಣ ಕರ್ನಾಟದ ಅಭಿವೃದ್ಧಿಗೆ ₹3,000 ಕೋಟಿ ಅನುದಾನ ನೀಡಿದ್ದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ನಗರದ ರಸ್ತೆಗಳ ಗುಂಡಿಗಳನ್ನೇ ಮುಚ್ಚಲು ಆಗುತ್ತಿಲ್ಲ. ಅನುದಾನ ಎಲ್ಲಿಗೆ ಹೋಗುತ್ತದೆ?

-ಲಿಂಗರಾಜ ಎಸ್. ತಾರಫೈಲ್, ರಾಜ್ಯಾಧ್ಯಕ್ಷ, ದಲಿತ ಮಾದಿಗ ಸಮನ್ವಯ ಸಮಿತಿ

*ರಸ್ತೆ ಗುಂಡಿಗಳಿಗೆ ಬಿದ್ದ ವಾಹನಗಳಿಂದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ವಾಹನಗಳ ಬಾಳಿಕೆ ಅವಧಿ ಸಹ ತಗ್ಗುತ್ತಿದೆ. ವಾಹನಗಳನ್ನು ಸಹ ಪದೇ ಪದೇ ದುರಸ್ತಿಗೆ ಬರುತ್ತಿವೆ
-ಮಂಜುನಾಥ ಜೆ. ಬಬಲಾದ, ರಾಜ್ಯಾಧ್ಯಕ್ಷ, ವಾಹನ ವಾಲಕ ಮಾಲಕ ಸಾಮಾಜಿಕ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT