ಕಲಬುರಗಿ: ತಾಲ್ಲೂಕಿನ ಭೀಮಾ ನದಿ ತೀರದ ಸರಡಗಿ ಗ್ರಾಮದಲ್ಲಿ ಪ್ರವಾಹ ಸಂದರ್ಭದಲ್ಲಿ ಜನರ ಕ್ಷಣೆಗಾಗಿ ನಡೆಸಲಾಗುವ ಕಾರ್ಯಚರಣೆಯ ಅಣಕು ಪ್ರದರ್ಶನ ಮಂಗಳವಾರ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಗ್ನಿ ಶಾಮಕದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ (ಎನ್‌ಡಿಆರ್‌ಎಫ್) ತಂಡ, ರಾಜ್ಯ ವಿಪತ್ತು ನಿರ್ವಹಣಾ (ಎಸ್‌ಡಿಆರ್‌ಎಫ್) ತಂಡ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಪ್ರವಾಹದ ಸಂದರ್ಭದಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳು, ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದವು.
ನದಿಯಲ್ಲಿ ಸಿಲುಕಿದವರನ್ನು ರಕ್ಷಿಸಿ ನದಿಯಿಂದ ಹೊರ ತಂದು ಪ್ರಥಮ ಚಿಕಿತ್ಸೆ ಕೊಡಿಸುವುದು, ನದಿಯಲ್ಲಿ ಮುಳುಗುತ್ತಿದ್ದವರನ್ನು ಲೈಪ್ ಜಾಕೆಟ್ ಎಸೆದು ಹೊರ ತರುವುದು, ನದಿಯ ಪ್ರವಾಹಕ್ಕೆ ಸಿಲುಕಿ ಗಾಯಗೊಂಡವರನ್ನು ಸ್ಟ್ರೆಚರ್ ತಂದು ಚಿಕಿತ್ಸೆ ಕೊಡಿಸುವಂತಹ ಅಣಕು ಪ್ರದರ್ಶನಗಳು ನಡೆದವು.
ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ವ್ಯಕ್ತಿಗಳು ಮುಳುಗುತ್ತಿರುವ ಸಮಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ಒಬಿಎಂ ದೋಣಿಯಲ್ಲಿ ರಕ್ಷಣೆ ಮಾಡಿ, ನದಿ ದಡದಿಂದ ಎತ್ತಿಕೊಂಡು ಹೊರ ಬರುತ್ತಿದ್ದ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಈಶಾನ್ಯ ವಲಯ ಐಜಿಪಿ, ಪ್ರಭಾರ ಪೊಲೀಸ್ ಕಮಿಷನರ್ ಅಜಯ್ ಹಿಲೋರಿ, ಎಸ್‌ಡಿಆರ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಗುರುನಾಥ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬೋಟ್ ಏರಿ ವೀಕ್ಷಣೆ ಮಾಡಿದರು. ನದಿಯ ಆಚೆ ದಡದಲ್ಲಿ ನೀರಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಣೆ ಮಾಡಿದ ಪ್ರಾತ್ಯಕ್ಷಿಕೆಯೂ ನಡೆಸಿದರು.